ADVERTISEMENT

ವೈಭವದ ಸುತ್ತೂರು ರಥೋತ್ಸವ: ಹರಿದು ಬಂದ ಭಕ್ತರು

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 8:14 IST
Last Updated 20 ಜನವರಿ 2023, 8:14 IST
   

ಸುತ್ತೂರು (ಮೈಸೂರು ಜಿಲ್ಲೆ): ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವ ಶುಕ್ರವಾರ ಬೆಳಿಗ್ಗೆ ಅದ್ಧೂರಿಯಾಗಿ ನೆರವೇರಿತು‌.

ಕೋವಿಡ್ ಕಾರಣ ಕಳೆದೆರಡು ವರ್ಷಗಳಿಂದ ಕಳೆಗುಂದಿದ್ದ ಜಾತ್ರಾ ಮಹೋತ್ಸವ ಗತ ವೈಭವಕ್ಕೆ ಮರಳಿತು.

ಬೆಳಿಗ್ಗೆ 10.50ಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಸಚಿವ ಸುನಿಲ್ ಕುಮಾರ್ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಕುಶಾಲತೋಪುಗಳು ಸಿಡಿದವು. ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು.

ADVERTISEMENT

ಗ್ರಾಮದ ಕತೃಗದ್ದುಗೆಯ ಆವರಣದಲ್ಲಿ ಜಮಾಯಿಸಿದ್ದ ನಾಡಿನ ವಿವಿಧ ಮೂಲೆಗಳಿಂದ ಹರಿದು ಬಂದಿದ್ದ ಭಕ್ತರು ರಥಕ್ಕೆ ಹಣ್ಣು-ಜವನ ಎಸೆದು ನಮಿಸಿದರು. ಹರಕೆ ಕಾರ್ಯ ನೆರವೇರಿಸಿದ ಸಂತೃಪ್ತಿ ಅವರಲ್ಲಿ ಮೂಡಿತು.

ನೂರಾರು ಮಂದಿ ಹೆಬ್ಬಾವಿನ ಗಾತ್ರದ ರಥದ ಮಿಣಿಯನ್ನು ಹಿಡಿದು ಎಳೆಯುತ್ತಿದ್ದರೆ ರಾಜಠೀವಿಯಿಂದ ರಥವು ಸಾಗಿತು. ಮಠದ ಗುರು ಪರಂಪರೆಗೆ ಭಕ್ತರು ಜಯಕಾರ ಹಾಕಿದರು. ಜಾನಪದ ಕಲಾತಂಡಗಳೊಂದಿಗೆ ರಥವು ಕ್ರಮಿಸಿತು. ತಮಟೆ, ನಗಾರಿ ವಾದ್ಯಗಳ ನಾದ ಮುಗಿಲುಮುಟ್ಟಿತು.

ಮುಂದೆ ಸಾಗುತ್ತಿದ್ದ ಚಿಕ್ಕತೇರಿಗೂ ಭಕ್ತವೃಂದ ತಲೆಬಾಗಿ ನಮಸ್ಕರಿಸಿತು. ಹೂ ಪ್ರಸಾದ ಸ್ವೀಕರಿಸಿ ಕೈಮುಗಿಯಿತು. ಸುತ್ತೂರು ಮೂಲಮಠದವರೆಗೂ ಭಕ್ತರು ರಥದೊಂದಿಗೆ ಹೆಜ್ಜೆ ಹಾಕಿದರು.

ಗಮನಸೆಳೆದ ಕಲಾತಂಡಗಳು: ರಥೋತ್ಸವದ ಮೆರವಣಿಗೆಯಲ್ಲಿ ಸಾಗಿದ 38 ಕಲಾತಂಡಗಳು ದಸರೆಯನ್ನು ನೆನಪಿಸಿದವು.

ನಂದಿಧ್ವಜ ಕುಣಿತ ರಥದ ಮುಂಭಾಗವಿತ್ತು. ನಾಗಮಂಗಲದ ಮಹದೇವಪ್ಪ, ಕಿರಾಳು ಮಹೇಶ್ ನೇತೃತ್ವದ ಲಿಂಗಧೀರರು ಹೆಜ್ಜೆ ಹಾಕುವ ಮೂಲಕ ಮೆರವಣಿಗೆಯ ಚೆಲುವು ಹೆಚ್ಚಿಸಿದರು. ವೀರಭದ್ರನ ವೇಷದಲ್ಲಿ ಅವರ ನೃತ್ಯ ನೋಡಿ ಬೆಚ್ಚಿದ ಮಕ್ಕಳು ಪೋಷಕರನ್ನು ತಬ್ಬಿದರು.

ನಾದಸ್ವರದಲ್ಲಿ 7 ಮಂದಿ ಕಲಾವಿದರು ಭಾಗಿಯಾದರು. ಶ್ರೀರಂಗಪಟ್ಟಣದ ಗುರುಪ್ರಸಾದ್ ನೇತೃತ್ವದ 6 ಮಂದಿ ಕಲಾವಿದರಿಂದ ಹೊರಹೊಮ್ಮುತ್ತಿದ್ದ ಸ್ಯಾಕ್ಸೋಪೋನ್‌ ನಾದವು ಮೋಡಿ ಮಾಡಿತು. ಸುತ್ತೂರು ಉಚಿತ ಶಾಲೆಯ ಮಕ್ಕಳು ವೀರಗಾಸೆ ಪ್ರದರ್ಶಿಸಿದರು.

ಯಡಹಳ್ಳಿಯ ಪ್ರಕಾಶ್, ಬೀಡನಹಳ್ಳಿಯ ಶಿವು ಅವರ ಪೂಜಾಕುಣಿತ, ನಂಜನಗೂಡಿನ ಮಹೇಶ್ ಅವರ ಗಾರುಡಿ ಗೊಂಬೆಗಳು ಎಲ್ಲರನ್ನು ಸೆಳೆದವು. ಶಿವಮೊಗ್ಗದ ಗಣೇಶ್, ಬೆಂಡೆಕಟ್ಟೆ ಮಹೇಶ್, ಪಾಂಡವಪುರದ ಶಿವಕುಮಾರ್ ಅವರ ಡೊಳ್ಳು ಕುಣಿತದ ಸದ್ದು ಧಿಮಿಧಿಮಿಸಿತು.

ಶಿವಮೊಗ್ಗದ ಯುವರಾಜ್ ಅವರ ಜಾಂಜ್ ಮೇಳ, ತಳಗವಾಡಿಯ ಕೊರವಂಜಿ ಕೋಲಾಟ ಗಮನ ಸೆಳೆದವು. ರುದ್ರ ವೇಷದಲ್ಲಿದ್ದ ತಾಯೂರಿನ ಸಿದ್ದರಾಜು ಅವರ ಮರಗಾಲು ಸೂಜಿಗಲ್ಲಿನಂತೆ ಆಕರ್ಷಿಸಿತು‌.

ಮೈಸೂರಿನ ರವಿಚಂದ್ರ ಮತ್ತು ತಂಡದ ಕಂಸಾಳೆ, ಕೆ.ಆರ್.ನಗರದ ಎ.ಪಿ.ಕೃಷ್ಣೇಗೌಡ ತಂಡದ ಹುಲಿವೇಷ, ಸುತ್ತೂರು ಗ್ರಾಮದವರ ವೀರಮಕ್ಕಳಕುಣಿತ, ಧಾರವಾಡದ ಚನ್ನಯ್ಯ ಕಡ್ಲಿಮಠ್ ತಂಡದ ದೊಣ್ಣೆವರಸೆ ಮೋಡಿ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.