ADVERTISEMENT

Mysuru Dasara: ಗೇಟ್‌ ತಳ್ಳಿ ರಸ್ತೆಯಲ್ಲಿ ಓಡಾಡಿದ್ದ ದಸರಾ ಆನೆಗಳು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 0:38 IST
Last Updated 22 ಸೆಪ್ಟೆಂಬರ್ 2024, 0:38 IST
   

ಮೈಸೂರು: ಇಲ್ಲಿನ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ಗೇಟ್‌ನಲ್ಲಿ ಬ್ಯಾರಿಕೇಡ್‌ ತಳ್ಳಿ ಹೊರಬಂದು, ಮೈಸೂರು– ಊಟಿ ರಸ್ತೆಯಲ್ಲಿ ಓಡಾಡಿ ಜನರಲ್ಲಿ ಆತಂಕ ಮೂಡಿಸಿದ್ದ ದಸರಾ ಆನೆಗಳಾದ ‘ಧನಂಜಯ’ ಹಾಗೂ ‘ಕಂಜನ್‌’ ಶನಿವಾರ ಬೆಳಿಗ್ಗೆ ಮತ್ತು ಸಂಜೆ ತಾಲೀಮಿನಲ್ಲಿ ಭಾಗವಹಿಸಿದವು. ‘ವರಲಕ್ಷ್ಮಿ’ ಆನೆ ಬಿಟ್ಟು ಉಳಿದ 13 ಆನೆಗಳಿಗೂ ತಾಲೀಮು ನೀಡಲಾಯಿತು.

ಶುಕ್ರವಾರ ರಾತ್ರಿ ನಡೆದ ಘಟನೆಯಿಂದ ತೀವ್ರ ಆತಂಕ ಉಂಟಾಗಿತ್ತು. ಊಟದ ಸಮಯದಲ್ಲಿ ಎರಡೂ ಆನೆಗಳು ಜಗಳವಾಡಿದ್ದರಿಂದ ಅವುಗಳನ್ನು ಮಾವುತರು ಹಾಗೂ ಕಾವಾಡಿಗಳು ಅರಮನೆ ಆವರಣದೊಳಗೆ ನಿಯಂತ್ರಿಸುವುದು ಸಾಧ್ಯವಾಗಿರಲಿಲ್ಲ. ಧನಂಜಯ ಆನೆಯು ಕಂಜನ್‌ ಆನೆಯನ್ನು ಅಟ್ಟಾಡಿಸಿಕೊಂಡು ಬಂದಿತ್ತು. ಕಂಜನ್‌ ಘೀಳಿಡುತ್ತಾ ರಸ್ತೆಗೆ ಬಂದಿದ್ದ. ಆಗ ಅಲ್ಲಿ ಕೆಲವರಷ್ಟೆ ಇದ್ದರು. ಹೆಚ್ಚಿನ ವಾಹನಗಳೂ ಇರಲಿಲ್ಲ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ನಂತರ ಮಾವುತ ಹಾಗೂ ಕಾವಾಡಿಗಳು ಕೆಲವೇ ಹೊತ್ತಿನಲ್ಲಿ ಅವುಗಳನ್ನು ನಿಯಂತ್ರಿಸಿದರು.

ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಡಿಸಿಎಫ್‌ ಐ.ಬಿ.ಪ್ರಭುಗೌಡ, ‘ಸಿಬ್ಬಂದಿಯು ಧನಂಜಯಗೆ ಶುಕ್ರವಾರ ರಾತ್ರಿ ಆಹಾರ ನೀಡುತ್ತಿದ್ದಾಗ, ಹಿಂದಿನಿಂದ ಕಂಜನ್‌ ಬಂದಿದ್ದ. ಜಗಳ ಮಾಡಿದ ಧನಂಜಯ ಕಂಜನ್‌ನನ್ನು ದಂತದಿಂದ ದೂಡಿ, ಓಡಿಸಿಕೊಂಡು ಹೋಗಿದ್ದ. ಕಂಜನ್‌ ಓಡುವ ರಭಸಕ್ಕೆ ಮಾವುತ ಕೆಳಗೆ ಜಿಗಿದಿದ್ದ’ ಎಂದು ತಿಳಿಸಿದರು.

ADVERTISEMENT

‘ಇವು ದುಬಾರೆ ಶಿಬಿರದ ಆನೆಗಳು. ಅಲ್ಲಿಯೂ ಜಗಳವಾಡುತ್ತಿದ್ದವು. ಗಂಡಾನೆಗಳು ಶೌರ್ಯ ಪ್ರದರ್ಶಿಸುವುದು ಸಾಮಾನ್ಯ. ಅವುಗಳನ್ನು ನಿಯಂತ್ರಿಸಲು ನಮ್ಮ ತಂಡ ಸದಾ ಸನ್ನದ್ಧವಾಗಿರುತ್ತದೆ. ಅಗತ್ಯ ಪರಿಕರಗಳಿವೆ. ವೈದ್ಯರೂ ಇರುತ್ತಾರೆ. ಹೀಗಾಗಿ, ಆತಂಕಪಡುವ ಅಗತ್ಯವಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.