ADVERTISEMENT

Mysuru Dasara: ನಾಡಹಬ್ಬ ದಸರಾಕ್ಕೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 23:30 IST
Last Updated 2 ಅಕ್ಟೋಬರ್ 2024, 23:30 IST
<div class="paragraphs"><p>ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಬುಧವಾರ ಅಲಂಕಾರ ಮಾಡಿದರು</p></div>

ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಬುಧವಾರ ಅಲಂಕಾರ ಮಾಡಿದರು

   

– ಪ್ರಜಾವಾಣಿ ಚಿತ್ರ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿಯು ಸಜ್ಜಾಗಿದೆ. ಗುರುವಾರ (ಅಕ್ಟೋಬರ್ 3) ಬೆಳಿಗ್ಗೆ 9.15ರಿಂದ 9.45ರೊಳಗೆ ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ಅಗ್ರ ಪೂಜೆಯೊಂದಿಗೆ ಹತ್ತು ದಿನಗಳ ಉತ್ಸವ ಗರಿಗೆದರಲಿದೆ. 

ADVERTISEMENT

ಪ್ರೊ.ಹಂ.‍ಪ. ನಾಗರಾಜಯ್ಯ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪಾಲ್ಗೊಳ್ಳಲಿದ್ದಾರೆ. ಬಳಿಕ ನಗರದ ವಿವಿಧ ವೇದಿಕೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಮೊದಲ ದಿನ ಹನ್ನೊಂದು ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿವೆ.

ಕುಪ್ಪಣ್ಣ ಉದ್ಯಾನದಲ್ಲಿ ಫಲಪುಷ್ಪ ಪ್ರದರ್ಶನ, ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಚಲನಚಿತ್ರೋತ್ಸವ, ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ದೊಡ್ಡಕೆರೆ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ, ವಸ್ತುಪ್ರದರ್ಶನ, ಕಾವಾ ಆವರಣದಲ್ಲಿ ಶಿಲ್ಪ, ಚಿತ್ರಕಲೆ ಹಾಗೂ ಕರಕುಶಲ ಕಲೆಗಳ ಪ್ರದರ್ಶನ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಕನ್ನಡ ಪುಸ್ತಕ ಮಾರಾಟ ಮೇಳ, ರಂಗಾಯಣದಲ್ಲಿ ‘ನವರಾತ್ರಿ ಜಾನಪದ ರಂಗೋತ್ಸವ’ ಹಾಗೂ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ಆರಂಭಗೊಳ್ಳಲಿವೆ.

ದಸರಾ ಪ್ರಯುಕ್ತ ಮೈಸೂರು ಅರಮನೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಬ್ಬಂದಿಯು ವೇದಿಕೆಯನ್ನು ಸಜ್ಜುಗೊಳಿಸಿದರು

ಅರಮನೆಯಲ್ಲಿ ‘ಖಾಸಗಿ ದರ್ಬಾರ್‌’
ಮೈಸೂರು ರಾಜವಂಶಸ್ಥರು ಅರಮನೆಯಲ್ಲಿ ಗುರುವಾರದಿಂದಲೇ ಶರನ್ನವರಾತ್ರಿ ಆಚರಿಸಲಿದ್ದಾರೆ. ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ರತ್ನಖಚಿತ ಸಿಂಹಾಸನದಲ್ಲಿ ಕುಳಿತು 10ನೇ ವರ್ಷದ ಖಾಸಗಿ ದರ್ಬಾರ್‌ ನಡೆಸಲಿದ್ದಾರೆ. ಸಂಸದರಾದ ಬಳಿಕ ಅವರಿಗೆ ಇದು ಮೊದಲನೇ ‘ಖಾಸಗಿ ದರ್ಬಾರ್‌’. ವಿಜಯದಶಮಿ ಮೆರವಣಿಗೆಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ‘ವಿಶೇಷ ಆಹ್ವಾನಿತ’ರಾಗಿ ರಾಜವಂಶಸ್ಥರು ಪಾಲ್ಗೊಳ್ಳುವ ಸಂಪ್ರದಾಯವನ್ನು ಸಂಸದರಾಗಿಯೂ ಮುಂದುವರಿಸಲಿರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.