ADVERTISEMENT

ದಸಂಸ ಒಡಕಿಗೆ ಗೋವಿಂದಯ್ಯ ಅವರಿಂದ ಅಡಿಗಲ್ಲು: ಎನ್.ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 16:23 IST
Last Updated 19 ನವೆಂಬರ್ 2024, 16:23 IST
ಎನ್.ವೆಂಕಟೇಶ್
ಎನ್.ವೆಂಕಟೇಶ್   

ಮೈಸೂರು: ‘ದಲಿತ ಸಂಘರ್ಷ ಸಮಿತಿ ಒಡಕಿಗೆ ಅಡಿಗಲ್ಲು ಹಾಕಿದ ಎಚ್.ಗೋವಿಂದಯ್ಯ, ಹಿರಿಯ ಸಾಹಿತಿ ದೇವನೂರ ಮಹಾದೇವ ಕುರಿತ ಮಾತುಗಳು ಖಂಡನೀಯ’ ಎಂದು ದಸಂಸ ಹಿರಿಯ ಹೋರಾಟಗಾರ ಎನ್.ವೆಂಕಟೇಶ್ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಗೋಷ್ಠಿಯಲ್ಲಿ ಮಾತನಾಡಿ, ‘ದಸಂಸ ಛಿದ್ರವಾಗಲು ದೇವನೂರ ಮಹಾದೇವ ಅವರು ಕಾರಣರಲ್ಲ. ಅವರು ನಮ್ಮ ಶಕ್ತಿ. ಗುಣಾತ್ಮಕವಾಗಿ, ಸಾಹಿತ್ಯಾತ್ಮಕವಾಗಿ, ಕಲಾತ್ಮಕವಾಗಿ ಅವರು ನಮ್ಮ ನಾಯಕ’ ಎಂದರು.

‘ಗೋವಿಂದಯ್ಯ ಅವರು ಸಂಘ ಪರಿವಾರದ ವಾದಿರಾಜರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ಅವರ ಸೈದ್ಧಾಂತಿಕ ಸ್ಪಷ್ಟತೆ ದುರ್ಬಲಗೊಂಡಿರುವುದರ ನಿರ್ದಶನ. ತಮ್ಮ ನಡಾವಳಿ ಬದಲಾಯಿಸಿಕೊಂಡ ಅವರು ಉದ್ದೇಶಪೂರ್ವಕವಾಗಿ ಮಾತಾಡಿದ್ದಾರೆ’ ಎಂದು ಹೇಳಿದರು.

ADVERTISEMENT

ರಾಜ್ಯ ಸಂಘಟನಾ ಸಂಚಾಲಕ ಎನ್.ಮುನಿಸ್ವಾಮಿ ಮಾತನಾಡಿ, ‘ದೇವನೂರ ಮಹಾದೇವ ಮತ್ತು ಬಿ.ಕೃಷ್ಣಪ್ಪ ದಸಂಸದ ಎರಡು ಕಣ್ಣು. ದಸಂಸಕ್ಕೆ ಯಾರು ಅಧ್ಯಕ್ಷರಾಗಬೇಕೆಂದಾಗ ಅತ್ಯಂತ ಶೋಷಣೆಗೆ ಒಳಗಾಗಿರುವ ಮಾದಿಗ ಸಮುದಾಯದವರನ್ನು ನೇಮಕ ಮಾಡುವಂತೆ ಮಹಾದೇವ ಸೂಚಿಸಿದ್ದರು’ ಎಂದು ನೆನಪಿಸಿಕೊಂಡರು.

‘ಗೋವಿಂದಯ್ಯ ಆರೋಪಗಳಿಗೆ ಸಾಕ್ಷ್ಯಾಧಾರಗಳಿವೆಯೇ, ಅವರು ದಲಿತರ ಏಕತೆ ಬಯಸದೇ ಒಡಕಿನ ಮಾತಾಡಿದ್ದಾರೆ. ಸ್ವಾರ್ಥವಿಟ್ಟುಕೊಂಡು ಮಾತಾಡುತ್ತಿದ್ದಾರೆ. ಒಡಕಿನ ಮಾತುಗಳನ್ನು ಕೂಡಲೇ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ‘ಗೋವಿಂದಯ್ಯ ಆರ್‌ಎಸ್‌ಎಸ್ ಓಲೈಸುವ ಮಾತು ಆಡುತ್ತಿದ್ದಾರೆ. ಅವರು ಕೇಶವ ಕೃಪಾದ ಅಂಗಳದಲ್ಲಿ ನಿಂತಿದ್ದಾರೆ. ವಾದಿರಾಜರ ಶಿಷ್ಯತ್ವ ಪಡೆದು ಮತಿಭ್ರಮಣೆಗೆ ಒಳಗಾಗಿ ಮಾತಾಡುತ್ತಿದ್ದಾರೆ. ಆರ್‌ಎಸ್‌ಎಸ್ ಆಳ-ಅಗಲ ಪುಸ್ತಕ ಬರೆದ ದೇವನೂರ ಮಹಾದೇವ ಅವರು ದಲಿತ ಮುಖಂಡರ ಆಳ-ಅಗಲ ಬರೆಯುವಂತೆ ಹೇಳುವ ಗೋವಿಂದಯ್ಯನ ಮನಸ್ಸು ಎಷ್ಟು ಕೊಳಕಾಗಿರಬೇಕು’ ಎಂದು ಟೀಕಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಖಜಾಂಚಿ ಬಿ.ಡಿ.ಶಿವಮೂರ್ತಿ, ತಾಲ್ಲೂಕು ಸಂಚಾಲಕ ಕಲ್ಲಹಳ್ಳಿ ಕುಮಾರ್, ಲೇಖಕ ವರಹಳ್ಳಿ ಆನಂದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.