ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಐದು ತಿಂಗಳು ಬಾಕಿ ಇರುವಾಗಲೇ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸುವ ಮೂಲಕ ‘ಪ್ರಜಾತಂತ್ರದ ಹಬ್ಬ’ಕ್ಕೆ ಸಿದ್ಧವಾಗುವಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಂದೇಶ ರವಾನಿಸಿದೆ.
ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು, 7 ಕ್ಷೇತ್ರಗಳ ಹುರಿಯಾಳುಗಳನ್ನು ಅಂತಿಮಗೊಳಿಸಿರುವುದಾಗಿ ಪಕ್ಷ ಸೋಮವಾರ ಪ್ರಕಟಿಸಿದೆ. ನಾಲ್ಕು ಕಡೆಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸದೇ ಕಾದು ನೋಡುವ ತಂತ್ರವನ್ನು ಪಕ್ಷದ ಮುಖಂಡರು ಅನುಸರಿಸುತ್ತಿದ್ದಾರೆ.
ಈಗ ಪ್ರಕಟಿಸಿರುವ ಪಟ್ಟಿಯಲ್ಲಿ ಅಚ್ಚರಿ ಅಥವಾ ವಿಶೇಷಗಳೇನಿಲ್ಲ. ಮೂರು ವರ್ಷಗಳಿಂದ ಪಕ್ಷದೊಂದಿಗೆ ಅಂತರ ಕಾಯ್ದುಕೊಂಡಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರನ್ನು ಈಚೆಗೆ ಇಲ್ಲಿನ ಅವರ ಮನೆಯಲ್ಲೇ ಭೇಟಿಯಾಗಿದ್ದ ವರಿಷ್ಠ ಎಚ್.ಡಿ.ದೇವೇಗೌಡ ನೀಡಿದ್ದ ಭರವಸೆಯಂತೆಯೇ ನಡೆದಿದೆ. ಜಿಟಿಡಿ ಜೊತೆ ಅವರ ಪುತ್ರ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡಗೂ ಟಿಕೆಟ್ ಘೋಷಿಸಲಾಗಿದೆ. ‘ಕುಟುಂಬ ರಾಜಕಾರಣಕ್ಕೆ ಸೈ’ ಎನ್ನುವುದನ್ನೂ ಪಕ್ಷ ತಿಳಿಸಿದೆ. ಅಲ್ಲದೇ, ಒಕ್ಕಲಿಗರ ಪ್ರಾಬಲ್ಯವಿರುವ ಈ ಭಾಗದಲ್ಲಿ ಜಿಟಿಡಿ ಅವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಸಂದೇಶವನ್ನೂ ಪಕ್ಷ ನೀಡಿದೆ.
ಭರವಸೆಯಂತೆಯೇ:
ಆ ಪಕ್ಷದ ಮುಖಂಡರು ಬಹುತೇಕ ಕೊಟ್ಟ ಭರವಸೆಯಂತೆಯೇ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಜಿಟಿಡಿ ಕೂಡ ಈ ಪಟ್ಟಿಯಲ್ಲಿರುವ ಹಲವು ಹೆಸರುಗಳನ್ನು ತಿಂಗಳ ಹಿಂದೆಯೇ ಪ್ರಕಟಿಸಿದ್ದರು! ಹಾಲಿ ಶಾಸಕರಿಗೆ ಮಣೆ ಹಾಕಲಾಗಿದೆ. ಹರೀಶ್ ಗೌಡ ಹೊಸ ಮುಖ. ಅವರೂ ಸೇರಿದಂತೆ, ಸ್ಪರ್ಧಾಕಾಂಕ್ಷಿಗಳೆಲ್ಲರೂ ಈಗಾಗಲೇ ಅವರವರ ಕ್ಷೇತ್ರಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ. ಮತದಾರರ ಮನವೊಲಿಕೆಗೆ ಹಲವು ರೀತಿಯಲ್ಲಿ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ಹಾಲಿ ಶಾಸಕರಾದ ಕೆ.ಮಹದೇವ್ (ಪಿರಿಯಾಪಟ್ಟಣ), ಸಾ.ರಾ.ಮಹೇಶ್ (ಕೆ.ಆರ್.ನಗರ), ಜಿ.ಟಿ.ದೇವೇಗೌಡ (ಚಾಮುಂಡೇಶ್ವರಿ), ಅಶ್ವಿನ್‌ಕುಮಾರ್ (ತಿ.ನರಸೀಪುರ) ಅವರಿಗೆ ಮತ್ತೊಮ್ಮೆ ಅವಕಾಶ ಕೊಡಲಾಗಿದೆ. ಜಿ.ಡಿ.ಹರೀಶ್‌ಗೌಡ (ಹುಣಸೂರು), ಅಭಿಷೇಕ್ (ವರುಣಾ) ಹಾಗೂ ಕೆ.ವಿ.ಮಲ್ಲೇಶ್ (ಕೃಷ್ಣರಾಜ) ಅವರಿಗೂ ಪಕ್ಷ ಮನ್ನಣೆ ನೀಡಿದೆ. ಉಳಿದಂತೆ ಎಚ್.ಡಿ.ಕೋಟೆ, ನರಸಿಂಹರಾಜ, ಚಾಮರಾಜ ಹಾಗೂ ನಂಜನಗೂಡು ಕ್ಷೇತ್ರಗಳನ್ನು ಬಾಕಿ ಉಳಿಸಲಾಗಿದೆ.
ಕೆ.ವಿ.ಮಲ್ಲೇಶ್ ಕೃಷ್ಣರಾಜದಿಂದ ಮತ್ತು ಅಭಿಷೇಕ್ ವರುಣಾದಿಂದ 2018ರ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.
ವಿರೋಧದ ನಡುವೆಯೂ:
ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಟಿ.ದೇವೇಗೌಡ ಅವರನ್ನು ಪಕ್ಷದಿಂದ ಮತ್ತೊಮ್ಮೆ ಕಣಕ್ಕಿಳಿಸಲು ಮುಖಂಡರಾದ ಮಾವಿನಹಳ್ಳಿ ಸಿದ್ದೇಗೌಡ, ಕೆಂಪನಾಯಕ, ಮಾದೇಗೌಡ ಮೊದಲಾದವರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರ ಬೆದರಿಕೆಗೆ ಪಕ್ಷದ ಹೈಕಮಾಂಡ್ ಮಣೆ ಹಾಕಿಲ್ಲ. ಜಿಲ್ಲೆಯಲ್ಲಿ ಜಿಟಿಡಿ ಪ್ರಬಲ ನಾಯಕ ಎನ್ನುವ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದೆ.
ಈ ನಡುವೆ, ಜೆಡಿಎಸ್ ವರಿಷ್ಠರ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹಲವು ಮುಖಂಡರು ಕಾಂಗ್ರೆಸ್ ಮುಖಂಡ ಕೆ.ಮರೀಗೌಡ ನೇತೃತ್ವದಲ್ಲಿ ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಈಚೆಗೆ ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ. ಇದು ರಾಜಕೀಯ ಬೆಳವಣಿಗೆಗೆ ಮುನ್ನುಡಿ ಬರೆದಿದೆ.
ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್‌ಗೆ ಟಿಕೆಟ್ ಬಹುತೇಕ ಖಚಿತ ಎಂದು ಜಿಟಿಡಿ ಈಚೆಗೆ ಹೇಳಿದ್ದರು. ಆದರೆ, ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟವಾಗಿಲ್ಲ. ಅಂತೆಯೇ ಉಳಿದ ಮೂರು ಕ್ಷೇತ್ರಗಳಲ್ಲೂ ಅಳೆದು ತೂಗಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.