ಮೈಸೂರು: ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಹಗರಣದ ಹಿನ್ನೆಲೆಯಲ್ಲಿ ಬಿ.ನಾಗೆಂದ್ರ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಡಾದಲ್ಲಿ ₹ 5 ಸಾವಿರ ಕೋಟಿಗೂ ಅಧಿಕ ಅವ್ಯವಹಾರದ ಆರೋಪ ಇದ್ದರೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ತಾನು ಬೆಳೆಸಿದ ನಾಯಕನೆಂದು ಮೃದುವಾಗಿದ್ದಾರೆಯೇ’ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಂಗಳವಾರ ಇಲ್ಲಿ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾಲ್ಮೀಕಿ ನಿಗಮದ ಅಧಿಕಾರಿಗಳ ತಲೆದಂಡವಾಗಿದೆ. ಆದರೆ ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಹಾಗೂ ಡಿ.ಬಿ.ನಟೇಶ್ ಅವರನ್ನು ವರ್ಗಾಯಿಸಿ ಸರ್ಕಾರ ಸುಮ್ಮನಾಗಿದೆ. ನಗರಾಭಿವೃದ್ಧಿ ಸಚಿವರ ಕಚೇರಿಯಲ್ಲೇ ಅವರು ಅವ್ಯವಹಾರ ಮುಂದುವರೆಸಿದ್ದಾರೆ’ ಎಂದು ಆರೋಪಿಸಿದರು.
‘ಬಿ.ನಾಗೇಂದ್ರ ಜೈಲಿನಲ್ಲಿದ್ದಾರೆ. ಹಾಗಿದ್ದರೆ, ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯ ಎಲ್ಲಿಗೆ ಹೋಗಬೇಕು? ನಾಯಕ ಜನಾಂಗಕ್ಕೊಂದು ತೀರ್ಪು, ಕುರುಬ ಜನಾಂಗದವರಿಗೊಂದು ನಿಯಮ ಸಲ್ಲ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಇತರೆ ಪಕ್ಷದವರ ಕಡೆ ಕೈ ತೋರಿಸುವುದು ಬಿಟ್ಟು, 50:50 ಅನುಪಾತದಲ್ಲಿ ನಿವೇಶನ ಪಡೆದವರ ಹಾಗೂ ಮುಡಾದಲ್ಲಿನ ಹಗರಣದ ಬಗ್ಗೆ ಸ್ಪಷ್ಟನೆ ನೀಡಲಿ’ ಎಂದು ಆಗ್ರಹಿಸಿದರು.
‘ಇತರೆ ಪಕ್ಷದವರ ಬಗ್ಗೆ ಆರೋಪಿಸುವವರು ಕಾಂಗ್ರೆಸ್ ಪಕ್ಷದವರ ಹೆಸರು ಯಾಕೆ ಹೇಳುತ್ತಿಲ್ಲ? ಹಿನಕಲ್ ಪಾಪಣ್ಣ ಅವರ ಬಗ್ಗೆ ಮಾತನಾಡಿ. ಆಡಳಿತಕ್ಕೆ ಬಂದ ಒಂದೇ ವರ್ಷದಲ್ಲಿ ರಾಜ್ಯ ಸರ್ಕಾರ ಹಗರಣದಿಂದ ತತ್ತರಿಸಿ ಹೋಗಿದೆ. ಮುಖ್ಯಮಂತ್ರಿ ಏಕಾಂಗಿಯಾಗಿದ್ದಾರೆ. ಹೆದರಿದ್ದಾರೆ. ಏನನ್ನೂ ಸಮರ್ಥಿಸಲು ಹೋಗಿ ಮತ್ತೇನನ್ನೋ ಹೇಳುತ್ತಿದ್ದಾರೆ. ಅವರು ಪಡೆದಿರುವ 14 ನಿವೇಶನಗಳನ್ನು ಸರ್ಕಾರಕ್ಕೆ ಒಪ್ಪಿಸಿ, ತನಿಖೆ ನಡೆಸಲು ಸಹಕಾರ ನೀಡಿ, ಪ್ರಕರಣಕ್ಕೆ ತಾರ್ಕಿಕ ಅಂತ್ಯ ದೊರಕಿಸಲಿ’ ಎಂದರು.
‘ವಿರೋಧ ಪಕ್ಷಗಳು ಮುಖ್ಯಮಂತ್ರಿ ಕುಟುಂಬದ ತೆಜೋವಧೆಯನ್ನೇನೂ ಮಾಡಿಲ್ಲ. ಅವರೇ ತಾವು ನಡೆಸಿದ ಪತ್ರಿಕಾಗೋಷ್ಠಿಯ ಅಂಶಗಳನ್ನು ಜಾಹೀರಾತು ರೀತಿ ಪ್ರಕಟಿಸಿ ಹರಾಜು ಹಾಕುತ್ತಿದ್ದಾರೆ. ಪ್ರಾಮಾಣಿಕ ರಾಜಕಾರಣ ಮಾಡುತ್ತಿದ್ದ ಸಿದ್ದರಾಮಯ್ಯ ಅವರ ಶ್ವೇತವಸ್ತ್ರದಲ್ಲಿ, ಜೊತೆಗಾರರಿಂದ ಕಪ್ಪು ಚುಕ್ಕೆ ಕಾಣಿಸುತ್ತಿದೆ. ಅದು ಪೂರ್ತಿ ಆವರಿಸುವ ಮೊದಲು ಎಚ್ಚೆತ್ತುಕೊಳ್ಳಲಿ. ಪತ್ನಿ ಪಾರ್ವತಿ ಅವರಿಂದ ಸಿದ್ದರಾಮಯ್ಯ ಅವರಿಗೆ ಗೌರವ ಹೆಚ್ಚಿತ್ತು, ಆದರೆ ಅವರ ಹೆಸರನ್ನೇ ಬೀದಿಗೆ ತಂದಿದ್ದಾರೆ’ ಎಂದರು.
‘ನಾನು 5 ಕುಂಟೆ ಜಮೀನು ಪಡೆದಿದ್ದೇನೆ ಎಂದು ಭೈರತಿ ಸುರೇಶ್ ಆರೋಪಿಸಿದ್ದಾರೆ. ಅದಕ್ಕೆ ಮೊದಲೇ ಸ್ಪಷ್ಟನೆ ನೀಡಿದ್ದೇನೆ. ಅದು, 60/40 ಅನುಪಾತದಲ್ಲಿ ನಿಯಮಬದ್ಧವಾಗಿ ಪಡೆದ ಭೂಮಿ. ಮುಖ್ಯಮಂತ್ರಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಸುಳ್ಳು ಆರೋಪ ಮಾಡುವುದು ಸಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.