ADVERTISEMENT

Mysuru Dasara: 12 ಸೆಕೆಂಡ್‌ನಲ್ಲಿ ಮುಗಿದ ವಜ್ರಮುಷ್ಟಿ ಕಾಳಗ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2023, 8:18 IST
Last Updated 24 ಅಕ್ಟೋಬರ್ 2023, 8:18 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮೈಸೂರು: ಅಂಬಾವಿಲಾಸ ಅರಮನೆಯಲ್ಲಿ ವಿಜಯದಶಮಿ ಪ್ರಯುಕ್ತ ಮಂಗಳವಾರ ಜಟ್ಟಿಗಳ ವಜ್ರಮುಷ್ಟಿ ಕಾಳಗ ರೋಚಕತೆಯಿಂದ ಕೂಡಿದ್ದಲ್ಲದೆ, ಎಲ್ಲರ ಮೈ ನವಿರೇಳಿಸಿತು.

10.45ಕ್ಕೆ ಎರಡು ಜೋಡಿಗಳೂ ಅಖಾಡಕ್ಕೆ ಇಳಿದವು. ಇಡೀ ದೇಹಕ್ಕೆ ಮಣ್ಣು ಬಳಿದುಕೊಂಡಿದ್ದ ಜಟ್ಟಿಗಳು, ಕಾಳಗಕ್ಕೆ ಸಿದ್ದಗೊಂಡಿದ್ದರು. ಚನ್ನಪ್ಪಟ್ಟಣ ಪ್ರವೀಣ್ ಜಟ್ಟಿ ವಿರುದ್ಧ ಮೈಸೂರಿನ ಪ್ರದೀಪ್ ಜಟ್ಟಿ, ಬೆಂಗಳೂರಿನ ಪ್ರಮೋದ್ ಜಟ್ಟಿ ವಿರುದ್ಧ ಚಾಮರಾಜನಗರದ ವೆಂಕಟೇಶ್ ಜಟ್ಟಿ ಸೆಣಸಾಟ ನಡೆಸಿದರು.

ADVERTISEMENT

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಲ್ಯಾಣಮಂಟಪದಲ್ಲಿ ಪಟ್ಟದ ಕತ್ತಿಗೆ ಪೂಜೆ‌ ಸಲ್ಲಿಸುತ್ತಿದ್ದಂತೆ 11.20ಕ್ಕೆ ಕಾಳಗವು ಆರಂಭವಾಯಿತು.

ಪ್ರವೀಣ್ ಜೆಟ್ಟಿ ಅವರು ಮೈಸೂರಿನ ಪ್ರದೀಪ್ ಜೆಟ್ಟಿ ಅವರ ತಲೆಯಲ್ಲಿ 12 ಸೆಕೆಂಡ್‌ನಲ್ಲೇ ರಕ್ತ ಚಿಮ್ಮಿಸಿದರು. ಗಂಟೆಗಟ್ಟಲೇ ಕಾಳಗ ನೋಡಲು ಕಾತರರಾಗಿದ್ದ ಜನರು ಕೆಲವೇ ಕ್ಷಣಗಳ ಹೋರಾಟವನ್ನು ಕಣ್ತುಂಬಿಕೊಂಡರು.

ನಿಮಿಷದೊಳಗೆ ಎರಡೂ ಜೋಡಿಗಳ ಕಾಳಗವು ಮುಗಿಯಿತು. ಯದುವೀರ ಅವರು ವಿಜಯಯಾತ್ರೆಗೆ ತೆರಳಲು ಕಲ್ಯಾಣಮಂಟಪದ ದ್ವಾರಕ್ಕೆ ಬರುತ್ತಿದ್ದಂತೆ ಜಟ್ಟಿ‌ಜೋಡಿಗಳು ಶಿರಭಾಗಿ‌ ನಮಸ್ಕರಿಸಿದರು. ಕರ್ನಾಟಕ ಪೊಲೀಸ್‌ ಬ್ಯಾಂಡ್‌ ‘ಸಾರೇ ಜಹಾಂಸೇ ಅಚ್ಚಾ’ ನುಡಿಸಿದರು. ವಿಜಯಯಾತ್ರೆಗೆ ತೆರಳುವ ಮುನ್ನ ಮೈಸೂರು ಸಂಸ್ಥಾನದ ಗೀತೆ ‘ಕಾಯೌ ಶ್ರೀ ಗೌರಿ, ಕರುಣಾ ಲಹರಿ’ ನುಡಿಸಿದರು.

ರಾಜವಂಶಸ್ಥರಿಗೆ ಹಾಗೂ ಚಾಮುಂಡೇಶ್ವರಿಗೆ ಜಯಕಾರಗಳು ಮೊಳಗಿದವು. ಕಾಳಗವನ್ನು ಪ್ರಮೋದಾದೇವಿ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ಗ್ಯಾಲರಿಗಳಿಂದ ವೀಕ್ಷಿಸಿದರು.

‘ವಜ್ರಮುಷ್ಟಿ ಕಾಳಗವು ಸೋಲು, ಗೆಲುವಿನ ಕಾಳಗವಲ್ಲ. ವಿಜಯದಶಮಿಯಂದು ನಾಡದೇವಿಗೆ ಸಂಪ್ರದಾಯದಂತೆ ರಕ್ತಾರ್ಪಣೆ ಸಲ್ಲಿಸಿ ತ್ಯಾಗ ಮಾಡುವುದಾಗಿದೆ’ ಎಂದು ಬಾಲಾಜಿ ಜೆಟ್ಟಿ 'ಪ್ರಜಾವಾಣಿ'ಗೆ ತಿಳಿಸಿದರು.

ಕಾಳಗ ಬಿಡಿಸುವ ದಶಬಂಧಿಗಳಾಗಿ ಟೈಗರ್ ಬಾಲಾಜಿ, ನಾಗರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.