ADVERTISEMENT

ವಿದ್ಯಾ ನೈಪುಣ್ಯತೆ: ಮಕ್ಕಳಿಗೆ ಯಡತೊರೆ ಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಮೇ 2024, 4:26 IST
Last Updated 25 ಮೇ 2024, 4:26 IST
ಮೈಸೂರಿನ ಕನಕದಾಸ ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆಲ್ಸ್‌ನ ನೂತನ ಶಾಲಾ ಕ್ಯಾಂಪಸ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಯಡತೊರೆ ಯೋಗಾನಂದೇಶ್ವರ ಮಠದ ಶಂಕರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು
ಮೈಸೂರಿನ ಕನಕದಾಸ ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆಲ್ಸ್‌ನ ನೂತನ ಶಾಲಾ ಕ್ಯಾಂಪಸ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಯಡತೊರೆ ಯೋಗಾನಂದೇಶ್ವರ ಮಠದ ಶಂಕರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು   

ಮೈಸೂರು: ‘ಮನುಷ್ಯ ಜೀವಿಸುವ ಸಲುವಾಗಿ ಅನ್ನ, ನೀರು ತೃಪ್ತಿಯ ಘಟ್ಟವನ್ನು ತಲುಪಿಸುತ್ತವೆ. ಆದರೆ, ಜ್ಞಾನ ಮಾರ್ಗದಲ್ಲಿ ಪರಿಪೂರ್ಣತೆ ಹೊಂದಲು ಮಕ್ಕಳು ‘ವಿದ್ಯಾ ನೈಪುಣ್ಯತೆ’ ಪಡೆಯುವ ಸಂಕಲ್ಪ ತೊಡಬೇಕು’ ಎಂದು ಯಡತೊರೆ ಯೋಗಾನಂದೇಶ್ವರ ಮಠದ ಶಂಕರ ಭಾರತೀ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಕನಕದಾಸ ನಗರದಲ್ಲಿ (ದಟ್ಟಗಳ್ಳಿ) ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆಲ್ಸ್‌ನ ನೂತನ ಶಾಲಾ ಕ್ಯಾಂಪಸ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪಾದ ಪೂಜೆ’ ಸ್ವೀಕರಿಸಿ ಅವರು ಮಾತನಾಡಿದರು.

‘ವಿದ್ಯೆಯೆಂದರೆ ಅಕ್ಷರ ಕಲಿಕೆಯಷ್ಟೇ ಅಲ್ಲ. ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸುವ ಸಂಸ್ಕಾರ ಪಡೆಯುವುದಾಗಿದೆ. ವಿದ್ಯೆಯಲ್ಲಿ ವಿವಿಧ ವಿಷಯಗಳ ಶಾಸ್ತ್ರೀಯ ಅಧ್ಯಯನಕ್ಕೆ ಅವಕಾಶವಿದೆ. ಇವೆಲ್ಲವೂ ವ್ಯಾಪಾರಿ ಸ್ಪರ್ಶದ ಕಾರಣಕ್ಕಾಗಿ ರೂಪಿಸಿರುವುದಲ್ಲ. ಸಮಾಜಮುಖಿಯಾಗಿ, ಜೀವ ಜಗತ್ತಿನ ಕಲ್ಯಾಣಕ್ಕಾಗಿ ಸಮರ್ಪಣೆಯಿಂದ ಕಾರ್ಯ ನಿರ್ವಹಿಸುವ ಮಾರ್ಗ ತೋರಿಸುವುದಕ್ಕಾಗಿ ಎನ್ನುವುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿಯಬೇಕು’ ಎಂದರು.

ADVERTISEMENT

‘ಭಾರತೀಯ ಪರಂಪರೆಯ ಶಿಕ್ಷಣ ಅತ್ಯಂತ ಶ್ರೇಷ್ಠವಾದುದು. ಅದು ಮಾನವೀಯ ಮೌಲ್ಯವನ್ನು ತಿಳಿಸಿ ಸಾಧಿಸುವ ಮಾರ್ಗ ತೋರುವ ಪದ್ಧತಿಯಾಗಿದೆ’ ಎಂದು ನುಡಿದರು.

‘ಯಾವ ಮಗುವಿನಲ್ಲಿ ಎಂತಹ ಸಾಧಕ ಇದ್ದಾನೆಯೋ ಯಾರು ಬಲ್ಲವರು? ಈ ನಿಟ್ಟಿನಲ್ಲಿ ಪ್ರತಿ ಮಗುವನ್ನೂ ಭವಿಷ್ಯದ ಮಹಾನ್ ಸಾಧಕನೆಂದೇ ಶಿಕ್ಷಕರು ಅರಿತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಂಕಲ್ಪ ತೊಡಬೇಕು’ ಎಂದರು.

ಪತ್ರಿಕೋದ್ಯಮಿ ಕೆ.ಬಿ. ಗಣಪತಿ, ಸಂಸ್ಥೆಯ ಅಧ್ಯಕ್ಷ ಆರ್. ರಘು, ಕಾರ್ಯದರ್ಶಿ ಕೌಟಿಲ್ಯ, ಟ್ರಸ್ಟಿ ವರ್ಣಿಕಾ, ಸಂಸ್ಥೆಯ ಡೀನ್ ವಿಜಯಾ ಅಯ್ಯರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.