ಮೈಸೂರು: ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಶನಿವಾರ ಬೆಳಿಗ್ಗೆಯೇ ಬಂದು ರಸ್ತೆಯ ಇಕ್ಕೆಲಗಳಲ್ಲಿ ಕುಳಿತಿದ್ದ ಜನರು ಅಭಿಮನ್ಯು ಹೊತ್ತು ತಂದ ಅಂಬಾರಿ ಹಾಗೂ ಚಾಮುಂಡೇಶ್ವರಿ ತಾಯಿಯ ವಿಗ್ರಹ ಕಂಡು ಹರ್ಷೋದ್ಗಾರ ತೆಗೆದರು. ‘ಚಾಮುಂಡೇಶ್ವರಿ ತಾಯಿಗೆ ಜಯವಾಗಲಿ’ ಎಂಬ ಘೋಷಣೆ ಮೆರವಣಿಗೆ ಮಾರ್ಗದುದ್ದಕ್ಕೂ ಮಾರ್ದನಿಸಿತು.
ಬಲರಾಮ ದ್ವಾರದಿಂದ ಆರಂಭವಾಗಿ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಮುಂಜಾನೆಯಿಂದಲೇ ಜನ ತಂಡೋಪ ತಂಡವಾಗಿ ಬಂದು ಸೇರಿದ್ದರು. ಪಾಲಿಕೆಯು ಹಳೆಯ ಕಟ್ಟಡಗಳಿಗೆ ಪ್ರವೇಶ ನಿರ್ಬಂಧಿಸಿ ಕೆಲವೆಡೆ ಸಿಬ್ಬಂದಿ ನಿಯೋಜಿಸಿದ್ದರೂ, ಅಂಬಾರಿ ಆನೆ ಬರುತ್ತಿದ್ದಂತೆ ಕೆ.ಆರ್. ವೃತ್ತ ಹಾಗೂ ಆಯುರ್ವೇದ ಆಸ್ಪತ್ರೆ ವೃತ್ತದ ಸುತ್ತಲೂ ಇರುವ ಕಟ್ಟಡಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು. ಅರಮನೆ ಮುಂಭಾಗ, ಕೆ.ಆರ್. ಆಸ್ಪತ್ರೆ ಆವರಣದ ಮರದ ಕೊಂಬೆಗಳಲ್ಲೂ ಹಲವರು ಕುಳಿತಿದ್ದರು. ನಗರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಪೊಲೀಸ್ ಬಸ್ ಏರಿದರು.
ತೀವ್ರ ಶಿಥಿಲಾವಸ್ಥೆಯಲ್ಲಿರುವ ಲ್ಯಾನ್ಸ್‌ಡೌನ್ ಕಟ್ಟಡದ ಮೇಲೆ, ನೂರಾರು ಮಂದಿ ಅಪಾಯವನ್ನೂ ಲೆಕ್ಕಸದೆ ಏರಿದ್ದರು.
ಜನರಿಗೆ ಹಾಗೂ ಸ್ವಯಂ ಸೇವಕರಿಗೆ ವಾಸವಿ ಯುವ ಸಂಘ, ವಿದ್ಯುತ್ ಗುತ್ತಿಗೆದಾರ ಸಂಘ, ಬೆಂಗಳೂರಿನ ಜೀವನ್ ಮುಕ್ತಿ ಫೌಂಡೇಷನ್, ಫುಟ್‌ಪಾತ್ ವ್ಯಾಪಾರಿಗಳ ತಂಡ, ಸೀರವಿ ಸಮಾಜದ ತಂಡವು ನೀರು, ಚಾಕೋಲೆಟ್, ಸೌತೆಕಾಯಿ, ಮಜ್ಜಿಗೆ ನೀರು ವಿತರಿಸಿದವು.
ಶಾಮಿಯಾನ: ಕೆಲವೆಡೆ ಕಟ್ಟಡದ ಮಹಡಿಯಲ್ಲಿ ಶಾಮಿಯಾನ ಹಾಕಿ ಮೆರವಣಿಗೆ ವೀಕ್ಷಿಸಲು ವ್ಯವಸ್ಥೆ ಮಾಡಿದ್ದರು. ಆರಂಭದಲ್ಲಿ ಬಿಸಿಲಿನ ತಾಪವಿದ್ದರೆ, ನಿಶಾನೆ ಆನೆ ಧನಂಜಯ ಅರಮನೆ ಆವರಣದಿಂದ ಹೊರಗೆ ಹೆಜ್ಜೆಯಿಡುತ್ತಿದ್ದಂತೆ ಸುರಿದ ಮಳೆ ತಂಪೆರೆಯಿತು. ಮಳೆಯನ್ನೂ ಲೆಕ್ಕಿಸದೆ ಸಾಗುತ್ತಿದ್ದ ಆನೆಗಳನ್ನು ನೋಡಿ ಜನರ ಉತ್ಸಾಹ ಇಮ್ಮಡಿಯಾಯಿತು.
ಮಳೆ ನಿಂತ ಬಳಿಕ ಸಯ್ಯಾಜಿರಾವ್ ರಸ್ತೆಯ ದೇವರಾಜ ಮಾರುಕಟ್ಟೆಯ ಮುಂಭಾಗದ ರಸ್ತೆಯಲ್ಲೇ ನೀರು ಹರಿಯಿತು. ಜಂಬೂಸವಾರಿ ನೋಡಲು ಬೆಳಿಗ್ಗೆಯಿಂದ ಚಾಪೆ ಹಾಸಿ ಕುಳಿತುಕೊಂಡಿದ್ದವರು ಮಳೆ ನೀರಿನಲ್ಲೇ ನಿಂತು ಮೆರವಣಿಗೆ ವೀಕ್ಷಿಸಿದರು. ಹಲವೆಡೆ ಶಾಮಿಯಾನದಲ್ಲಿ ನೀರು ನಿಂತು ಕುಳಿತಿದ್ದವರ ತಲೆಗೆ ಸುರಿಯಿತು. ದಸರಾ ಸಮಯದಲ್ಲೂ ನೀರು ಹರಿಯಲು ವ್ಯವಸ್ಥೆ ಮಾಡದಿರುವ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಗೆ ಜನ ದಾಟದಂತೆ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತಾದರೂ, ಸ್ತಬ್ಧಚಿತ್ರ, ಅಂಬಾರಿ ಆಗಮಿಸುವ ವೇಳೆ ಕೆ.ಆರ್. ವೃತ್ತ, ನಗರ ಬಸ್ ನಿಲ್ದಾಣ, ಆಯುರ್ವೇದ ವೃತ್ತದ ಬಳಿ ತಳ್ಳಾಟ ಮಾಡಿ ಬ್ಯಾರಿಕೇಡ್ ಮುರಿದು ಮಂದೆ ಬರಲು ಯತ್ನಿಸಿದರು. ಅವರನ್ನು ಪೊಲೀಸರು ಹಾಗೂ ಸ್ವಯಂಸೇವಕರು ತಡೆದರು. ಫುಟ್‌ಪಾತ್ ಕಲ್ಲಿನ ಮೇಲೆ, ತಡೆಗೋಡೆಗಳಿಲ್ಲದ ಕಡೆಗಳಲ್ಲೂ ಅಸುರಕ್ಷಿತವಾಗಿ ನಿಂತಿದ್ದರು. ತಲ್ಲಾಟದಿಂದ 50ಕ್ಕೂ ಹೆಚ್ಚು ಮಹಿಳೆಯರು ಉಸಿರಾಟ ತೊಂದರೆ ಅನುಭವಿಸಿದರು. ನಗರ ಬಸ್ ನಿಲ್ದಾಣದ ಬಳಿ ಬ್ಯಾರಿಕೇಡ್ ತಗುಲಿ ಯುವಕನೊಬ್ಬನ ಮುಖದಲ್ಲಿ ರಕ್ತ ಸುರಿಯಿತು. ಕೆ.ಆರ್. ವೃತ್ತದ ಬಳಿ ಪೊಲೀಸ್ ಸಿಬ್ಬಂದಿ ಕೈಗೆ ಬ್ಯಾರಿಕೇಡ್ ಬಡಿದು ರಕ್ತಸ್ರಾವವಾಯಿತು. ಅವರನ್ನು ಆಂಬುಲೆನ್ಸ್‌ನಲ್ಲಿ ಚಿಕಿತ್ಸೆಗಾಗಿ ಸಾಗಿಸಿದರು.
ಮುಗಿಲುಮುಟ್ಟಿದ ಕೂಗು: ನಿಶಾನೆ ಆನೆಯ ತಂಡದಲ್ಲಿ ಬಂದ ಭೀಮ ಆನೆಯನ್ನು ಕಂಡೊಡನೆ ಜನರ ಕೂಗು ಮುಗಿಲು ಮುಟ್ಟಿತು. ಮಕ್ಕಳು ‘ಭೀಮಾ... ಭೀಮಾ’ ಎಂದು ಕೂಗಿದರು. ಕರೆಗೆ ಓಗೊಡುತ್ತಿದ್ದ ಭೀಮ ಸೊಂಡಿಲೆತ್ತಿ ನಮಸ್ಕರಿಸುತ್ತಿದ್ದ. ಅದನ್ನು ಕಂಡ ಜನ ಕೇಕೆ, ಶಿಳ್ಳೆ ಹಾಕಿ ಸಂಭ್ರಮಿಸಿದರು. ಸ್ತಬ್ಧಚಿತ್ರಗಳು ಮುಗಿದು, ಅಂಬಾರಿ ಆನೆ ರಾಜ ಗಾಂಭಿರ್ಯದಿಂದ ಹೆಜ್ಜೆಯಿಡುವುದನ್ನು ಕಂಡೊಡನೆ ಅದನ್ನು ವೀಕ್ಷಿಸಲು ಜನರು ತಳ್ಳಾಟ ನಡೆಸಿದರು. ಈ ನಡುವೆ ಮುಂಭಾಗದಲ್ಲಿದ್ದ ಎಳೆಯ ಮಕ್ಕಳು ಬ್ಯಾರಿಕೇಡ್ ನಡುವೆ ಸಿಲುಕಿ ಚೀರಾಡಿದರು. ಬಳಿಕ ಕೆಲವು ಮಹಿಳೆಯರು ಹಾಗೂ ಮಕ್ಕಳನ್ನು ರಸ್ತೆಯ ಬದಿ ಕೂರಿಸಲಾಯಿತು. ಅಮ್ಮನಿಂದ ತಪ್ಪಿಸಿಕೊಂಡ ಮಕ್ಕಳನ್ನು ಮಹಿಳಾ ಪೊಲೀಸ್ ಸಿಬ್ಬಂದಿ ಸಂತೈಸುತ್ತಿದ್ದ ದೃಶ್ಯ ಭಾವನಾತ್ಮಕವಾಗಿತ್ತು.
ಭದ್ರತೆ: ಪೊಲೀಸ್ ಭದ್ರತೆಯ ಜೊತೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ 6 ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ 150 ಸಿಬ್ಬಂದಿಯನ್ನು ಮೆರವಣಿಗೆಯಲ್ಲಿ ನಿಯೋಜಿಸಲಾಗಿತ್ತು. 12 ಜಲ ವಾಹನ, 6 ಕ್ಷಿಪ್ರ ಸ್ಪಂದನ ವಾಹನ ಸೇರಿ ವಿವಿಧ ಸೇವೆಯ 30 ತುರ್ತು ಸೇವಾ ವಾಹನ ಕಾರ್ಯನಿರ್ವಹಣೆ ಮಾಡಿದ್ದವು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮೂರು ಕಡೆಗಳಲ್ಲಿ ಜನರಿಗೆ ಮೈಕ್ ಮೂಲಕ ಮಾಹಿತಿ ನೀಡಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ವಿದ್ಯಾರ್ಥಿಗಳೂ ಸ್ವಯಂ ಸೇವಕರಾಗಿ ಭಾಗವಹಿಸಿದ್ದರು.
ಜಂಬೂಸವಾರಿ ಮೆರವಣಿಗೆ ಸಾಗುವ ವೃತ್ತಗಳಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ದೂಡಿ ಮುಂಬರಲು ಯತ್ನಿಸುತ್ತಿರುವವರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಸಯ್ಯಾಜಿರಾವ್ ರಸ್ತೆಯ ದೇವರಾಜ ಮಾರುಕಟ್ಟೆಯಿಂದಾಗಿ ಅಂಬಾರಿ ಆನೆ ನಿರ್ಗಮಿಸಿದ ಬಳಿಕ ಅದರ ಹಿಂದೆ ಸಾಗಲು ಜನರು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದರು. ಇದನ್ನು ಲೆಕ್ಕಿಸದೆ ಜನ ಗುಂಪಾಗಿ ನುಗ್ಗಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಜೊತೆಯಲ್ಲಿದ್ದ ಮಹಿಳೆಯರು ಮಕ್ಕಳಿಗೂ ಏಟು ಬಿದ್ದು ಕೂಗಾಡಿದರು. ಓಡುವ ರಭಸಕ್ಕೆ ಚಪ್ಪಲಿಗಳು ಚೆಲ್ಲಾಪಿಲ್ಲಿಯಾದವು. ಗಾಯಗೊಂಡವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.