ಮೈಸೂರು: ‘ದಸರಾ ಅಂಗವಾಗಿ ನಡೆಯುವ ವಸ್ತುಪ್ರದರ್ಶನ ಪ್ಲಾಸ್ಟಿಕ್ ಮುಕ್ತವಾಗಿ ನಡೆಸುತ್ತಿದ್ದು, ಏಕಬಳಕೆಯ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಹೇಳಿದರು.
ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪ್ರದರ್ಶನದ ಗೇಟ್ ಬಳಿ ಪರಿಶೀಲಿಸಿ ಪ್ಲಾಸ್ಟಿಕ್ ಚೀಲವಿದ್ದರೆ ವಾಪಸ್ ಪಡೆದು, ಬಟ್ಟೆ ಚೀಲವನ್ನು ಉಚಿತವಾಗಿ ನೀಡುತ್ತೇವೆ. ಸ್ವಯಂಸೇವಾ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಮಳಿಗೆಗಳಲ್ಲೂ ಪ್ಲಾಸ್ಟಿಕ್ ಬಳಸದಂತೆ ಸೂಚಿಸಿದ್ದೇವೆ’ ಎಂದರು.
‘ಅಕ್ಟೋಬರ್ 3ರಂದು ರಾತ್ರಿ 8ಕ್ಕೆ ವಸ್ತುಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಅದೇ ದಿನ ಸರ್ಕಾರದ ವಿವಿಧ ಇಲಾಖೆಗಳ 30 ಹಾಗೂ 153 ಖಾಸಗಿ ಮಳಿಗೆ ವೀಕ್ಷಣೆಗೆ ಮುಕ್ತವಾಗಲಿದೆ. ಮಕ್ಕಳಿಗೆ ₹20, ವಯಸ್ಕರಿಗೆ ₹35 ಪ್ರವೇಶ ದರ ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸುಮಾರು 10ರಿಂದ 15 ಸ್ಥಳಗಳಲ್ಲಿ ಏರ್‌ಪೋರ್ಟ್ ಮಾದರಿಯ ವಾಟರ್ ಕೌಂಟಿಂಗ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ. ಪ್ರವಾಸಿಗರನ್ನು ಆಕರ್ಷಿಸಲು ವಸ್ತು ಪ್ರದರ್ಶನದಲ್ಲಿ ದೀಪಾಲಂಕಾರ ಹೆಚ್ಚಿಸಲಾಗಿದೆ’ ಎಂದು ಹೇಳಿದರು.
‘ಪ್ರವಾಸಿಗರನ್ನು ಆಕರ್ಷಿಸಲು ಗುಲಾಬಿ ಹೂಗಳಿಂದ ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ. ವಸ್ತು ಪ್ರದರ್ಶನ ಆವರಣದ ಉದ್ಯಾನದಲ್ಲಿ ಹುಲ್ಲಿನ ಅಚ್ಚು ಪ್ರಾಣಿಗಳನ್ನು ರಚಿಸಲಾಗಿದ್ದು, ಅವು ಹೆಚ್ಚಿನ ಮೆರುಗು ತುಂಬಲಿವೆ’ ಎಂದು ನುಡಿದರು.
‘ಕಿನ್ನರ ದಸರಾ ಈ ಬಾರಿಯ ವಿಶೇಷತೆಯಾಗಿದ್ದು, ಅವರಿಗಾಗಿ ಇಂಟರಾಕ್ಟೀವ್ ಉದ್ಯಾನ, 3ಡಿ ತಂತ್ರಜ್ಞಾನವುಳ್ಳ ವರ್ಚುವಲ್ ಉದ್ಯಾನ ನಿರ್ಮಿಸಲಾಗಿದೆ. ಪ್ರವಾಸಿಗರಿಗೆ ಆವರಣದೊಳಗೆ ವಿವಿಧ ಸ್ಥಳಗಳಿಗೆ ಸಂಚರಿಸಲು ರಿಯಾಯಿತಿ ದರದಲ್ಲಿ ಮೂರು ಎಲೆಕ್ಟ್ರಾನಿಕ್ ಏಕೋ ವಾಹನಗಳ ಸೌಲಭ್ಯ ಕಲ್ಪಿಸಲಾಗಿದೆ’ ಎಂದರು.
‘ವಸ್ತು ಪ್ರದರ್ಶನ ನಡೆಯುವ 90 ದಿನ ಪ್ರತಿ ಭಾನುವಾರ ಚಲನಚಿತ್ರ ಕಲಾವಿದರಿಂದ ಮನರಂಜನಾತ್ಮಕ ಹಾಗೂ ಪ್ರತಿ ಶನಿವಾರ ಯುವ ಸಂಭ್ರಮದಲ್ಲಿ ಪ್ರದರ್ಶನ ನೀಡಿದ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದು ಹೇಳಿದರು.
ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ರುದ್ರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.