ಮೈಸೂರು: ‘ಇಲ್ಲಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯು (ಜೆಎಸ್‌ಎಸ್‌ಎಚ್‌ಇಆರ್) ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ (ನ್ಯಾಕ್) ಈಚೆಗೆ ನಡೆಸಿದ ನ್ಯಾಕ್ 3ನೇ ಆವೃತ್ತಿಯ ಸಮೀಕ್ಷೆಯಲ್ಲಿ 3.61ರಷ್ಟು ಅಂಕಗಳೊಂದಿಗೆ ‘ನ್ಯಾಕ್ ಎ++’ ಶ್ರೇಣಿ ಪಡೆದಿದೆ’ ಎಂದು ಕುಲಸಚಿವ ಬಿ.ಮಂಜುನಾಥ ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಪ್ರಕಟಣೆ ನೀಡಿರುವ ಅವರು, ‘ಈ ಸಾಧನೆಯು ಉನ್ನತ ಶಿಕ್ಷಣದಲ್ಲಿ ಸಂಸ್ಥೆಯ ಉತ್ಕೃಷ್ಟತೆಗೆ, ಬದ್ಧತೆ ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿನ ನಿರಂತರ ಪ್ರಯತ್ನಗಳಿಗೆ ದೊರೆತ ಯಶಸ್ಸು’ ಎಂದು ಹೇಳಿದ್ದಾರೆ.
‘ಅಕಾಡೆಮಿಯು 2024ನೇ ಸಾಲಿನ ಎನ್‌ಐಆರ್‌ಎಫ್ (ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು)ನಲ್ಲಿ 24ನೇ ಶ್ರೇಯಾಂಕವನ್ನು ಗಳಿಸಿದೆ. ಅಕಾಡೆಮಿಯ ಶೈಕ್ಷಣಿಕ ಕಾರ್ಯಕ್ರಮಗಳು, ಮೂಲಸೌಲಭ್ಯ, ಬೋಧಕರು ಮತ್ತು ಒಟ್ಟಾರೆ ಸಾಂಸ್ಥಿಕ ಪರಿಣಾಮಕಾರಿ ಕ್ರಮಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಿದ ನಂತರ ‘ನ್ಯಾಕ್’ ಮಾನ್ಯತೆ ದೊರೆತಿದೆ. ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಯ ಬದ್ಧತೆಯನ್ನು ಪುರಸ್ಕರಿಸಲಾಗಿದೆ’ ಎಂದಿದ್ದಾರೆ.
‘ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಸುಧಾರಿಸುವಲ್ಲಿ ಮತ್ತು ಶಿಕ್ಷಣದಲ್ಲಿ ನಾವೀನ್ಯತೆ ತರುವಲ್ಲಿ ನಿರಂತರವಾಗಿ ಪ್ರಯತ್ನಗಳನ್ನು ಮುಂದುವರಿಸುತ್ತಿದೆ’ ಎಂದು ತಿಳಿಸಿದ್ದಾರೆ.
‘ಅಕಾಡೆಮಿಯು ಉತ್ತಮವಾದ ಈ ಪರಿಪಾಠವನ್ನು ಮತ್ತಷ್ಟು ಉನ್ನತೀಕರಿಸಿ ಸಮಾಜಕ್ಕೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸ ನನಗಿದೆ’ ಎಂದು ಅಕಾಡೆಮಿಯ ಕುಲಾಧಿಪತಿಯೂ ಆಗಿರುವ ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.