ADVERTISEMENT

‘ಕದಳಿ’ಗೆ ಬೆಳ್ಳಿಹಬ್ಬದ ಸಂಭ್ರಮ

‘ಮನೆಮನೆಗೆ ಶರಣೆಯ ಆಗಮನ’ ಆಯೋಜನೆ l ಸೇವಾ ಕಾರ್ಯ ನಿರಂತರ

ಮೋಹನ್ ಕುಮಾರ ಸಿ.
Published 16 ಜೂನ್ 2024, 7:46 IST
Last Updated 16 ಜೂನ್ 2024, 7:46 IST
<div class="paragraphs"><p>ಕದಳಿ ಮಹಿಳಾ ವೇದಿಕೆಯ ಸದಸ್ಯೆಯರು</p></div>

ಕದಳಿ ಮಹಿಳಾ ವೇದಿಕೆಯ ಸದಸ್ಯೆಯರು

   

ಮೈಸೂರು: ಮಹಿಳೆಯ ಸಂಘಟನೆ ಹಾಗೂ ಶರಣ ಸಾಹಿತ್ಯವನ್ನು ಪ್ರಚಾರ ಮಾಡಲು ‘ಶರಣ ಸಾಹಿತ್ಯ ಪರಿಷತ್‌’ನ ಅಂಗಸಂಸ್ಥೆಯಾಗಿ ಸ್ಥಾಪನೆಯಾದ ‘ಕದಳಿ ಮಹಿಳಾ ವೇದಿಕೆ’ಗೆ ರಜತ ಮಹೋತ್ಸವದ ಸಂಭ್ರಮ.

‘ಕದಳಿ’, 12ನೇ ಶತಮಾನದ ವಚನಕಾರ್ತಿ ಅಕ್ಕಮಹಾದೇವಿ ಐಕ್ಯ ಸ್ಥಳ. ಅದೇ ಹೆಸರಿನಲ್ಲಿ 2000ರ ಮೇ 7ರಂದು ನಗರದಲ್ಲಿ ಸ್ಥಾಪನೆಯಾದ ವೇದಿಕೆಯು ಕಳೆದ ಎರಡೂವರೆ ದಶಕದಿಂದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವೆಯಲ್ಲಿ ನಿರತವಾಗಿದೆ. 

ADVERTISEMENT

ರಜತ ಮಹೋತ್ಸವ ಪ್ರಯುಕ್ತ ಇದೇ 12ರಿಂದ ಜುಲೈ 7ರ ವರೆಗೆ ‘ಮನೆಮನೆಗೆ ಶರಣೆಯರ ಆಗಮನ’ ಕಾರ್ಯಕ್ರಮ ಆಯೋಜಿಸಿದ್ದು, 25 ಲೇಖಕರು, ವಿಮರ್ಶಕರು 25 ಮನೆಗಳಲ್ಲಿ ವಚನಕಾರ್ತಿಯರ ಬಗ್ಗೆ ಉಪನ್ಯಾಸ ನೀಡುತ್ತಿದ್ದಾರೆ. ಈಗಾಗಲೇ ಪ್ರೊ.ಎಂ.ಕೃಷ್ಣೇಗೌಡ, ಪ್ರೊ.ಮೈಸೂರು ಕೃಷ್ಣಮೂರ್ತಿ, ಮಾಲತಿ, ಮಗು ಸದಾನಂದಯ್ಯ ಅವರು ಉಪನ್ಯಾಸ ನೀಡಿದ್ದಾರೆ. 

‘ಅಕ್ಕಮಹಾದೇವಿ, ಬೊಂತಾದೇವಿ, ಮಹಾದೇವಿ, ಕದಿರೆ ರೆಮ್ಮವ್ವೆ– ಕಾಯಕದ ಕಾಳವ್ವೆ, ಆಯ್ದಕ್ಕಿ ಲಕ್ಕಮ್ಮ, ಕೇತಲದೇವಿ, ಕಾಲಕಣ್ಣಿಯ ಕಾಮಮ್ಮ, ನೀಲಾಂಬಿಕೆ ಸೇರಿದಂತೆ 25 ವಚನಕಾರ್ತಿಯರ ವಚನ ವ್ಯಾಖ್ಯಾನ ನಡೆಯುತ್ತಿದೆ. ವಚನಗಳು ಜನರ ನಾಲಿಗೆಯಲ್ಲಿ ನಲಿಯಬೇಕೆಂಬುದೇ ನಮ್ಮ ಉದ್ದೇಶ ’ ಎನ್ನುತ್ತಾರೆ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ.

‘ವಚನಗಾಯನ, ಕಂಠಪಾಠ, ವಚನ ವ್ಯಾಖ್ಯಾನ, ಚರ್ಚಾ ಸ್ಪರ್ಧೆಗಳನ್ನು ಶಾಲಾ– ಕಾಲೇಜುಗಳ ಮಕ್ಕಳಿಗೆ ಪ್ರತಿ ವರ್ಷವೂ ಆಯೋಜಿಸಿ ಬಹುಮಾನ ನೀಡಲಾಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿದರು.

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕದಳಿ ವೇದಿಕೆಗಳಿದ್ದು, ಮೈಸೂರಿನದು ಎರಡನೇ ವೇದಿಕೆ. ಇಲ್ಲಿನ ವಿವಿಧ ಬಡಾವಣೆಯ 21 ಮಹಿಳಾ ಬಳಗಗಳು ವೇದಿಕೆಯ ಜೊತೆ ಕೈ ಜೋಡಿಸಿದ್ದು, ಒಗ್ಗಟ್ಟಿನಿಂದ ವಚನಕಾರರರ ಆಶಯಗಳನ್ನು ಮನೆಮನೆಗಳಿಗೆ ತಲುಪಿಸುತ್ತಿದ್ದಾರೆ’ ಎಂದರು.

‘2000 ಹಾಗೂ 2018ರಲ್ಲಿ ರಾಜ್ಯ ಮಟ್ಟದ ಸಮ್ಮೇಳನವನ್ನು ನಗರದಲ್ಲಿ ಆಯೋಜಿಸಲಾಗಿತ್ತು. ಕೋವಿಡ್‌ ಹೊರತು ಪಡಿಸಿ ಉಳಿದೆಲ್ಲ ವರ್ಷವೂ ಸಾಧಕ ಮಹಿಳೆಯರಿಗೆ ‘ಕದಳಿಶ್ರೀ’ ಪ್ರಶಸ್ತಿ ನೀಡಲಾಗಿದೆ. ಬಿ.ಜಯಶ್ರೀ, ವಸುಂಧರಾ ದೊರೆಸ್ವಾಮಿ ವೈಜಯಂತಿ ಕಾಶಿ, ಆಶಾ ಬೆನಕಪ್ಪ, ಧರಣಿದೇವಿ ಮಾಲಗತ್ತಿ ಸೇರಿದಂತೆ 22 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ’ ಎನ್ನುತ್ತಾರೆ ಅವರು.

ವೈದ್ಯರಿಗೆ ಪ್ರಶಸ್ತಿ: ‘ವೈದ್ಯ ಮೃತ್ಯುಂಜಯಪ್ಪ ಅವರ ಹೆಸರಿನಲ್ಲಿ ₹ 1 ಲಕ್ಷ ಠೇವಣಿ ಇಡಲಾಗಿದ್ದು, ಅದರ ಬಡ್ಡಿಯಲ್ಲಿ ‍ಪ್ರತಿ ವರ್ಷ ಸಾಧಕ ವೈದ್ಯರನ್ನು ಗುರುತಿಸಿ ‘ಡಾ.ಮೃತ್ಯುಂಜಯಪ್ಪ ಆದರ್ಶ ವೈದ್ಯ’ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ರಮಣರಾವ್, ಡಾ.ಮಣಿಕರ್ಣಿಕಾ, ಡಾ.ಶಾಲಿನಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ₹ 25 ಸಾವಿರ ಗೌರವಧನವನ್ನು ಮೃತ್ಯುಂಜಯಪ್ಪ ಅವರ ಕುಟುಂಬವೇ ಭರಿಸುತ್ತಿದೆ’ ಎಂದು ಶಾರದಾ ಹೇಳಿದರು.

ಪ್ರತಿ ಎರಡು ವರ್ಷಕ್ಕೊಮ್ಮೆ ವೇದಿಕೆಯ ಸದಸ್ಯರು ಜವಾಬ್ದಾರಿಯನ್ನು ಮರುಹಂಚಿಕೊಳ್ಳುವರು. ಕಾರ್ಯದರ್ಶಿ ಯಾಗಿ ವಾಗ್ದೇವಿ, ಉಪಾಧ್ಯಾಕ್ಷರಾಗಿ ಸುಧಾ ಮೃತ್ಯುಂಜಯಪ್ಪ, ರಾಜೇಶ್ವರಿ ಮಲ್ಲಿಕಾರ್ಜುನಪ್ಪ, ಶೈಲಾ ಸಿದ್ದರಾಮಪ್ಪ, ಕೋಶಾಧ್ಯಕ್ಷರಾಗಿ ಸುಮಾ ಪ್ರಕಾಶ್‌, ಉಮಾ ಮಹದೇವಸ್ವಾಮಿ, ಸಲಹೆಗಾರರಾಗಿ ನೀಲಾಂಬಿಕಾ, ಜಯಾಗೌಡ, ಶಶಿಕಲಾ ಸುಬ್ಬಣ್ಣ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

2000ರ ಮೇ 7ರಂದು ಸ್ಥಾಪನೆಯಾದ ವೇದಿಕೆ ಎರಡೂವರೆ ದಶಕದಿಂದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವೆ

ವಚನ ಗಾಯನದ ‘ಕದಳಿ ಯಾತ್ರೆ’

ಜೆ.ಪಿ.ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದಿಂದ ಅಕ್ಕಮಹಾದೇವಿ ಪ್ರತಿಮಾ ಸ್ಥಳದವರೆಗೆ 125 ಮಹಿಳೆಯರು ವಚನವನ್ನು ಹಾಡುತ್ತಾ ಹೆಜ್ಜೆ ಹಾಕುವುದೇ ‘ಕದಳಿ ಯಾತ್ರೆ’. ‍ಪ್ರತಿ ಮನೆಯವರು ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸುವುದು ವಿಶೇಷ!

ಇದಲ್ಲದೇ ಶರಣ ಕ್ಷೇತ್ರ ಹಾಗೂ ಮಠಮಾನ್ಯಗಳಲ್ಲೂ ವೇದಿಕೆಯು ಪ್ರವಾಸ ಆಯೋಜಿಸುತ್ತದೆ. ಆರೋಗ್ಯ ಕೇಂದ್ರಗಳಿಗೆ ಶುದ್ಧ ಕುಡಿಯುವ ಯಂತ್ರ, ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ಬೀದಿಬದಿ ವ್ಯಾಪಾರಿಗಳಿಗೆ ಮಳೆ ಛತ್ರಿಗಳು, ಅಂಗವಿಕಲರಿಗೆ ವ್ಹೀಲ್‌ಚೇರ್‌ ನೀಡಿದೆ. ಈ ಬಾರಿ ಅಕ್ಕಮಹಾದೇವಿ ಅವರ ಕೃತಿಯನ್ನೂ ಹೊರತರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.