ಮೈಸೂರು: ಇಲ್ಲಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು (ಸಿಎಫ್‌ಟಿಆರ್‌ಐ) ಸಿರಿಧಾನ್ಯದ ಬನ್ ತಯಾರಿಸಿದ್ದು, ‘ಮೆಕ್‌ಡೊನಾಲ್ಡ್’ ಕಂಪನಿಯು ಬರ್ಗರ್‌ನಲ್ಲಿ ಬಳಸಲಿದೆ.
‘ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬನ್‌ನಲ್ಲಿ ಜೋಳ, ರಾಗಿ, ಸಜ್ಜೆ, ಬರಗು ಹಾಗೂ ಹಾರಕ ಧಾನ್ಯಗಳಿವೆ’ ಎಂದು ಸಂಸ್ಥೆಯ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್ ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಂಪನಿಯು ಸಲ್ಲಿಸಿದ ಪ್ರಸ್ತಾವದ ಮೇರೆಗೆ ಮೂರು ತಿಂಗಳ ಹಿಂದೆ ಒಡಂಬಡಿಕೆ ಮಾಡಿಕೊಂಡ ನಂತರ ಸಂಸ್ಥೆಯ ವಿಜ್ಞಾನಿಗಳು ಬನ್ ಅಭಿವೃದ್ಧಿಪಡಿಸಿದ್ದಾರೆ. ಐದು ಸಿರಿಧಾನ್ಯಗಳ ಶೇ 22ರಷ್ಟು ಸಾರವನ್ನು ಬನ್ ಒಳಗೊಂಡಿದ್ದು, ಮಿಕ್ಕಿದ್ದು ಗೋಧಿ ಅಂಶವಾಗಿರುವುದರಿಂದ ಆಕಾರ, ವಿನ್ಯಾಸ ಅಷ್ಟೇ ಉತ್ಕೃಷ್ಟವಾಗಿರಲಿದೆ’ ಎಂದರು.
‘ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹದ ಪ್ರಯುಕ್ತ ಆವಿಷ್ಕರಿಸಿದ ಹೊಸ ಉತ್ಪನ್ನವನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಾಗಿದೆ. ಸಿರಿಧಾನ್ಯಗಳು ದೇಶದ ಪಾರಂಪರಿಕ ಆಹಾರ ಪದ್ಧತಿಯಲ್ಲಿ ಮಹತ್ವದ ಸ್ಥಾನ ಗಳಿಸಿದ್ದರೂ ದಶಕಗಳ ಹಿಂದೆ ಅವುಗಳ ಬಳಕೆ ಕಡಿಮೆಯಾಗಿತ್ತು. ಆರೋಗ್ಯದ ಅರಿವು ಮೂಡುತ್ತಿರುವುದರಿಂದ ಈಗ ಹೆಚ್ಚು ಬಳಕೆಯಾಗುತ್ತಿದೆ’ ಎಂದರು.
‘ಮೆಕ್‌ಡೊನಾಲ್ಡ್‌ನಂಥ ಆಹಾರೋತ್ಪನ್ನ ಕಂಪನಿ ಸ್ಥಳೀಯ ಆಹಾರ ಪದ್ಧತಿ ಬಗ್ಗೆ ಆಸಕ್ತಿ ವಹಿಸುತ್ತಿರುವುದು ಆಶಾದಾಯಕ. ನುಗ್ಗೆಸೊಪ್ಪಿನ ಮಿಠಾಯಿ, ಗ್ಲುಟೇನ್ ಮುಕ್ತ ಬೇಕರಿ ತಿನಿಸುಗಳಾದ ಕೇಕ್– ಬಿಸ್ಕೆಟ್, ಬಕ್‌ವೀಟ್ ನ್ಯೂಡಲ್ಸ್, ಕಾಫಿ ಎಲೆಯಿಂದ ಪಾನೀಯ, ತೆಂಗಿನಕಾಯಿ ಎಣ್ಣೆ, ದೋಸಾ ಬಟರ್ ಸೇರಿದಂತೆ ಈಗಾಗಲೇ 400ಕ್ಕೂ ಹೆಚ್ಚು ಉತ್ಪನ್ನಗಳನ್ನು ಸಂಸ್ಥೆಯು ಆವಿಷ್ಕರಿಸಿದೆ’ ಎಂದರು.
‘ಗ್ರಾಹಕರ ಅಭಿರುಚಿಗೆ ತಕ್ಕಂತೆ ದೇಶದ ಉತ್ಕೃಷ್ಟ ಆಹಾರ ಪದ್ಧತಿಯಿಂದ ಪ್ರಭಾವಿತವಾದ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಂಸ್ಥೆ ಶ್ರಮಿಸಲಿದೆ. ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ, ಕರ್ನಾಟಕ, ತಮಿಳುನಾಡು, ಕೇರಳದಲ್ಲಿನ ಮೆಕ್‌ಡೊನಾಲ್ಡ್ ಮಳಿಗೆಗಳಲ್ಲಿ ಬನ್ ಸಿಗಲಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.