ADVERTISEMENT

ನಾಡಹಬ್ಬ ದಸರೆ: 124 ಕಿ.ಮೀ ವಿದ್ಯುತ್‌ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 11:02 IST
Last Updated 15 ಸೆಪ್ಟೆಂಬರ್ 2022, 11:02 IST
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಸರಾ ದೀಪಾಲಂಕಾರದ ಪ್ರಚಾರ ಸಾಮಗ್ರಿಯನ್ನು ಗುರುವಾರ ಸಂಸದ ಪ್ರತಾಪಸಿಂಹ ಬಿಡುಗಡೆ ಮಾಡಿದರು‌. ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ಸೆಸ್ಕ್ ಅಧಿಕಾರಿಗಳು ಇದ್ದರು
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಸರಾ ದೀಪಾಲಂಕಾರದ ಪ್ರಚಾರ ಸಾಮಗ್ರಿಯನ್ನು ಗುರುವಾರ ಸಂಸದ ಪ್ರತಾಪಸಿಂಹ ಬಿಡುಗಡೆ ಮಾಡಿದರು‌. ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹಾಗೂ ಸೆಸ್ಕ್ ಅಧಿಕಾರಿಗಳು ಇದ್ದರು   

ಮೈಸೂರು: ನಾಡಹಬ್ಬ ದಸರೆಯ ವಿದ್ಯುತ್‌ ದೀಪಾಲಂಕಾರ ಕಳೆದೆರಡು ವರ್ಷಕ್ಕಿಂತ ಈ ಬಾರಿ ಜಗಮಗಿಸಲಿದ್ದು, 124 ಕಿ.ಮೀ ರಸ್ತೆ ಹಾಗೂ 96 ವೃತ್ತಗಳಲ್ಲಿ ವಿದ್ಯುತ್‌ ದೀಪಗಳು ನಗರಕ್ಕೆ ಮೆರುಗು ಹೆಚ್ಚಿಸಲಿವೆ.

‘ಕಳೆದ ಬಾರಿ 103 ಕಿ.ಮೀ ಉದ್ದದ ರಸ್ತೆ ದೀಪಾಲಂಕಾರ ಮಾಡಲಾಗಿತ್ತು. ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಹಾಗೂ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಗುರಿಯೊಂದಿಗೆ ಬೆಳಗುವ ಅವಧಿಯನ್ನು ಸೂರ್ಯಾಸ್ತರಿಂದ ರಾತ್ರಿ 10.30ರವರೆಗೆ ವಿಸ್ತರಿಸಲಾಗಿದೆ’ ಎಂದು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಸೆಸ್ಕ್‌) ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಾ.ಬಗಾದಿ ಗೌತಮ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಅವರು, ‘ಬೆಂಗಳೂರು ರಸ್ತೆಯ ರಿಂಗ್‌ರಸ್ತೆ ವೃತ್ತದಿಂದ ಸುಮಾರು 1 ಕಿ.ಮೀ ವಿಶೇಷ ದೀಪಾಲಂಕಾರವಿರಲಿದೆ. ಸ್ವಾಗತ ಕಮಾನನ್ನು ವಿಶಿಷ್ಟವಾಗಿ ರೂಪಿಸಲಾಗಿದೆ. ಮೈಸೂರು ವಿಮಾನ ನಿಲ್ದಾಣದಿಂದ ನಗರದವರೆಗೂ ಅಲಂಕಾರವಿರಲಿದೆ’ ಎಂದು ತಿಳಿಸಿದರು.

ADVERTISEMENT

ಸಂಸದ ಪ್ರತಾಪ ಸಿಂಹ ಮಾತನಾಡಿ, ‘ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಹೆಸರು ಅಂತಿಮಗೊಂಡಿದ್ದು, ನಾಲ್ವಡಿ ಅವರ ದೀಪದ ಕಟೌಟ್ ಮಾಡಬೇಕು. ಹುಣಸೂರು ರಸ್ತೆಯ ಹಿನಕಲ್‌ ಫ್ಲೈ ಓವರ್‌, ಬನ್ನೂರು ರಸ್ತೆ ಹಾಗೂ ಎಚ್‌.ಡಿ.ಕೋಟೆ ರಸ್ತೆಗಳಲ್ಲೂ ವಿದ್ಯುತ್‌ ಬಲ್ಬ್‌ಗಳ ಅಲಂಕಾರ ಮಾಡಬೇಕು. ಚಾಮುಂಡಿ ಬೆಟ್ಟಕ್ಕೂ ವಿಸ್ತರಿಸಬೇಕು’ ಎಂದು ಸಲಹೆ ನೀಡಿದರು.

‘3ಡಿ ವಿಡಿಯೊ ಸಹಿತ ವ್ಯಕ್ತಿಚಿತ್ರದ ದೀ‍ಪಾಲಂಕಾರ ಮಾಡಲಾಗುತ್ತಿದೆ. ನಾಲ್ವಡಿ, ಜಯಚಾಮರಾಜ, ಚಾಮರಾಜ ಒಡೆಯರ್‌ ಪ್ರತಿಮೆಗಳ ಮೇಲೂ ಈ ತಂತ್ರಜ್ಞಾನ ಬಳಸಲಾಗುತ್ತಿದೆ. ನಗರವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳು, ಪಾರಂಪರಿಕ ಕಟ್ಟಡಗಳಿಗೂ ದೀಪಗಳ ಮೆರುಗು ಇರಲಿದೆ’ ಎಂದು ಸೆಸ್ಕ್‌ ಎಸ್‌ಇ ಎಸ್.ನಾಗೇಶ್ ಪ್ರತಿಕ್ರಿಯಿಸಿದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜೊತೆಗೆ ಮೈಸೂರಿನ ರಾಜಪರಂ‍ಪರೆ, ನಾಡಿನ ಸಂಸ್ಕೃತಿಯನ್ನು ದೀಪಾಲಂಕಾರದ ಮೂಲಕ ಬಿಂಬಿಸಲಾಗುವುದು. ದೀಪಗಳ ಬೆಳಕಿನ ಅವಧಿಯು ಮೂರೂವರೆ ಗಂಟೆಗೆ ವಿಸ್ತರಿಸಿರುವುದರಿಂದ ಶೇ 60ರಷ್ಟು ವೆಚ್ಚ ಹೆಚ್ಚಾಗಲಿದ್ದು, ಅದನ್ನು ಸೆಸ್ಕ್‌ ಭರಿಸಲಿದೆ’ ಎಂದು ಜಯವಿಭವ ಸ್ವಾಮಿ ಹೇಳಿದರು.

‘ಅಂಬರ್‌, ಶ್ವೇತ ವರ್ಣದ ಬೆಳಕನ್ನು ಸೂಸುವ ಬಲ್ಬ್‌ಗಳೇ ಪ್ರಧಾನವಾಗಿದ್ದು, ಎಲ್‌ಇಡಿ ಬಲ್ಬ್‌ ಅಳವಡಿಕೆಯಿಂದ ವೆಚ್ಚವು ತಗ್ಗಲಿದೆ. ಹೀಗಾಗಿ ದೀಪಾಲಂಕಾರವನ್ನು ವಿಸ್ತರಿಸಲಾಗುತ್ತಿದೆ. 35 ಮಂದಿ ಪ್ರಾಯೋಜಕರು ಸೆಸ್ಕ್‌ ಜೊತೆ ಕೈಜೋಡಿಸಿದ್ದಾರೆ’ ಎಂದರು.

ವಿದ್ಯುತ್‌ ದೀಪಗಳ ಮೆರುಗಿನಲ್ಲಿ ಅಂಬಾರಿ!: ಜಂಬೂಸವಾರಿ ಮೆರವಣಿಗೆಯು ಅ.5ರ ವಿಜಯದಶಮಿಯಂದು ಸಂಜೆ 5.30ಕ್ಕೆ ಆರಂಭಗೊಳ್ಳುವುದರಿಂದ ದೀಪಾಲಂಕಾರದ ಮೆರುಗಿನಲ್ಲಿ ಅಂಬಾರಿ ಸಾಗಲಿರುವುದು ಈ ಬಾರಿಯ ವಿಶೇಷ!

‘ದಸರಾ ಆನೆಗಳಿಗೆ ದೀಪಗಳಲ್ಲಿ ನಡಿಗೆ ತಾಲೀಮು ಇದೇ 23ರಿಂದ ನೀಡಲಾಗುವುದು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ’ ಎಂದು ಜಯವಿಭವಸ್ವಾಮಿ ಹೇಳಿದರು.

‘ಬಲರಾಮದ್ವಾರದಿಂದ ಬನ್ನಿಮಂಟಪದ ಜಂಬೂಸವಾರಿ ಹಾದಿಯನ್ನು ಎಂದಿನಂತೆ ಸಾಂಪ್ರದಾಯಿಕ ದೀಪಗಳನ್ನು ಅಳವಡಿಸಲಾಗುತ್ತಿದೆ. ಆನೆ ಮೇಲಿನ ಮರದ ಅಂಬಾರಿಯ ಎತ್ತರ 16 ಅಡಿ ಆಗಿದ್ದು, ಜಂಬೂಸವಾರಿ ಪಥದಲ್ಲಿ 22 ಅಡಿ ಎತ್ತರದಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ.’ ಎಂದು ಮಾಹಿತಿ ನೀಡಿದರು.

ಅಪ್ಪು, ನೇತಾಜಿ ಆಕರ್ಷಣೆ: ಪುನೀತ್‌ ರಾಜ್‌ ಕುಮಾರ್‌, ನೇತಾಜಿ ಸುಭಾಷ್‌ ಚಂದ್ರಬೋಸ್‌, ರಾಜ್‌ ಕುಮಾರ್‌, ನಾಲ್ವಡಿ ಕೃಷ್ಣರಾಜ ಒಡೆಯರ್‌, ಜಯಚಾಮರಾಜ ಒಡೆಯರ್‌ ಸೇರಿದಂತೆ ಮಹನೀಯರ ‘3ಡಿ’ ವಿಡಿಯೊ ಸಹಿತ ಎಲ್‌ಇಡಿ ದೀಪಾಲಂಕಾರ ಪ್ರಧಾನ ಆಕರ್ಷಣೆಯಾಗಲಿದೆ.

‘ವಸ್ತು ಪ್ರದರ್ಶನ ಮೈದಾನದಲ್ಲಿ ಕೆಂಪುಕೋಟೆ, ಸೆಂಟ್ರಲ್‌ ವಿಸ್ತಾ, ಅರಮನೆ ಬಲರಾಮದ್ವಾರದಲ್ಲಿ ಚಾಮುಂಡೇಶ್ವರಿ ದೀಪಾಲಂಕಾರ ಮಾಡಲಾಗುತ್ತಿದೆ. ಎಲ್‌ಐಸಿ ವೃತ್ತದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತರು ರಾಷ್ಟ್ರಲಾಂಛನಗಳು ದೀಪಗಳಲ್ಲಿ ಕಂಗೊಳಿಸಲಿವೆ’ ಎಂದು ಜಯವಿಭವ ಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಸೆಸ್ಕ್ ಎಂಜಿನಿಯರ್‌ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.