ADVERTISEMENT

ಹುಣಸೂರು | ಡೆಂಗಿ: ವಿಶೇಷ ಘಟಕ ಸ್ಥಾಪನೆ ಅಗತ್ಯ

ಸಾರ್ವಜನಿಕ ಆಸ್ಪತ್ರೆಗೆ ಸಂಸದ ಯದುವೀರ್‌ ಭೇಟಿ: ತುರ್ತು ಕ್ರಮಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 15:13 IST
Last Updated 9 ಜುಲೈ 2024, 15:13 IST
ಹುಣಸೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಡೆಂಗಿ ಜ್ವರದಿಂದ ಬಳಲುತ್ತಿದ್ದ ರೋಗಿಯ ಆರೋಗ್ಯ ವಿಚಾರಿಸಿದರು
ಹುಣಸೂರು ನಗರದ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಡೆಂಗಿ ಜ್ವರದಿಂದ ಬಳಲುತ್ತಿದ್ದ ರೋಗಿಯ ಆರೋಗ್ಯ ವಿಚಾರಿಸಿದರು   

ಹುಣಸೂರು: ‘ಜಿಲ್ಲೆಯ ಮೈಸೂರು ಮತ್ತು ಹುಣಸೂರು ತಾಲ್ಲೂಕಿನಲ್ಲಿ ಡೆಂಗಿ ಜ್ವರ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸೋಂಕು ತಗುಲಿದವರ ಮರಣವಾಗಿದೆ. ಜಿಲ್ಲಾಡಳಿತ ವಿಶೇಷ ಕಾಳಜಿ ನೀಡಿ ಚಿಕಿತ್ಸೆಗೆ ಮುಂದಾಗಬೇಕಿದೆ’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಡೆಂಗಿ ಜ್ವರದಿಂದ ಬಳಲುತ್ತಿರುವ ಜನರ ಆರೋಗ್ಯ ವಿಚಾರಿಸಿ ಮಾತನಾಡಿದ ಅವರು, ‘ಡೆಂಗಿ ಜ್ವರದ ಸೋಂಕು ಜನರನ್ನು ಕಾಡುತ್ತಿದ್ದು, ಈ ರೋಗದಿಂದ ಮುಕ್ತರಾಗಲು ಸ್ವಚ್ಛತೆ ಕಾಯ್ದುಕೊಳ್ಳಬೇಕಾಗಿದೆ. ಆರೋಗ್ಯ ಇಲಾಖೆ ಈ ಸಂಬಂಧ ಜಾಗೃತಿ ಮೂಡಿಸುತ್ತಿದ್ದು, ಇದರೊಂದಿಗೆ ಚಿಕಿತ್ಸೆ ನೀಡಲು ವಿಶೇಷ ಘಟಕ ಸ್ಥಾಪಿಸಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ’ ಎಂದರು.

‘ತಾಲ್ಲೂಕು ಕೇಂದ್ರದ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿ ತೆರೆದು ಡೆಂಗಿ ಜ್ವರ ಸೋಂಕು ತಗುಲಿದವರಿಗೆ ಚಿಕಿತ್ಸೆಗೆ ಕ್ರಮವಹಿಸಿದ್ದರೂ ಆಸ್ಪತ್ರೆಯ ಸ್ಥಿತಿಗತಿ ನೋಡಿ ವ್ಯಥೆಯಾಗಿದೆ. ಹೊಸ ಆಸ್ಪತ್ರೆ ನಿರ್ಮಾಣವಾಗಿದ್ದು, ಕೆಲವೊಂದು ಕೆಲಸ ಬಾಕಿ ಇರುವುದರಿಂದ ಸ್ಥಳಾಂತರ ವಿಳಂಬವಾಗಿದೆ. ಅದಕ್ಕೆ ಬಂದಿರುವ ಅನುದಾನಗಳ ಬಗ್ಗೆ ಮಾಹಿತಿಯಿಲ್ಲ’ ಎಂದರು.

ADVERTISEMENT

ತುರ್ತು: ‘ಡೆಂಗಿ ಜ್ವರ ಚಿಕಿತ್ಸೆ ತುರ್ತು ಎಂದು ಪರಿಗಣಿಸಿ ಗ್ರಾಮೀಣ ಭಾಗದಲ್ಲಿ ಲಾರ್ವಾ ನಿಯಂತ್ರಿಸಲು ಇಲಾಖೆ ಕ್ರಮವಹಿಸಬೇಕು. ಡೆಂಗಿ ಜ್ವರದಿಂದ ಬಳಲುತ್ತಿರುವ ಸಾರ್ವಜನಿಕರಿಗೆ ಚಿಕಿತ್ಸೆಯೂ ಗ್ರಾಮೀಣ ಭಾಗದಲ್ಲೇ ದೊರಕುವ ಕೆಲಸ ಆಗಬೇಕಿದೆ. ಇದಕ್ಕಾಗಿ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ತೊಡಗಬೇಕು ಎಂದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೆಚ್ಚಾಗಿ ತೆರೆದು ಗ್ರಾಮೀಣ ಜನರಿಗೆ ಹೆಚ್ಚಿನ ಆರೋಗ್ಯ ಸೌಕರ್ಯ ಸಿಗುವ ಕ್ರಮ ಆಗಬೇಕಿದೆ. ಈ ಸಂಬಂಧ ಕೇಂದ್ರ ಸರ್ಕಾರದಿಂದ ಯಾವ ರೀತಿ ಸಹಕಾರ ನೀಡಬಹುದು ಅದನ್ನು ಪರಿಶೀಲಿಸಿ ನೀಡಲು ಬದ್ಧ’ ಎಂದರು.

ಸಂಸದರ ಭೇಟಿ ಸಮಯದಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಹದೇವಸ್ವಾಮಿ, ಡಾ.ಉಮೇಶ್, ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಮಹದೇವಸ್ವಾಮಿ, ಮುಖಂಡರಾದ ಗಣೇಶ್ ಕುಮಾರಸ್ವಾಮಿ, ಕಾಂತರಾಜ್, ನಾರಾಯಣ್, ಹನಗೋಡು ಮಂಜುನಾಥ್, ಮಹದೇವ್, ನಗರಸಭೆ ಸದಸ್ಯ ವಿವೇಕ್, ಸುಜಿತ್, ಮಹದೇವ್, ರವಿಶಂಕರ್ ಇದ್ದರು.

ಆಸ್ಪತ್ರೆಯ ಸ್ಥಿತಿಗತಿ; ಅಸಮಾಧಾನ ಗ್ರಾಮೀಣ ಭಾಗದಲ್ಲೇ ಚಿಕಿತ್ಸೆಗೆ ಕ್ರಮವಹಿಸಿ ಕೇಂದ್ರ ಸರ್ಕಾರದ ಸಹಕಾರದ ಬಗ್ಗೆ ಪರಿಶೀಲಿಸುತ್ತೇನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.