ಮೈಸೂರು: ‘ಛಾಯಾಗ್ರಾಹಕರಿಗೆ ತಾಳ್ಮೆ ಅಗತ್ಯ. ಆಗ ಉತ್ತಮ ಚಿತ್ರಗಳನ್ನು ತೆಗೆಯಬಹುದು’ ಎಂದು ಡಿಸಿಎಫ್ ವಿ.ಕರಿಕಾಳನ್ ಹೇಳಿದರು.
ನಗರದ ಜೆಎಲ್‌ಬಿ ರಸ್ತೆಯ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ‘ಮೈಸೂರು ಫೋಟೊಗ್ರಫಿ ಅಸೋಸಿಯೇಷನ್ ಟ್ರಸ್ಟ್’ ಅನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಛಾಯಾಗ್ರಹಣಕ್ಕೆ ಮುಖ್ಯವಾಗಿ ಆಸಕ್ತಿ ಇರಬೇಕಾಗುತ್ತದೆ. ನಾನು ನಗರದಲ್ಲಿ ವಾಸವಿದ್ದರೂ ವನ್ಯಜೀವಿಗಳ ಛಾಯಾಚಿತ್ರಗಳನ್ನು ತೆಗೆಯುವ ಮೂಲಕ ನನ್ನ ಛಾಯಾಗ್ರಹಣದ ಹವ್ಯಾಸ ಆರಂಭವಾಯಿತು. ಛಾಯಾಗ್ರಾಹಕರಿಗೂ ಮತ್ತು ಅರಣ್ಯಕ್ಕೂ ಒಂದು ರೀತಿ ಅವಿನಾಭಾವ ಸಂಬಂಧವಿದೆ’ ಎಂದರು.
‘ಛಾಯಾಚಿತ್ರಗಾರ ಉತ್ತಮ ಚಿತ್ರ ತೆಗೆಯಲು ಸೃಜನಶೀಲತೆ ಹೊಂದಿರಬೇಕು’ ಎಂದು ವಾರ್ತಾ ಇಲಾಖೆಯ ನಿವೃತ್ತ ಅಧಿಕಾರಿ ಟಿ. ಕೆಂಪಣ್ಣ ಹೇಳಿದರು.
‘ಫೋಟೊಗಳಿಗೆ ತನ್ನದೇ ಆದ ವಿಶಿಷ್ಟ ಶಕ್ತಿ ಇದೆ. ಆದ್ದರಿಂದಲೇ ಅವು ಐತಿಹಾಸಿಕ ದಾಖಲೆಯಾಗಿ ಉಳಿಯುತ್ತವೆ. ಇದಕ್ಕೆ ತಕ್ಕಂತೆ, ಫೋಟೊಗ್ರಾಫರ್‌ಗಳಿಗೆ ಕ್ಯಾಮೆರಾದ ಜ್ಞಾನ ಇರಬೇಕಾಗುತ್ತದೆ. ತಾವು ಬಳಸುವ ಕ್ಯಾಮೆರಾ, ಲೆನ್ಸ್‌ಗಳ ತಾಂತ್ರಿಕ ಮಾಹಿತಿಯನ್ನು ಹೊಂದಿರಬೇಕಾಗುತ್ತದೆ’ ಎಂದು ತಿಳಿಸಿದರು.
‘ಮೈಸೂರಿನ ಛಾಯಾಗ್ರಾಹಕರು ಪಕ್ಷಿಗಳು, ವನ್ಯಜೀವಿಗಳ ಫೋಟೊಗಳ ಜೊತೆಗೆ, ವಿಭಿನ್ನ ರೀತಿಯ ಚಿತ್ರಗಳು ಹಾಗೂ ಸಮಾಜದಲ್ಲಿನ ಸಮಸ್ಯೆಗಳನ್ನು ಬಿಂಬಿಸುವುದಕ್ಕೂ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.
ಗಾಯಕಿ ಶ್ವೇತಾ ಮಡಪ್ಪಾಡಿ, ಎ.ಶಾಂತಪ್ಪ, ಎಂ.ಎನ್. ಮುರಳೀಧರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.