ADVERTISEMENT

ಮೈಸೂರು ದಸರಾ ಡ್ರೋನ್‌ ಶೋ: 5 ಸಾವಿರ ಪಾಸ್‌

ಸಾರ್ವಜನಿಕರ ವೀಕ್ಷಣೆಗೂ ಅವಕಾಶ: ಮುನಿಗೋಪಾಲ್ ರಾಜು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 14:21 IST
Last Updated 5 ಅಕ್ಟೋಬರ್ 2024, 14:21 IST

ಮೈಸೂರು: ‘ಈ ಬಾರಿಯ ದಸರಾದಲ್ಲಿನ ವಿಶೇಷತೆಗಳಲ್ಲಿ ಒಂದಾದ ಡ್ರೋನ್‌ ಶೋಗೆ ಐದು ಸಾವಿರ ವಿವಿಐಪಿ ಪಾಸ್‌ ವಿತರಿಸಲಾಗುತ್ತಿದ್ದು, ಉಳಿದೆಡೆ ಸಾರ್ವಜನಿಕರಿಗೆ ಕುಳಿತು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ’ ಎಂದು ಸೆಸ್ಕ್ ತಾಂತ್ರಿಕ ವಿಭಾಗದ ನಿರ್ದೇಶಕ ಮುನಿಗೋಪಾಲ್ ರಾಜು ಮಾಹಿತಿ ನೀಡಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅ.6ರಂದು ರಾತ್ರಿ 1,500 ಡ್ರೋನ್‌ಗಳು ಬಾನಿನಲ್ಲಿ ಚಿತ್ತಾರ ಮೂಡಿಸಲಿವೆ. ಅಂದು ಮಳೆಯಾದರೂ ಮಳೆ ಬಿಟ್ಟ ಕೂಡಲೇ ಕಾರ್ಯಕ್ರಮ ಆರಂಭಿಸುತ್ತೇವೆ. ಅದಕ್ಕಾಗಿ ಪ್ರತ್ಯೇಕ ದಿನ ನಿಗದಿಪಡಿಸಿಲ್ಲ’ ಎಂದು ಹೇಳಿದರು.

‘ಈ ಬಾರಿ ಸ್ಥಳೀಯ ವಿನ್ಯಾಸಕಾರರನ್ನೇ ಬಳಸಿಕೊಂಡು ಭಿನ್ನವಾಗಿ ದೀಪಾಲಂಕಾರ ಮಾಡಲಾಗಿದೆ. ಕಳೆದ ವರ್ಷ ನೀಡಿದಷ್ಟೇ ಬಜೆಟ್‌ ಈ ಬಾರಿಯೂ ದೊರೆತಿದ್ದು, ಅದರಲ್ಲೇ ಹೆಚ್ಚು ಆಕರ್ಷಣೀಯವಾಗಿ ದೀಪಾಲಂಕಾರ ಮಾಡಿದ್ದೇವೆ. ಮಳೆ ಬರುತ್ತಿರುವುದರಿಂದ ಸಾರ್ವಜನಿಕರು ದೀಪಾಲಂಕಾರವನ್ನು ಮುಟ್ಟದೆ, ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ದೀಪಾಲಂಕಾರ ಉಪ ಸಮಿತಿಯ ಅಧ್ಯಕ್ಷ ಸೈಯದ್‌ ಇಕ್ಬಾಲ್‌ ಮಾತನಾಡಿ, ‘‌ದೀಪಾಲಂಕಾರವು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ದಸರೆಗೆ ಹೆಚ್ಚಿನ ಮೆರುಗು ನೀಡಿದೆ. ಸೆಸ್ಕ್‌ ನಗರವನ್ನೇ ಅರಮನೆಯಂತೆ ಅಲಂಕರಿಸಿದೆ. ಪದಾಧಿಕಾರಿಗಳ ನೇಮಕ ಆದೇಶವು ತಡವಾಗಿ ಕೈಸೇರಿತು. ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತೇವೆ’ ಎಂದು ತಿಳಿಸಿದರು.

ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕಿ ಶೀಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.