ADVERTISEMENT

ಮೈಸೂರು ದಸರಾ ಆಹಾರ ಮೇಳ: ₹1 ಲಕ್ಷ ಕೇಳಿದರೆ, ನಾವೆಲ್ಲಿ ಹೋಗಬೇಕು?

ಆದಿವಾಸಿ ಮುಖಂಡ ಕೃಷ್ಣಯ್ಯ ಅಳಲು; ಲಕ್ಷ್ಮೀಪುರಂ ಠಾಣೆಗೆ ದೂರು

ಮೋಹನ್‌ ಕುಮಾರ್‌ ಸಿ.
Published 14 ಅಕ್ಟೋಬರ್ 2023, 5:21 IST
Last Updated 14 ಅಕ್ಟೋಬರ್ 2023, 5:21 IST
<div class="paragraphs"><p>ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದ ಆಲದ ಮರದ ಬಳಿ ಬಂಬೂ ಬಿರಿಯಾನಿ, ಬಿದರಕ್ಕಿ ಪಾಯಸ ಸೇರಿದಂತೆ ಬುಡಕಟ್ಟು ಸಮುದಾಯದ ಆಹಾರ ಉಣಬಡಿಸುವ ಆದಿವಾಸಿ ಮುಖಂಡರು </p></div>

ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದ ಆಲದ ಮರದ ಬಳಿ ಬಂಬೂ ಬಿರಿಯಾನಿ, ಬಿದರಕ್ಕಿ ಪಾಯಸ ಸೇರಿದಂತೆ ಬುಡಕಟ್ಟು ಸಮುದಾಯದ ಆಹಾರ ಉಣಬಡಿಸುವ ಆದಿವಾಸಿ ಮುಖಂಡರು

   

–ಪ್ರಜಾವಾಣಿ ಚಿತ್ರ

ಮೈಸೂರು: ‘ದಸರಾ ಆಹಾರ ಮೇಳದಲ್ಲಿ ಮಳಿಗೆ ತೆರೆಯಲು ಅವಕಾಶ ನೀಡದೇ ಅಧಿಕಾರಿಗಳು ತೊಂದರೆ ನೀಡಿದ್ದಾರೆ. ಮಳಿಗೆ ಹಾಕಿಕೊಳ್ಳಲು ₹1 ಲಕ್ಷ ನೀಡಬೇಕಂತೆ. ಅಲ್ಲದೇ ಪೊಲೀಸ್‌ ಠಾಣೆಗೆ ದೂರು ನೀಡಿ ಮನಸ್ಸು ನೋಯಿಸಿದ್ದಾರೆ.’

ADVERTISEMENT

ಪ್ರಕೃತಿ ಆದಿವಾಸಿ ಫೌಂಡೇಶನ್ ಟ್ರಸ್ಟ್‌ ಅಧ್ಯಕ್ಷ, ಆದಿವಾಸಿ ಮುಖಂಡ ಕೃಷ್ಣಯ್ಯ ‘ಪ್ರಜಾವಾಣಿ’ ಜೊತೆ ಹೀಗೆ ಅಳಲು ತೋಡಿಕೊಂಡರು.

‘ಅನುಮತಿ ಇಲ್ಲದೇ ನಿಯಮ ಉಲ್ಲಂಘಿಸಿ ಆಹಾರ ಮೇಳದಲ್ಲಿ ಮಳಿಗೆ ತೆರೆದಿದ್ದಾರೆ ಎಂದು ಸಂಸ್ಥೆ ಹಾಗೂ ನಮ್ಮ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಲಕ್ಷ್ಮೀಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದೆ. 2014ರಿಂದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಮಳಿಗೆ ಹಾಕಿಕೊಳ್ಳುತ್ತಿದ್ದೇವೆ. ಅಂದಿನಿಂದಲೂ ಯಾರೂ ಬಾಡಿಗೆ ಕೇಳಿಲ್ಲ’ ಎಂದರು.

‘ಎಚ್‌.ಡಿ.ಕೋಟೆಯ ಮಹದೇಶ್ವರ ಕಾಲೊನಿ, ಅಂಕನಾಥಪುರ, ಬಸವನಗಿರಿ ಹಾಡಿ, ಹುಣಸೂರಿನ ಅಂಬೇಡ್ಕರ್‌ ನಗರ, ವೀರನಹೊಸಹಳ್ಳಿ, ಯಶೋಧರಪುರ, ಪಿರಿಯಾಪಟ್ಟಣದ ರಾಣಿಗೇಟು, ಆಯರಬೀಡು, ಹದಿನಾರು ಸೈಟು, ಅಬ್ಬಳತಿ, ಲಕ್ಷ್ಮೀಪುರದ 50 ಮಂದಿ ಹಾಡಿ ನಿವಾಸಿಗಳು ದಸರೆ ವೇಳೆ ಮೈಸೂರಿಗೆ ಬಂದು ಬುಡಕಟ್ಟು ಆಹಾರವನ್ನು ನಗರದವರಿಗೆ ಪರಿಚಯಿಸುತ್ತಿದ್ದಾರೆ. ಶೆಡ್‌ ಹಾಕಿಕೊಳ್ಳುವುದಕ್ಕೆ ₹2 ಲಕ್ಷ ಬೇಕು. ಆಹಾರ ಸಾಮಗ್ರಿ ಖರೀದಿಸಲು ₹1 ಲಕ್ಷ ಬೇಕು. ಈಗ ಬಾಡಿಗೆ ₹1 ಲಕ್ಷ ಕೇಳಿದರೆ, ನಾವು ಎಲ್ಲಿಗೆ ಹೋಗಬೇಕು’ ಎಂದು ಪ್ರಶ್ನಿಸಿದರು.

‘ಸ್ಥಳಕ್ಕೆ ಆಗಮಿಸಿದ ಪೊಲೀಸರು ನಮ್ಮನ್ನು ಮಾತನಾಡಿಸಿ, ಅನುಮತಿ ಪಡೆದು ಮಳಿಗೆ ತೆರೆಯುವಂತೆ ಹೇಳಿದ್ದಾರೆ.  ಅರಣ್ಯ ರಕ್ಷಣೆಯಲ್ಲಿ ಕೈಜೋಡಿಸುವ ನಮಗೆ ವರ್ಷಕ್ಕೊಮ್ಮೆ ಆಹಾರ ಮೇಳಕ್ಕೆ ಬಂದರೂ ಬಾಡಿಗೆ ದರ ವಿಧಿಸುವುದು ಎಷ್ಟು ಸರಿ’ ಎಂದು ಭಾವುಕರಾದರು.

‘ಸ್ಥಳಕ್ಕೆ ಮುಡಾ ಎಇಇ ಸಂಪತ್‌ ಕುಮಾರ್‌ ಹಾಗೂ ಆಯುಕ್ತ ಜಿ.ಟಿ.ದಿನೇಶ್‌ ಕುಮಾರ್‌ ಅವರೂ ಬಂದಿದ್ದರು. ಆದಿವಾಸಿಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲು ಹೋದರೆ, ಆಹಾರ ಮೇಳ ಉಪಸಮಿತಿಯ ಕಾರ್ಯಾಧ್ಯಕ್ಷರೂ ಆದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಅವರಲ್ಲಿ ಕೇಳಿ ಎಂದರು. ಸಚಿವ ಮಹದೇವಪ್ಪ ಅವರಲ್ಲಿ ಮನವಿ ಸಲ್ಲಿಸುತ್ತೇವೆ’ ಎಂದರು.

‘2014ರಿಂದಲೂ ಶೆಡ್‌ ಹಾಕಿಕೊಳ್ಳುತ್ತಿದ್ದವು. ಹಿಂದೆ ಎರಡು ಸ್ಟಾಲ್ ಕೊಡುತ್ತಿದ್ದರು. ಬಾಡಿಗೆಯನ್ನೇನು ಕೇಳುತ್ತಿರಲಿಲ್ಲ. ಆಹಾರ ಮೇಳದಲ್ಲಿ ಬುಡಕಟ್ಟು ಸಮುದಾಯಗಳಾದ ಜೇನುಕುರುಬ, ಎರವ, ಸೋಲಿಗ, ಡೋಂಗ್ರಿ ಗ್ರೆಸಿಯಾ, ರಾಮನಗರದ ಇರುಳಿಗ ಜನರು ಬರುತ್ತಾರೆ. ಬಂದ ಲಾಭದಲ್ಲಿ ಹಂಚಿಕೊಳ್ಳುತ್ತೇವೆ. ಕಳೆದ ದಸರೆಯಲ್ಲಿ ಏನೂ ಗಿಟ್ಟಲಿಲ್ಲ. 2019ರಲ್ಲಿ ₹1 ಲಕ್ಷ ಲಾಭ ಇತ್ತು. ಅದರಿಂದ ಸಮುದಾಯದವರಿಗೆ ರಗ್ಗು, ಸೊಳ್ಳೆ ಪರದೆ ಕೊಟ್ಟಿದ್ದೆವು. ಲಾಭವನ್ನೂ ಸಮುದಾಯದವರಿಗೆ ಖರ್ಚು ಮಾಡುತ್ತೇವೆ. ಈಗ ನೋವಾಗಿದೆ. ನುಂಗಿಕೊಳ್ಳಬೇಕಷ್ಟೇ’ ಎಂದು ನಿಟ್ಟುಸಿರುಬಿಟ್ಟರು.

ಈ ಬಗ್ಗೆ ಪ್ರತಿಕ್ರಿಯೆಗೆ ‘ಪ್ರಜಾವಾಣಿ’ ಮುಡಾ ಆಯುಕ್ತರಿಗೆ ಕರೆ ಮಾಡಿದರೂ, ಸ್ವೀಕರಿಸಲಿಲ್ಲ.

ಬಂಬೂ ಬಿರಿಯಾನಿ, ಬಿದರಕ್ಕಿ ಪಾಯಸ: ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣಯ್ಯ, ‘ಬಂಬೂ ಬಿರಿಯಾನಿ, ಬಿದರಕ್ಕಿ ಪಾಯಸ, ಕಾಡಿನ ಸೊಪ್ಪು, ಗೆಣಸಿನಿಂದ ಮಾಡಿದ ತಿನಿಸು, ನಳ್ಳಿ ಸಾರು ಮುದ್ದೆ ಸೇರಿದಂತೆ ವಿವಿಧ ತಿನಿಸುಗಳನ್ನು ಆಹಾರ ಮೇಳದಲ್ಲಿ ನೀಡುತ್ತೇವೆ’ ಎಂದು ತಿಳಿಸಿದರು.

‌ಸುರೇಶ, ಸಂಜಯ, ನಾಗಮ್ಮ, ಕೃಷ್ಣ ಇದ್ದರು.

ಅವಕಾಶ ನೀಡಲು ಕ್ರಮ: ಸಚಿವ

‘ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದ ಮರದ ಕೆಳಗೆ ಬಂಬೂ ಬಿರಿಯಾನಿ ಮಾಡುತ್ತಿರುವ ಆದಿವಾಸಿಗಳ ಸಮಸ್ಯೆ ಗಮನಕ್ಕೆ ಬಂದಿದೆ. ಅವರು ಪ್ರತಿ ವರ್ಷವೂ ಬರುತ್ತಾರೆ. ಅವರಿಗೆ ಅವಕಾಶ ನೀಡಲು ಕ್ರಮವಹಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು. ‘ಪೊಲೀಸರ ಮೂಲಕ ಆದಿವಾಸಿಗಳಿಗೆ ಬೆದರಿಕೆ ಹಾಕುವುದು ಎಷ್ಟು ಸರಿ’ ಎಂಬ ಸುದ್ದಿಗಾರರ ಪ್ರಶ್ನೆಗೆ ‘ಅವರು ಮಳಿಗೆ ಹಾಕುತ್ತಿರುವುದು ಹೊಸತೇನಲ್ಲ. ಸಣ್ಣ–ಪುಟ್ಟದ್ದಾಗಿದೆ. ನಾವು ಸರಿ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.