ಮೈಸೂರು: ದಸರಾ ಹಬ್ಬಕ್ಕೆ ಮುನ್ನುಡಿಯಾಗಿ ಈ ಬಾರಿಯ ದಸರಾ ಕ್ರೀಡಾಕೂಟವು ಅ.3ರಿಂದ 6ರವರೆಗೆ ನಡೆಯಲಿದ್ದು, ಒಂದೇ ಆವೃತ್ತಿಯಲ್ಲಿ ಸ್ಪರ್ಧೆಗಳನ್ನು ಆಯೋಜಿಸಿರುವುದು ವಿಶೇಷ.
ಪ್ರತಿ ವರ್ಷ ದಸರೆಗೂ ಮುನ್ನ ಕ್ರೀಡಾಕೂಟದ ಆಯೋಜನೆ ಮಾಡುತ್ತ ಬಂದಿದ್ದು, ಇದು ಉತ್ಸವದ ಮೆರುಗನ್ನು ಹೆಚ್ಚಿಸುತ್ತಾ ಬಂದಿದೆ. ಕಳೆದ ವರ್ಷ ‘ಸಿ.ಎಂ. ಕಪ್’ ಹೆಸರಿನಲ್ಲಿ ಹೆಚ್ಚುವರಿ ಕ್ರೀಡಾಕೂಟ ಸೇರಿದಂತೆ ಬರೋಬ್ಬರಿ ಹತ್ತು ದಿನಗಳ ಕಾಲ ನಗರದಲ್ಲಿ ಕ್ರೀಡಾಹಬ್ಬ ನಡೆದಿತ್ತು. ಆದರೆ, ಈ ವರ್ಷ ನಾಲ್ಕು ದಿನಗಳ ಕಾಲ ರಾಜ್ಯ ಮಟ್ಟದ ಒಂದೇ ಕ್ರೀಡಾಕೂಟ ಆಯೋಜಿಸಲಾಗಿದೆ. ರಾಜ್ಯದ 5 ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಕ್ರೀಡಾಪಟುಗಳು ಇಲ್ಲಿ ಪ್ರಶಸ್ತಿಗಾಗಿ ಸೆಣೆಸಲಿ ದ್ದಾರೆ. ಅಥ್ಲೆಟಿಕ್ಸ್, ಗುಂಪು ಮಾದರಿ ಸೇರಿದಂತೆ ಬರೋಬ್ಬರಿ 27 ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಪ್ರತಿ ವಿಭಾಗದಿಂದ 900 ಕ್ರೀಡಾಪಟುಗಳು ಸೇರಿದಂತೆ ಒಟ್ಟು 5 ವಿಭಾಗಗಳಿಂದ 3,500 ಸ್ಪರ್ಧಿಗಳು ಈ ಕ್ರೀಡಾಕೂಟದಲ್ಲಿ ಪ್ರತಿಭೆಯನ್ನು ಪ್ರದರ್ಶನಕ್ಕೆ ಒಡ್ಡಲಿದ್ದಾರೆ. ಇವರೊಟ್ಟಿಗೆ 1,500 ಅಧಿಕಾರಿಗಳು– ಸಿಬ್ಬಂದಿ ಸಹ ಮೈಸೂರಿನ ಆತಿಥ್ಯ ಸವಿಯಲಿದ್ದಾರೆ.
ಚಾಮುಂಡಿ ವಿಹಾರ ಕ್ರೀಡಾಂಗಣದ ಜೊತೆಗೆ ಮೈಸೂರು ವಿ.ವಿ. ಒಳಾಂಗಣ ಕ್ರೀಡಾಂಗಣ, ಸ್ಪೋರ್ಟ್ಸ್ ಪೆವಿಲಿಯನ್ ಸೇರಿದಂತೆ ವಿವಿಧೆಡೆ ಸ್ಪರ್ಧೆಗಳನ್ನು ಆಯೋಜಿಸಲು ಸಿದ್ಧತೆ ನಡೆದಿದೆ.
₹3 ಕೋಟಿ ಅನುದಾನ: ಈ ಬಾರಿಯ ದಸರಾ ಕ್ರೀಡಾಕೂಟಕ್ಕೆ ಒಟ್ಟು ₹6 ಕೋಟಿ ಅನುದಾನ ಕೋರಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಸರ್ಕಾರ ಸದ್ಯ ₹3 ಕೋಟಿ ಅನುದಾನ ಬಿಡುಗಡೆ ಮಾಡಿದೆ.
23ರಿಂದ ಸ್ಥಳೀಯ ಕ್ರೀಡಾಕೂಟ: ಕ್ರೀಡಾ ಇಲಾಖೆಯು ದಸರೆಗೂ ಮುನ್ನ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸಲಿದೆ. ಸೆ.23ರಿಂದ 26ರವರೆಗೆ ಈ ಕ್ರೀಡಾಕೂಟಗಳು ನಡೆಯಲಿವೆ. ಇಲ್ಲಿನ ವಿಜೇತರನ್ನು ವಿಭಾಗೀಯ ಹಾಗೂ ನಂತರದಲ್ಲಿ ದಸರಾ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲಾಗುತ್ತದೆ.
ಅ.3ರಿಂದ 6ರವರೆಗೆ ಈ ಬಾರಿಯ ದಸರಾ ಕ್ರೀಡಾಕೂಟ ನಡೆಯಲಿದೆ. 3500 ಕ್ರೀಡಾಪಟು ಗಳು ಪಾಲ್ಗೊಳ್ಳಲಿದ್ದು ಆತಿಥ್ಯಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆಭಾಸ್ಕರ್ ನಾಯಕ್ ಹಿರಿಯ ಸಹಾಯಕ ನಿರ್ದೇಶಕ ಕ್ರೀಡಾ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.