ADVERTISEMENT

ಮೈಸೂರು: ನಗರಕ್ಕೆ ಬೇಕಿದೆ ‘ಅಂತರ್ಜಲ’ ವಿಮೆ!

ಭವಿಷ್ಯದಲ್ಲಿ ಕಾವೇರಿ ನೀರು ಕೊರತೆ: ‘ಜಲನಿಧಿ‘ಗೆ ಬೇಕಿದೆ ಪೂರ್ಣಯ್ಯ ನಾಲೆ

ಮೋಹನ್‌ ಕುಮಾರ್‌ ಸಿ.
Published 6 ಡಿಸೆಂಬರ್ 2023, 6:32 IST
Last Updated 6 ಡಿಸೆಂಬರ್ 2023, 6:32 IST
ಪೂರ್ಣಯ್ಯ ನಾಲೆಯ ಹರಿವಿನ ಹಾದಿ
ಪೂರ್ಣಯ್ಯ ನಾಲೆಯ ಹರಿವಿನ ಹಾದಿ   

ಮೈಸೂರು: ‘ಜಾಗತಿಕ ತಾಪಮಾನ ಏರಿಕೆಯಿಂದ ಭವಿಷ್ಯದಲ್ಲಿ ಬರ, ಇಲ್ಲವೇ ದಿಢೀರ್‌ ‍ಪ್ರವಾಹ ಕಾಡಲಿದೆ. ಹೀಗಾಗಿ, ಭವಿಷ್ಯದಲ್ಲಿ ಮೈಸೂರು ನಗರಕ್ಕೆ ಕಾವೇರಿ ನೀರಿನ ಪೂರೈಕೆಯಲ್ಲಿ ಕೊರತೆ ಎದುರಾದರೆ?’

‘ಹೀಗೊಂದು ಪ್ರಶ್ನೆಯನ್ನು ಪ್ರಜ್ಞಾವಂತರಾದವರು ಹಾಕಿಕೊಳ್ಳಬೇಕು. ನಗರವನ್ನು ಕಟ್ಟಿದ ಮಹಾರಾಜರು ಶತಮಾನಗಳ ಹಿಂದೆಯೇ ನೀರಿಗೆ ಕೊರತೆಯಾಗದಂತೆ ‘ಅಂತರ್ಜಲ’ದ ವಿಮೆಯನ್ನು ಮಾಡಿಟ್ಟಿದ್ದರು. ವಿಮೆಯ ಹಣವನ್ನೀಗ ಬಡಾವಣೆ, ಅಭಿವೃದ್ಧಿ ಹೆಸರಿನಲ್ಲಿ ಕಳೆಯಲಾಗಿದೆ’ ಎನ್ನುತ್ತಾರೆ ಪರಿಸರ ತಜ್ಞ ಯು.ಎನ್‌.ರವಿಕುಮಾರ್‌.

‘ಕೆರೆ–ಕಟ್ಟೆಗಳು, ಊಡುನಾಲೆಗಳು, ರಾಜಕಾಲುವೆಗಳನ್ನು ಮುಚ್ಚಿಹಾಕಲಾಗಿದೆ. ಪೂರ್ಣಯ್ಯ ನಾಲೆ 6 ಕೆರೆಗಳ ನೀರನ್ನು ಮೈಸೂರಿನ ‘ಜಲನಿಧಿ’ ಕುಕ್ಕರಹಳ್ಳಿ ಕೆರೆಗೆ ತರುತ್ತಿತ್ತು. 20 ಚದರ ಕಿ.ಮೀ ವಿಸ್ತಾರದ ಜಲಾನಯನ ಪ್ರದೇಶವು ಹಸಿರುಕ್ಕಿಸಲು ಕಾರಣವಾಗಿತ್ತು. ಇದೀಗ ಅಸ್ತಿತ್ವವೇ ಇಲ್ಲವಾಗಿದೆ. ಅಳಿದುಳಿದ ಭಾಗಗಳನ್ನು ಉಳಿಸಿಕೊಳ್ಳಲು ಯಾರೂ ಮುಂದಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ADVERTISEMENT

ಹಿಗ್ಗಿದ ಮೈಸೂರು: 20 ಚದರ ಕಿ.ಮೀ ವಿಸ್ತೀರ್ಣವಿದ್ದ ಮೈಸೂರು ಕಳೆದೆರಡು ದಶಕದಿಂದ 128.42 ಚದರ ಕಿ.ಮೀಗೆ ಹಿಗ್ಗಿದೆ. 1980ರ ದಶಕದಿಂದ ಮೈಸೂರು ವೇಗವಾಗಿ ಬೆಳೆಯಿತು. ವಿಜಯನಗರ ಬಡಾವಣೆಗಳ ವೇಗ ಎಷ್ಟಿತ್ತೆಂದರೆ ಪೂರ್ಣಯ್ಯ ನಾಲೆಯನ್ನೇ ಮುಚ್ಚಿ ಹಾಕಿದೆ. 

ಬೆಂಗಳೂರಿನ ನಂತರ ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾದ ಮೈಸೂರಿನಲ್ಲಿ ಕೈಗಾರಿಕೆಗಳು, ಉದ್ಯಮಗಳು ಸ್ಥಾಪನೆಯಾಗುತ್ತಿವೆ. ಜನರಿಗಷ್ಟೇ ಅಲ್ಲದೇ ಉದ್ಯಮಗಳಿಗೆ ನೀರು ಒದಗಿಸುವ ಮಾರ್ಗ ಯಾವುದು ಎಂಬ ಪರ್ಯಾಯದತ್ತ ಚಿಂತಿಸಬೇಕಿದೆ ಎನ್ನುತ್ತಾರೆ ಪರಿಸರ ತಜ್ಞರು.

‘ನಗರವು ಯಾವ ನದಿಯ ತಟದಲ್ಲೂ ಇಲ್ಲ. ಕಾವೇರಿ ನದಿಯ ನೀರು ನಗರಕ್ಕೆ ಪೂರೈಕೆಯಾದುದು ಶತಮಾನದ ಹಿಂದೆಯಷ್ಟೆ. ಇದಕ್ಕೂ ಮುಂಚೆ ಕೆರೆಗಳೇ ಜನರ ನೀರಿನ ಆಸರೆಯಾಗಿದ್ದವು. ಇವುಗಳೊಂದಿಗೆ ಕೊಳ, ಪುಷ್ಕರಣಿ, ತಲಪರಿಗೆಗಳು ಜೀವನಾಡಿಗಳಾಗಿದ್ದವು. ಅವುಗಳಿಗೆ ನೀರಸೆಲೆಯಾಗಿದ್ದ ಪೂರ್ಣಯ್ಯ ನಾಲೆ ಹಾಗೂ ರಾಜಕಾಲುವೆಗಳನ್ನು ಉಳಿಸುವುದೇ ಮೊದಲ ಆದ್ಯತೆಯಾಗಬೇಕು’ ಎಂದು ರವಿಕುಮಾರ್ ಹೇಳಿದರು.

‘ಎರಡೆರಡು ವರ್ಷಕ್ಕೆ ಗೂಗಲ್‌ ಚಿತ್ರಗಳನ್ನು ಪರಿಶೀಲಿಸಿದಾಗ ‍ಪೂರ್ಣಯ್ಯ ನಾಲೆ ಒತ್ತುವರಿ ಹೇಗಾಗಿದೆ ಎಂಬುದು ಗೊತ್ತಾಗುತ್ತದೆ. ಹಲವು ಬಡಾವಣೆಗಳಲ್ಲಿ ಸಾಗಿರುವ ನಾಲೆಯ ಉಳಿದ ಪ್ರದೇಶವನ್ನೂ ಉಳಿಸಿಕೊಳ್ಳಬೇಕು. ಎಸ್‌ಜೆಸಿಇ ಕಾಲೇಜಿನ ಹಿಂಭಾಗದಿಂದ ಕುಕ್ಕರಹಳ್ಳಿ ಕೆರೆಗೆ ವರೆಗಿನ ನಾಲೆಯ ಒತ್ತುವರಿ ತೆರವುಗೊಳಿಸಿದರೆ 20 ಎಕರೆ ಭೂಮಿ ಸಿಗಲಿದೆ. ಅವಕಾಶವಿದ್ದೆಡೆ ತೆರವು ಮಾಡಿದರೆ ಸಾರ್ವಜನಿಕ ಆಸ್ತಿ ಉಳಿಯಲಿದೆ’ ಎಂದರು.

ದಶಕಗಳಿಂದ ಹಿಗ್ಗಿದ ಮೈಸೂರು ಭವಿಷ್ಯದಲ್ಲಿ ನೀರಿಗೆ ಹಾಹಾಕಾರ ‘ಕಾವೇರಿ’ಗೆ ಪರ್ಯಾಯ ಬೇಕಿದೆ

ಅಂತರ್ಜಲ ಇಲ್ಲದ ಬರಡು ಜಾಗದಲ್ಲಿ ನಾಲೆಯನ್ನು ನಿರ್ಮಿಸಿ ಹಸಿರುಕ್ಕಿಸಲಾಗಿತ್ತು. ನೀರಿನ ಭದ್ರತೆಯನ್ನು ಮಕ್ಕಳಿಗೆ ಉಳಿಸಿಕೊಡಬೇಕು

-ಯು.ಎನ್‌.ರವಿಕುಮಾರ್ ಪರಿಸರ ತಜ್ಞ

ಲಿಬಿಯಾದಂಥ ಮರುಭೂಮಿ ದೇಶದಲ್ಲೂ ದಿಢೀರ್‌ ಪ್ರವಾಹವಾಗಿದೆ. ಹವಾಮಾನ ಬದಲಾವಣೆ ವಾಸ್ತವ. ಹೀಗಾಗಿ ಜಲಮೂಲ ಉಳಿಸಬೇಕು

-ಭಾಮಿ ವಿ. ಶೆಣೈ

‘ಶತಮಾನದಷ್ಟು ಹಳೆ ವಿಮೆ’

‘1878 ಹಾಗೂ 79ರಲ್ಲಿ ದಕ್ಷಿಣ ಭಾರತದಲ್ಲೇ ಭೀಕರ ಬರಗಾಲ ಬಂದಿತ್ತು. ತುಂಬಾ ಸಾವು– ನೋವಾಗಿತ್ತು. ಆ ವೇಳೆಯಲ್ಲೇ ಪೂರ್ಣಯ್ಯ ನಾಲೆಯನ್ನು ಕಟ್ಟಲಾಗಿದೆ. ಶತಮಾನದ ಇತಿಹಾಸವಿರುವ ಮಹಾರಾಜರು ಕಟ್ಟಿದ ನಾಲೆಯೆಂಬ ವಿಮೆಯನ್ನು ಉಳಿಸಿಕೊಳ್ಳಬೇಕು’ ಎಂದು ಯು.ಎನ್‌.ರವಿಕುಮಾರ್ ಹೇಳಿದರು. ‘ನಾಲೆ ಉಳಿಸಿಕೊಂಡರೆ ಓಡುವ ನೀರನ್ನು ತಡೆಯುತ್ತದೆ. ನಾಲ್ಕರು ಕೆರೆಗೆ ನೀರು ಪೂರೈಸುವುದಲ್ಲದೇ ಅಂತರ್ಜಲಕ್ಕೆ ಪೂರಣ ಮಾಡಲಿದೆ ಕಾವೇರಿ ನೀರಿಲ್ಲವೆಂದರೆ ಅಂತರ್ಜಲವನ್ನು ನೆಚ್ಚಿಕೊಳ್ಳಬಹುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.