ಮೈಸೂರು: ದಸರಾ ಜಂಬೂಸವಾರಿಗೆ ಮತ್ತಷ್ಟು ಮೆರುಗು ನೀಡುವ ಸ್ತಬ್ಧ ಚಿತ್ರಗಳ ಪ್ರದರ್ಶನಕ್ಕೆ ಚುರುಕಿನ ತಯಾರಿ ನಡೆಯುತ್ತಿದೆ. ಈ ಬಾರಿ 40ರಿಂದ 42 ಸ್ತಬ್ಧ ಚಿತ್ರಗಳಿಗೆ ಮಾತ್ರ ಅವಕಾಶ ನೀಡುವ ಮೂಲಕ ಸಾರ್ವಜನಿಕರಿಗೆ ಪ್ರದರ್ಶನ ವೀಕ್ಷಣೆಗೆ ಹೆಚ್ಚು ಸಮಯಾವಕಾಶ ದೊರಕಿಸಲು ದಸರಾ ಸ್ತಬ್ಧ ಚಿತ್ರ ಉಪ ಸಮಿತಿ ಚಿಂತನೆ ನಡೆಸಿದೆ.
ಈ ಬಾರಿಯ ವಿಶೇಷತೆಯಾಗಿ ಮೈಸೂರಿನ ಸಂಸ್ಥೆಗಳು ಸ್ತಬ್ಧಚಿತ್ರ ಪ್ರದರ್ಶನ ಮಾಡುತ್ತಿದ್ದು, ಮೈಸೂರು ಸಿಲ್ಕ್, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ಸಿಎಫ್‌ಟಿಆರ್‌ಐ, ಕೆಎಂಎಫ್‌ನ ಮೈಮುಲ್, ರೈಲ್ವೆ ವಿಭಾಗ ಮತ್ತು ಜಂಗಲ್ ರೆಸಾರ್ಟ್ ಸಂಸ್ಥೆಗಳು ತಮ್ಮ ಇತಿಹಾಸ ಪರಿಚಯಿಸಲಿವೆ.
‘ಕರ್ನಾಟಕ ಸಂಭ್ರಮ 50’ ಲೋಗೊವನ್ನು ಎಲ್ಲ ಸ್ತಬ್ಧ ಚಿತ್ರಗಳಲ್ಲೂ ಬಳಸಲಿದ್ದು, ರಾಜ್ಯದ 31 ಜಿಲ್ಲೆಗಳನ್ನು ಪರಿಚಯಿಸುವ ಸ್ತಬ್ಧ ಚಿತ್ರಗಳು ಆಗಮಿಸಲಿವೆ. ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕನ್ನಡ ನಾಡು, ನುಡಿಗಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವಂತೆ, ಅಲ್ಲಿನ ವಿಶೇಷತೆ ಸಾರುವಂತೆ ಸೂಚಿಸಲಾಗಿದೆ. ಪ್ರಜಾಪ್ರಭುತ್ವ, ಭ್ರಾತೃತ್ವ, ಸಮಾನತೆ, ಸೌಹಾರ್ದತೆ ತೋರುವ ಚಿತ್ರಗಳೂ ಸಿದ್ಧಗೊಳ್ಳಲಿದೆ.
‘ಕಳೆದ ಬಾರಿ 49 ಸ್ತಬ್ಧ ಚಿತ್ರಗಳು ಹಾಗೂ ಅಷ್ಟೇ ಪ್ರಮಾಣದ ಕಲಾತಂಡಗಳು ಭಾಗವಹಿಸಿದ್ದು, ಕಲಾವಿದರಿಗೆ ವೇಗವಾಗಿ ಪ್ರದರ್ಶನ ನೀಡುವ ಅನಿವಾರ್ಯತೆ ಎದುರಾಗಿತ್ತು. ಸಾರ್ವಜನಿಕರಿಗೂ ವೀಕ್ಷಣೆಗೆ ಸಮಯ ಸಾಲದಾಗಿತ್ತು. ಈ ಬಾರಿ ಹಾಗಾಗದಂತೆ ಸೂಕ್ತ ಯೋಜನೆ ಮಾಡಲಾಗುತ್ತಿದ್ದು, ಸ್ತಬ್ಧ ಚಿತ್ರಗಳಿಗೆ ಮಿತಿ ಹೇರಿ ಪ್ರದರ್ಶನ ಸಮಯಕ್ಕೆ ಆದ್ಯತೆ ನೀಡಲಾಗುತ್ತದೆ’ ಎಂದು ಸಮಿತಿ ಉಪ ವಿಶೇಷಾಧಿಕಾರಿ ಪ್ರಭುಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಲ್ಲ ಜಿಲ್ಲೆಗಳ ಆಡಳಿತ ಕಚೇರಿಯು ಹಾಗೂ ಕೆಲ ಇಲಾಖೆಗಳು ತಾವು ಪ್ರಸ್ತುತ ಪಡಿಸಲಿರುವ ಮಾದರಿಗಳನ್ನು ಉಪಸಮಿತಿಗೆ ಕಳುಹಿಸಿದ್ದಾರೆ. ಕಳೆದ 3 ವರ್ಷಗಳ ಸ್ತಬ್ಧ ಚಿತ್ರದ ಪರಿಕಲ್ಪನೆ ಮರುಕಳಿಸದಂತೆ ನೋಡಿಕೊಳ್ಳುತ್ತಿದ್ದೇವೆ. ಕೆಲ ಜಿಲ್ಲೆಗಳಿಂದ ಬಂದ ಪ್ರಸ್ತಾವ ಮರುಕಳಿಸುವಂತಿದ್ದು, ಬದಲಿ ಕಳಿಸುವಂತೆ ಸೂಚಿಸಲಾಗಿದೆ’ ಎಂದರು.
‘ಕಳೆದ ಬಾರಿ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಲಾಗಿತ್ತು. ಈ ಬಾರಿ ಅದನ್ನು ಪ್ರಮುಖವಾಗಿ ತೋರದೇ, ಕರ್ನಾಟಕ ಸುವರ್ಣ ಸಂಭ್ರಮ ವಿಜೃಂಭಿಸಲಾಗುವುದು. ಸಮಿತಿಯು ಈಗಾಗಲೇ 2 ಸಭೆ ನಡೆಸಿದ್ದು, ಸೆ.27ರಂದು ಮತ್ತೆ ಸಭೆ ಸೇರಿ ಸ್ತಬ್ಧ ಚಿತ್ರಗಳ ಅಂತಿಮ ಪಟ್ಟಿ ಸಿದ್ಧಗೊಳಿಸಲಿದೆ. ಆಯಾ ಜಿಲ್ಲಾಡಳಿತ, ಸಂಸ್ಥೆಗಳು ಖರ್ಚು ನಿಭಾಯಿಸಲಿದ್ದು, ಇನ್ನೂ ಅನುದಾನ ಬಿಡುಗಡೆಯಾಗಿಲ್ಲ’ ಎಂದು ಮಾಹಿತಿ ನೀಡಿದರು.
ಸಮಿತಿಯಿಂದ ವಿಶೇಷ ಪ್ರದರ್ಶನ: ‘ವಿಶೇಷ ಸ್ತಬ್ಧ ಚಿತ್ರ ಪ್ರದರ್ಶಿಸುವ ಉದ್ದೇಶದಿಂದ ಸಮಿತಿಯು ಉತ್ತಮ ಮಾದರಿ ನೀಡುವಂತೆ ಸಾರ್ವಜನಿಕಗೆ ಆನ್‌ಲೈನ್ ಮೂಲಕ ಆಹ್ವಾನ ನೀಡಲಾಗಿದೆ. ಆಯ್ಕೆಯಾದ 2 ಅಥವಾ 3 ಉತ್ತಮ ಸ್ತಬ್ಧಚಿತ್ರ ಮಾದರಿಗೆ ₹50 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಒಂದನ್ನು ಪ್ರದರ್ಶಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಸೆ.27ರಂದು ಸ್ತಬ್ಧ ಚಿತ್ರಗಳ ಪಟ್ಟಿ ಅಂತಿಮ ಸಾರ್ವಜನಿಕರು ನೀಡಿದ ಸ್ತಬ್ಧ ಚಿತ್ರ ಮಾದರಿಯೂ ಪ್ರದರ್ಶನ ಕಳೆದ 3 ವರ್ಷಗಳ ಸ್ತಬ್ಧ ಚಿತ್ರ ಮರುಕಳಿಸದಂತೆ ಸೂಚನೆ
ಸ್ತಬ್ಧ ಚಿತ್ರಗಳಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ವಿಜೃಂಭಿಸಲಾಗುವುದು. ಕಲಾ ಪ್ರದರ್ಶನಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುವುದು.ಪ್ರಭುಸ್ವಾಮಿ ಉಪ ವಿಶೇಷಾಧಿಕಾರಿ ದಸರಾ ಸ್ತಬ್ಧ ಚಿತ್ರ ಉಪ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.