ಮೋಹನ್ ಕುಮಾರ ಸಿ.
ಮೈಸೂರು: ದಸರೆಗೆ ದಿನಗಣನೆ ಶುರುವಾಗಿದ್ದು, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಬೆಟ್ಟದಲ್ಲಿ ಮೂಲಸೌಕರ್ಯದ ಕೊರತೆ ಕಣ್ಣಿಗೆ ರಾಚುತ್ತಿದ್ದರೂ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆ ಅಗತ್ಯ ಕ್ರಮ ವಹಿಸುತ್ತಿಲ್ಲ ಎಂದು ಸಾರ್ವಜನಿಕ ದೂರುತ್ತಿದ್ದಾರೆ.
ದೇವಾಲಯದ ಎದುರೇ ಇರುವ ಕುಡಿಯುವ ನೀರಿನ ಟ್ಯಾಂಕ್ ಕಾರ್ಯನಿರ್ವಹಿಸುತ್ತಿಲ್ಲ. ಭಕ್ತರು ಹತ್ತಿರದ ಅಂಗಡಿಗಳನ್ನೇ ನೆಚ್ಚಿಕೊಳ್ಳಬೇಕು. ಇಲ್ಲವೇ ನಿರ್ಮಲ ಶೌಚಾಲಯದ ಬಳಿ ನಿರ್ಮಿಸಿರುವ ಕುಡಿಯುವ ನೀರಿನ ಘಟಕಕ್ಕೆ ಹೋಗಬೇಕು. ಹತ್ತಿರದ ಅಂಗಡಿಗಳಲ್ಲಿ ನೀರಿನ ಬಾಟಲಿ ಖರೀದಿಸಬೇಕು.
ದೇಗುಲದ ಒಳಗೆ ಹೋಗುವುದಕ್ಕೂ ಮುಂಚೆ ಭಕ್ತರು ಕಾಲು ತೊಳೆದುಕೊಳ್ಳಲು ನೀರಿಲ್ಲ. ಎದುರಿನ ಎರಡೂ ನಲ್ಲಿಗಳಲ್ಲಿ ನೀರು ಬಾರದಿರುವುದು ಬುಧವಾರ ಕಂಡು ಬಂತು. ನೀರಿಗಾಗಿ ಬೆಟ್ಟದ ಮೆಟ್ಟಿಲು ಅಂತ್ಯವಾಗುವ ಕಾಂಪೌಂಡ್ ಬಳಿ ನಿರ್ಮಿಸಿರುವ ನಲ್ಲಿಗಳ ಬಳಿಗೆ ತೆರಳಬೇಕಾಯಿತು.
ಹೆಜ್ಜೆ ಇಡಲು ಆಗದು: ಬಿಸಿಲೇರಿದರೆ ದೇವಾಲಯ ಅಂಗಳದಲ್ಲಿ ಹೆಜ್ಜೆ ಇಡಲು ಆಗದಂತ ಪರಿಸ್ಥಿತಿ ಇದೆ. ಡಾಂಬಾರಿನ ಮೇಲೆ ಬಿಸಿಲ ತಾಪ ತಟ್ಟದಂತೆ ಹಾಕಲಾಗಿರುವ ‘ವೈಟ್ ಟ್ಯಾಪಿಂಗ್’ ಮಾಸಿದ್ದು, ಅದರ ಮೇಲೆ ಕಾಲಿಟ್ಟರೂ ಸುಡುತ್ತಿದೆ. ಮಹಿಷಾಸುರ ಪ್ರತಿಮೆಯಿಂದ ಬರಿಗಾಲಿನಲ್ಲಿ ಬರುವುದು ಭಕ್ತರಿಗೆ ಕಷ್ಟವಾಗುತ್ತಿದೆ.
ಚರಂಡಿ ವ್ಯವಸ್ಥೆ ಸರಿಪಡಿಸಿ: ‘ದೇಗುಲದ ಗರ್ಭಗುಡಿಯ ಅಭಿಷೇಕದ ನೀರು ಹೋಗುವ ಪೈಪ್‌ಲೈನ್ ಕಟ್ಟಿತ್ತು. ಅದನ್ನು ಈಗಷ್ಟೇ ದುರಸ್ತಿಗೊಳಿಸಲಾಗಿದೆ. ಆದರೂ ಅಭಿಷೇಕ ಹಾಗೂ ಬಿದ್ದ ಮಳೆ ನೀರು ಸರಾಗವಾಗಿ ಹೋಗುತ್ತಿಲ್ಲ. ಚರಂಡಿಯನ್ನು ಇಲಿ, ಹೆಗ್ಗಣಗಳು ಹಾಳುಗೆಡುತ್ತಿವೆ’ ಎಂದು ದೂರುತ್ತಾರೆ ಸ್ಥಳೀಯ ನಿವಾಸಿ ರಾಜು.
ದಾರಿಯಲ್ಲೇ ಮಳಿಗೆದಾರರು: ‘ಬೆಟ್ಟದ ದೇವಸ್ಥಾನ ಮಾರ್ಗದ ಪಕ್ಕದ ಲ್ಲಿಯೇ ವ್ಯಾಪಾರಿಗಳು ಪರಿಕರಗಳನ್ನು ಹಾಕಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ಬಹು ಮಹಡಿ ಪಾರ್ಕಿಂಗ್ ಕಟ್ಟಡದಲ್ಲಿ ಮಳಿಗೆದಾರರಿಗೆ ಅವಕಾಶ ನೀಡಿದರೂ ಅಲ್ಲಿಗೆ ತೆರಳುತ್ತಿಲ್ಲ’ ಎಂದು ಹೋರಾಟಗಾರ ಅರವಿಂದ ಶರ್ಮಾ ‘ಪ್ರಜಾವಾಣಿ’ಗೆ ಹೇಳಿದರು.
‘ತಳ್ಳುವ ಗಾಡಿಗಳನ್ನು ರಸ್ತೆ ಬದಿ ನಿಲ್ಲಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಶಾಶ್ವತ ಪರಿಹಾರವನ್ನು ನೀಡಬೇಕು. ದಸರೆ, ಆಷಾಢ ಸಂದರ್ಭದಲ್ಲಿ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಹೆಚ್ಚಲಿದ್ದು, ಆ ವೇಳೆ ಜನರು ಓಡಾಡುವುದೇ ಕಷ್ಟವಾಗುತ್ತದೆ. ಉಳಿದ ದಿನಗಳಲ್ಲಿಯೂ ವ್ಯಾಪಾರಿ ಗಳಿಂದ ಜನಸಾಮಾನ್ಯರು ಕಿರಿಕಿರಿ ಅನುಭವಿಸುವಂತಾಗಿದೆ’ ಎಂದರು.
‘ಬೆಟ್ಟವನ್ನು ವಾಣಿಜ್ಯ ಕೇಂದ್ರವಾಗಿ ರೂಪಿಸಲಾಗುತ್ತಿದೆ. ಈಗಾಗಲೇ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಕಟ್ಟಲು ಮರಗಳ ಹನನ ನಡೆದಿದೆ. ಮಳೆ ಬಂದರೆ ಕಟ್ಟಡವೂ ಸೋರುತ್ತದೆ’ ಎಂದು ರಾಜು ಹೇಳಿದರು.
‘ಬಹುಮಹಡಿ ಪಾರ್ಕಿಂಗ್ ಕಟ್ಟಡದಲ್ಲಿ ಮಳಿಗೆಗಳನ್ನು ಕೊಟ್ಟಿದ್ದರೂ ಅಲ್ಲಿಗೆ ಹೋದರೆ ವ್ಯಾಪಾರವಾಗುವುದಿಲ್ಲ. ಹೀಗಾಗಿಯೇ ಮೊದಲಿದ್ದ ಮಳಿಗೆಗಳ ಸ್ಥಳದಲ್ಲಿಯೇ ಇದ್ದೇವೆ. ಭಕ್ತರು ಅಲ್ಲಿಗೆ ಭೇಟಿ ನೀಡುವ ಕಡ್ಡಾಯ ವ್ಯವಸ್ಥೆಯನ್ನು ಮುಜಾರಾಯಿ ಇಲಾಖೆ ಕಲ್ಪಿಸಬೇಕು’ ಎಂದು ವ್ಯಾಪಾರಿ ಭರತ್ ಒತ್ತಾಯಿಸಿದರು.
ದಸರೆ ಸಮೀಪಿಸುತ್ತಿದ್ದು, ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಭಕ್ತರಿಗೆ ಅನುಕೂಲ ಮಾಡಿಕೊಡಬೇಕುಅರವಿಂದ ಶರ್ಮಾ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.