ADVERTISEMENT

ದಸರಾ: ಜಾನಪದ ಕಲಾವಿದರಿಗೆ ಸೌಲಭ್ಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 4:07 IST
Last Updated 26 ಸೆಪ್ಟೆಂಬರ್ 2024, 4:07 IST
<div class="paragraphs"><p>ಮೈಸೂರು ದಸರಾ</p></div>

ಮೈಸೂರು ದಸರಾ

   

(ಸಂಗ್ರಹ ಚಿತ್ರ)

ಮೈಸೂರು: ‘ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜಾನಪದ ಕಲಾವಿದರನ್ನು ಪ್ರತಿ ಬಾರಿ ಕಡೆಗಣಿಸಲಾಗುತ್ತಿದ್ದು, ಸಂಭಾವನೆ, ಸೌಲಭ್ಯಗಳ ಬಗ್ಗೆ ಚರ್ಚಿಸಬೇಕಿದ್ದ ಸಲಹೆ ಸೂಚನೆ ಸಭೆಗೆ ಈ ಬಾರಿಯೂ ಆಹ್ವಾನಿಸಿಲ್ಲ’ ಎಂದು ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ಜಾನಪದ ಕಲಾವಿದರ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದ್ದಾರೆ

ADVERTISEMENT

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಉಡಿಗಾಲ ಮಹದೇವಪ್ಪ ಮಾತನಾಡಿ, ‘ಜಾನಪದ ಕಲಾವಿದರನ್ನು ಯಾವುದೇ ಸಮಿತಿಗೆ ನೇಮಿಸದೇ ಅಧಿಕಾರಿಗಳು ತಮ್ಮ ಇಷ್ಟದಂತೆ ಕಾರ್ಯಕ್ರಮ ರೂಪಿಸುತ್ತಿದ್ದಾರೆ’ ಎಂದು ದೂರಿದರು.

‘ಜಾನಪದ ಕಲಾವಿದರಿಗೆ ಎರಡು ದಿನಕ್ಕೆ ತಲಾ ₹1,750 ಸಂಭಾವನೆ ನಿಗದಿ ಪಡಿಸಲಾಗಿದೆ. ವೇಷಭೂಷಣ, ಜಾನಪದ ಸಾಮಗ್ರಿ ಹೊತ್ತು ಬಾಡಿಗೆ ವಾಹನದಲ್ಲಿ ಬರುವ ನಮಗೆ ಸರಿಯಾಗಿ ಊಟ ತಿಂಡಿಯ ವ್ಯವಸ್ಥೆಯೂ ಇಲ್ಲ. ವಸತಿಗೆ ನೀಡುವ ಚೌಲ್ಟ್ರಿಗಳು ಕಳಪೆ ಸೌಲಭ್ಯ ಹೊಂದಿರುತ್ತವೆ. ಸಂಭಾವನೆಯಲ್ಲಿ ಏನೂ ಉಳಿಯುವುದಿಲ್ಲ. ಹೀಗಾಗಿ ಕನಿಷ್ಠ ತಲಾ ₹5,000 ನೀಡಬೇಕು’ ಎಂದು ಆಗ್ರಹಿಸಿದರು.

‘ವೇದಿಕೆಯಲ್ಲಿ ಹಾಡುವ ಕಲಾವಿದರಿಗೆ ಲಕ್ಷಾಂತರ ಮೊತ್ತ ನೀಡಿ ಕರೆಸಲಾಗುತ್ತದೆ. ಆದರೆ, ಜಾನಪದ ಕಲಾವಿದರ ಬಗ್ಗೆ ತಾರತಮ್ಯ ತೋರಲಾಗುತ್ತಿದೆ. ಅರಮನೆಯಿಂದ ಜಂಬೂಸವಾರಿಯಲ್ಲಿ ಹೊರಟ ಕಲಾವಿದರಿಗೆ ಈ ಹಿಂದೆ ಬನ್ನಿಮಂಟಪದಲ್ಲಿ ಖಾಸಗಿ ಆಯೋಜಕರಿಂದ ತಿಂಡಿ ವ್ಯವಸ್ಥೆ ಇರುತ್ತಿತ್ತು. ಈಗ ಅದು ನಿಂತಿದ್ದು, ಮತ್ತೆ ಅವಕಾಶ ಕಲ್ಪಿಸಬೇಕು. ಈ ಎಲ್ಲ ಬೇಡಿಕೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಗಮನ ಹರಿಸಬೇಕು’ ಎಂದು ಆಗ್ರಹಿಸಿದರು.

ಒಕ್ಕೂಟದ ಸದಸ್ಯರಾದ ಕಿರಾಳು ಮಹೇಶ್, ರೇವಣ್ಣ, ಶಿವಲಿಂಗಪ್ಪ, ಮಲ್ಲೇಶ್, ಪ್ರಭು ಹಾಗೂ ಕಂಸಾಳೆ ರವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.