ADVERTISEMENT

ಮೈಸೂರು | ಹೂವಿನ ದರ ಕುಸಿತ: ತರಕಾರಿ ಬೆಲೆ ಸ್ಥಿರ

ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ದುಬಾರಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 0:02 IST
Last Updated 10 ಜುಲೈ 2024, 0:02 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮೈಸೂರು: ಈ ವಾರ ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದ್ದು, ಶುಂಠಿ, ಬೆಳ್ಳುಳ್ಳಿ ಕೆ.ಜಿಗೆ ₹200ಕ್ಕೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ದುಬಾರಿಯಾಗಿವೆ.

ಕಳೆದ ಕೆಲವು ವಾರಗಳಿಂದ ಏರುಮುಖವಾಗಿದ್ದ ಟೊಮೆಟೊ ಬೆಲೆ ಅದೇ ಸ್ಥಿತಿಯಲ್ಲಿದ್ದು, ಇಳಿಕೆಯ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ತಿಂಗಳು ಆರಂಭದಲ್ಲಿ ₹15ಕ್ಕೆ ಮಾರಾಟವಾಗುತ್ತಿದ್ದ ಟೊಮೆಟೊ ಸದ್ಯ ₹40ಕ್ಕೆ ಬಿಕರಿಯಾಗುತ್ತಿದೆ. ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಬೆಳೆ ಹಾನಿಯಾಗಿರುವುದೂ ಬೆಲೆ ಏರಿಕೆಗೆ ಕಾರಣ. ಬೇಡಿಕೆ ಹೆಚ್ಚಿರುವ ಕಾರಣ ಮುಂದಿನ ದಿನಗಳ‌ಲ್ಲಿ ಬೆಲೆ ಮತ್ತಷ್ಟು ಹೆಚ್ಚಬಹುದು ಎನ್ನುತ್ತಾರೆ ವ್ಯಾಪಾರಿಗಳು.   

ADVERTISEMENT

ನಗರದ ಮಾರುಕಟ್ಟೆಯಲ್ಲಿ ಮಂಗಳವಾರ ಕೆ.ಜಿ ಈರುಳ್ಳಿ ₹40, ಆಲೂಗೆಡ್ಡೆ ₹40 ಮಾರಾಟವಾಗುತ್ತಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಸೌತೆ ಹಾಗೂ ನಿಂಬೆಗೆ ಬೇಡಿಕೆ ಕುಸಿದಿದ್ದು, ಬೆಲೆ ಸಹ ಇಳಿಕೆ ಆಗಿದೆ. ಸೌತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹20 ಹಾಗೂ ಒಂದು ನಿಂಬೆ ₹5ಕ್ಕೆ ಮಾರಾಟವಾಗುತ್ತಿದೆ. ಹಸಿ ಮೆಣಸಿನಕಾಯಿ ಕೆ.ಜಿಗೆ ₹100ಕ್ಕೆ ಏರಿಕೆ ಕಂಡಿದೆ.

ಕುಸಿದ ಹೂವಿನ ದರ: ಕಳೆದ ತಿಂಗಳು ದುಬಾರಿಯಾಗಿದ್ದ ಸೇವಂತಿಗೆ ಮಂಗಳವಾರ ಮೀಟರ್‌ಗೆ ₹100ರಂತೆ ವ್ಯಾಪಾರವಾಗುತ್ತಿದೆ. ಮಲ್ಲಿಗೆ, ಕಣಗಿಲೆ ಹೂ, ಮರಬಾಳೆ, ಕಾಕಡ ಕೆ.ಜಿಗೆ ₹40ಕ್ಕೆ ಗ್ರಾಹಕರ ಕೈ ಸೇರುತ್ತಿದೆ. ಇತರೆ ಹೂಗಳ ದರವೂ ಕುಸಿತವಾಗಿದೆ.

‘ಶುಭ ಸಮಾರಂಭಗಳು ಇಲ್ಲದೇ ಇರುವುದರಿಂದ ಉಳಿದ ಹೂಗಳೂ ಬೇಡಿಕೆ ಕಳೆದುಕೊಂಡಿವೆ. ಗುರುವಾರದ ನಂತರ ಹೂವಿನ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ. ಆಷಾಢ ಶುಕ್ರವಾರವನ್ನು ನಗರದಲ್ಲಿ ವಿಶೇಷವಾಗಿ ಆಚರಿಸುತ್ತಾರೆ, ಹೀಗಾಗಿ ಹೂವಿಗೆ ಬೇಡಿಕೆ ಹೆಚ್ಚಲಿದ್ದು, ದರವೂ ಏರಿಕೆಯಾಗಲಿದೆ. ಆಷಾಢ ಮುಗಿಯುವವರೆಗೂ ದರದ ಹಾವು ಏಣಿ ಆಟ ಮುಂದುವರೆಯಲಿದೆ’ ಎನ್ನುತ್ತಾರೆ ವ್ಯಾಪಾರಿ ರಾಜು.

ಹಣ್ಣಿನ ದರದಲ್ಲಿ ಈ ವಾರ ಹೆಚ್ಚು ವ್ಯತ್ಯಾಸ ಆಗಿಲ್ಲ. ಸೇಬು ಕೆ.ಜಿ.ಗೆ ₹120, ಮಾವು ₹100, ದ್ರಾಕ್ಷಿ ₹120, ಮೂಸಂಬಿ ₹80ಕ್ಕೆ ಮಾರಾಟವಾಗುತ್ತಿದೆ. ಏಲಕ್ಕಿ ಬಾಳೆ ದುಬಾರಿ ದರದಲ್ಲಿಯೇ ವ್ಯಾಪಾರ ಆಗುತ್ತಿದೆ. ಸೇಬು ಕೂಡ ಕೊಳ್ಳುವವರಿಗೆ ಹೊರೆಯಾಗಿದೆ. ಮಾರುಕಟ್ಟೆಯಲ್ಲಿ ನೇರಳೆಯ ಸವಿ ಹೆಚ್ಚಿದ್ದು, ಕೊಂಚ ಅಗ್ಗವಾಗಿಯೇ ವ್ಯಾಪಾರ ನಡೆದಿದೆ. ಮಾವು ಕ್ರಮೇಣ ಮಾರುಕಟ್ಟೆಯಿಂದ ನಿರ್ಗಮಿಸುತ್ತಿದೆ.

ಕೊತ್ತಂಬರಿ ಸಾಧಾರಣ ಕಟ್ಟು ಒಂದಕ್ಕೆ ₹10, ಸಬ್ಬಸ್ಸಿಗೆ ಹಾಗೂ ಮೆಂತ್ಯೆ ದಪ್ಪನೆಯ ಕಟ್ಟು ₹40–50 ಹಾಗೂ ಕೀರೆ, ಕಿಲ್‌ಕೀರೆ, ದಂಟು ಸಣ್ಣ ಕಟ್ಟು ₹5ಕ್ಕೆ ಒಂದರಂತೆ ವ್ಯಾಪಾರವಾಗುತ್ತಿದೆ. ಮಾಂಸ ಹಾಗೂ ಮೊಟ್ಟೆ ಬೆಲೆಯಲ್ಲೂ ವ್ಯತ್ಯಾಸ ಆಗಿಲ್ಲ. ರೆಡಿ ಚಿಕನ್‌ ಸರಾಸರಿ ₹220 ದರದಲ್ಲಿ ಮಾರಾಟವಾಗಿದ್ದರೆ, ಮಟನ್‌ ಕೆ.ಜಿ.ಗೆ ₹660–680 ಹಾಗೂ ಫಾರಂ ಕೋಳಿ ಮೊಟ್ಟೆ 1ಕ್ಕೆ ₹6ರಂತೆ ವ್ಯಾಪಾರ ಆಗುತ್ತಿದೆ. ಸಮುದ್ರ ಮೀನು ಮಾತ್ರ ತುಟ್ಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.