ADVERTISEMENT

ಮೈಸೂರು | ‘ಡಿಎಚ್‌– ಎಕ್ಸ್‌ಪ್ರೆಶನ್ಸ್‌’: ಅರಳಿದ ಚಿಣ್ಣರ ಚಿತ್ತಭಿತ್ತಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 8:13 IST
Last Updated 21 ನವೆಂಬರ್ 2024, 8:13 IST
<div class="paragraphs"><p>ಮೈಸೂರಿನ ಕೊಂಕಣ್ ಭವನದಲ್ಲಿ ಡೆಕ್ಕನ್ ಹೆರಾಲ್ಡ್ ಆಯೋಜಿಸಿದ್ದ ಎಕ್ಸಪ್ರೆಷನ್ - ಅಂತರ ಶಾಲಾ ಪ್ರತಿಭಾ ಸ್ಪರ್ಧೆಯ ಕಾರ್ಯಕ್ರಮವನ್ನು ಪುರಾತತ್ವ ಇಲಾಖೆಯ ಆಯುಕ್ತ ಎ. ದೇವರಾಜು ಅವರು ಉದ್ಘಾಟನೆ ಮಾಡಿದರು. </p></div>

ಮೈಸೂರಿನ ಕೊಂಕಣ್ ಭವನದಲ್ಲಿ ಡೆಕ್ಕನ್ ಹೆರಾಲ್ಡ್ ಆಯೋಜಿಸಿದ್ದ ಎಕ್ಸಪ್ರೆಷನ್ - ಅಂತರ ಶಾಲಾ ಪ್ರತಿಭಾ ಸ್ಪರ್ಧೆಯ ಕಾರ್ಯಕ್ರಮವನ್ನು ಪುರಾತತ್ವ ಇಲಾಖೆಯ ಆಯುಕ್ತ ಎ. ದೇವರಾಜು ಅವರು ಉದ್ಘಾಟನೆ ಮಾಡಿದರು.

   

ಮೈಸೂರು: ಚಿಣ್ಣರ ಪುಟಾಣಿ ಕೈಗಳಲ್ಲಿ ಅರಳಿದ ಚಿತ್ತಭಿತ್ತಿಗೆ‌ ‘ಡಿಎಚ್‌– ಎಕ್ಸ್‌ಪ್ರೆಶನ್ಸ್‌’ ವೇದಿಕೆಯಾಯಿತು. ದೇಶದ ವೈವಿಧ್ಯದ ಹಬ್ಬಗಳು, ಶ್ರದ್ಧಾಕೇಂದ್ರಗಳು, ಮಕ್ಕಳ ಇಷ್ಟದ ಋತುಮಾನಗಳು ಬಣ್ಣದ ರೂಪ ತಾಳಿದವು.

ಅಪಾಯದಲ್ಲಿರುವ ಅರಣ್ಯ ರಕ್ಷಕರಾದ‌ ಆನೆಗಳು ಮಾತನಾಡಿದರೆ, ಇರುವುದೊಂದೇ ಭೂಮಿ ಪ್ಲೀಸ್ ಉಳಿಸಿಕೊಡಿರೆಂದು ಚಿತ್ರಗಳಲ್ಲಿ ಮಕ್ಕಳು ಅಭಿವ್ಯಕ್ತಿಸಿದರು.‌

ADVERTISEMENT

ವಿಜಯನಗರ 1ನೇ ಹಂತದಲ್ಲಿರುವ ಕೊಂಕಣ ಭವನದಲ್ಲಿ ಗುರುವಾರ ನಡೆದ ‘ಪ್ರಜಾವಾಣಿ’ ಬಳಗದ ‘ಡೆಕ್ಕನ್‌ ಹೆರಾಲ್ಡ್‌ ಇನ್‌ ಎಜುಕೇಶನ್‌ ಎಕ್ಸ್‌ಪ್ರೆಶನ್ಸ್‌’ (ಡಿಎಚ್‌ಐಇ) ಅಂತರ ಶಾಲಾ ಪ್ರತಿಭಾನ್ವೇಷಣಾ ಕಾರ್ಯಕ್ರಮವು ಈ ಮಕ್ಕಳ ಅಭಿವ್ಯಕ್ತಿಗೆ ಸಾಕ್ಷಿಯಾಯಿತು.

ಪೈಲಟ್‌, ವಂಡರ್‌ಲಾ ಪಾರ್ಕ್ಸ್‌ ಅಂಡ್‌ ರೆಸಾರ್ಟ್ಸ್, ಕೆಸಿಎ ಹಾಗೂ ಪೂರ್ವಿಕಾ ಮೊಬೈಲ್ ಸಹಯೋಗದಲ್ಲಿ ಆಯೋಜಿಸಿದ್ದ ಸ್ಪರ್ಧೆಗೆ 'ಕ್ಯಾನ್ ವಾಸಿ'ನಲ್ಲಿ ಹೂವಿನ ಚಿತ್ರ ಬರೆಯುವ ಮೂಲಕ ಪ್ರಾಚ್ಯ ವಸ್ತು, ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಎ.ದೇವರಾಜು ಉದ್ಘಾಟಿಸಿದರು.

ನಂತರ ಮಾತನಾಡಿ, 'ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಇಂಥ ಸ್ಪರ್ಧೆಗಳು ನಡೆಯಬೇಕು. ಮಕ್ಕಳೂ ಸ್ಪರ್ಧಾ ವೇದಿಕೆಯನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಉನ್ನತ ಸ್ಥಾನಕ್ಕೇರುವ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳಬೇಕು' ಎಂದರು.

'ವಿದ್ಯಾರ್ಥಿಗಳ ಪ್ರತಿಭೆ, ಅಭಿವ್ಯಕ್ತಿಗೆ ಪೋಷಕರು ಹಾಗೂ ಶಿಕ್ಷಕರ ಪ್ರೋತ್ಸಾಹ ಅಗತ್ಯ. ಸ್ಪರ್ಧೆಗಳಲ್ಲಿ ಗೆಲುವು- ಸೋಲು ಸಾಮಾನ್ಯ. ಸ್ಪರ್ಧಾಸ್ಫೂರ್ತಿಯಿಂದ ಫಲಿತಾಂಶ ಸ್ವೀಕರಿಸಬೇಕು. ಭಾಗವಹಿಸುವುದು ಮುಖ್ಯವೆಂದು ಭಾವಿಸಬೇಕು' ಎಂದು ಸಲಹೆ ನೀಡಿದರು.

'ಕಳೆದ 53 ವರ್ಷದಿಂದ 'ಪ್ರಜಾವಾಣಿ' ಓದುತ್ತಿರುವೆ. ಈ ಸ್ಥಾನಕ್ಕೆ ಬರಲು ಪತ್ರಿಕೆಯ ಓದು ಸಹಾಯ ಮಾಡಿದೆ. ವಿಶ್ವಜ್ಞಾನ ನೀಡುವ ಜೊತೆಗೆ ಸಮಾಜದೊಂದಿಗೆ ಸಂವಹನ ನಡೆಸುವ, ಬೆರೆಯುವ ಶಕ್ತಿಯನ್ನು ನೀಡಿದೆ. ನಿತ್ಯ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನವಂತರೂ, ಶಕ್ತಿವಂತರೂ ಆಗಬೇಕು' ಎಂದರು.

ಮೈಸೂರಿನ ಕೊಂಕಣ್ ಭವನದಲ್ಲಿ ಡೆಕ್ಕನ್ ಹೆರಾಲ್ಡ್ ಆಯೋಜಿಸಿದ್ದ ಎಕ್ಸಪ್ರೆಷನ್ - ಅಂತರ ಶಾಲಾ ಪ್ರತಿಭಾ ಸ್ಪರ್ಧೆಯ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.

'ಪತ್ರಿಕೆಯ ವಿದ್ಯಾಮಾನಗಳನ್ನು ಓದುವ ಜೊತೆಗೆ ಅಂಕಣ ಬರಹ, ವರದಿಗಳನ್ನು ಓದಬೇಕು. ಅದರಿಂದ ಸಾಮಾಜಿಕ ಜ್ಞಾನ ಸಿಗುತ್ತದೆ. ಜಗತ್ತಿನಲ್ಲಿ ಜ್ಞಾನದ ಬಲಕ್ಕಿತ ಮಿಗಿಲಾದದ್ದು ಯಾವುದೂ ಇಲ್ಲ' ಎಂದು ಅಭಿಪ್ರಾಯಪಟ್ಟರು.

'ಸಾಮರಸ್ಯ, ಸೌಹಾರ್ದದಿಂದ ಬದುಕುವ ಪಾಠವನ್ನು ಸ್ಪರ್ಧೆಗಳು ಕಲಿಸುತ್ತವೆ. ಒಳ್ಳೆಯದನ್ನೇ ನಾವು ಕಲಿಯಬೇಕು. ಕ್ಯಾನ್ವಾಸಿನಲ್ಲಿ ಚಿತ್ರ ಬರೆಯುವಾಗ ಎಲ್ಲ ಮಕ್ಕಳೂ ಒಂದೊಂದೇ ಪ್ರಾಣಿ, ಸಸ್ಯ, ಪಕ್ಷಿ, ಮೋಡ ಬರೆದರು. ಈ ಎಲ್ಲವೂ ಇದ್ದಾಗಲೇ ಅದು ಸಮಾಜ, ಪರಿಸರ. ಸಾಮರಸ್ಯದಿಂದ ಬದುಕುವುದರಲ್ಲೇ ನಮ್ಮ‌ ಅಸ್ತಿತ್ವ, ಅಭಿವೃದ್ಧಿಯಿದೆ. ಒಳ್ಳೆಯ ಆಲೋಚನೆಗಳನ್ನು ಬೆಳೆಸಿಕೊಳ್ಳಿ'‌‌‌ ಎಂದು ಸಲಹೆ ನೀಡಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು, 'ಪೋಷಕರು, ಶಿಕ್ಷಕರಿಗೆ ವಿದ್ಯಾರ್ಥಿಗಳು ಗೌರವ ಕೊಡಬೇಕು. ಶಿಸ್ತು ರೂಢಿಸಿಕೊಂಡರೆ ಅದೇ ನಿಮ್ಮನ್ನು ಉನ್ನತ ಸ್ಥಾನಕ್ಕೆ‌ ಕೊಂಡೊಯ್ಯುತ್ತದೆ' ಎಂದರು.

ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಜಾನ್ ವಿಲಿಯಂ ಡಿಸೋಜಾ, 'ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಅನ್ನು ಓದುತ್ತಲೇ ಬೆಳೆದಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಸ್ಪರ್ಧೆಗಳು ಅನುಭವ, ಆತ್ಮವಿಶ್ವಾಸವನ್ನು ನೀಡುತ್ತವೆ. ಎಂದಿಗೂ ನಮ್ಮ ಪ್ರಾಮಾಣಿಕ ಪ್ರಯತ್ನ ಬಿಡಬಾರದು' ಎಂದರು.

'ಪ್ರಜಾವಾಣಿ' ಮೈಸೂರು ಬ್ಯೂರೋ ಮುಖ್ಯಸ್ಥ‌‌ ಕೆ.ನರಸಿಂಹಮೂರ್ತಿ, ಡೆಕ್ಕನ್‌ ಹೆರಾಲ್ಡ್‌ ಕಾರ್ಯಕ್ರಮ ಹಿರಿಯ ಸಲಹೆಗಾರ ಸಂಜಯ್ ಅರಬಟ್ಟಿ, ಶಿಕ್ಷಣ ವಿಭಾಗದ ಮುಖ್ಯಸ್ಥೆ ಅಭಿಲಾಷಾ ಶ್ರೀವಾಸ್ತವ ಪಾಲ್ಗೊಂಡಿದ್ದರು.‌

ಮೈಸೂರಿನ ಕೊಂಕಣ್ ಭವನದಲ್ಲಿ ಡೆಕ್ಕನ್ ಹೆರಾಲ್ಡ್ ಆಯೋಜಿಸಿದ್ದ ಎಕ್ಸಪ್ರೆಷನ್ - ಅಂತರ ಶಾಲಾ ಪ್ರತಿಭಾ ಸ್ಪರ್ಧೆಯ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.