ADVERTISEMENT

ಮೈಸೂರು ದಸರಾ: ಗಜಪಯಣಕ್ಕೆ ಭರಪೂರ ಸಿದ್ಧತೆ

ವೀರನಹೊಸಹಳ್ಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಡಿಸಿಎಫ್ ಪ್ರಭು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 14:08 IST
Last Updated 16 ಆಗಸ್ಟ್ 2024, 14:08 IST
ನಾಗರಹೊಳೆ ವೀರನಹೊಸಹಳ್ಳಿ ಗೇಟ್ ಬಳಿ ನಡೆಯಲಿರುವ ಗಜಪಯಣ ಕಾರ್ಯಕ್ರಮದ ಸ್ಥಳವನ್ನು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭು ವೀಕ್ಷಿಸಿದರು. ಆರ್‌ಎಫ್‌ಒ ಸಂತೋಷ್ ಕುಮಾರ್. ಅಭಿಷೇಕ್, ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಭಾಗವಹಿಸಿದ್ದರು
ನಾಗರಹೊಳೆ ವೀರನಹೊಸಹಳ್ಳಿ ಗೇಟ್ ಬಳಿ ನಡೆಯಲಿರುವ ಗಜಪಯಣ ಕಾರ್ಯಕ್ರಮದ ಸ್ಥಳವನ್ನು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭು ವೀಕ್ಷಿಸಿದರು. ಆರ್‌ಎಫ್‌ಒ ಸಂತೋಷ್ ಕುಮಾರ್. ಅಭಿಷೇಕ್, ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಭಾಗವಹಿಸಿದ್ದರು   

ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬ ಆಚರಣೆಗೆ ಗಜಪಯಣದ ಸಿದ್ಧತೆಯನ್ನು ಅರಣ್ಯ ಇಲಾಖೆ ಭರದಿಂದ ಕೈಗೊಂಡಿದ್ದು, ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭು ವೀರನಹೊಸಹಳ್ಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

‘ಆ.21ರಂದು ಬೆಳಿಗ್ಗೆ ತುಲಾ ಲಗ್ನದಲ್ಲಿ ಮೈಸೂರು ಅರಮನೆ ಪುರೋಹಿತರಿಂದ ಪ್ರಥಮ ಸರಣಿಯಲ್ಲಿ 9 ಆನೆಗಳಿಗೆ ದಸರಾ ನಾಡಹಬ್ಬದಲ್ಲಿ ಪಾಲ್ಗೊಳ್ಳಲು ಆಹ್ವಾನಿಸುವ ಪ್ರಕ್ರಿಯೆ ಎಂದಿನಂತೆ ನಡೆಯಲಿದೆ. ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಹಿನ್ನೆಲೆಯಲ್ಲಿ ನಾಗರಹೊಳೆ ಅರಣ್ಯದ ಪ್ರವೇಶ ದ್ವಾರ ವೀರನಹೊಸಹಳ್ಳಿ ಸಿದ್ಧತೆ ಕೈಗೊಂಡಿದೆ’ ಎಂದು ಡಿಸಿಎಫ್ ಪ್ರಭು ‘ಪ್ರಜಾವಾಣಿ’ಗೆ ತಿಳಿಸಿದರು.

ಗಜಪಯಣ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಶಾಸಕರು ಮತ್ತು ಇಲಾಖೆ ಅಧಿಕಾರಿಗಳು ಪಾಲ್ಗೊಳುವರು ಎಂದರು.

ADVERTISEMENT

ಆಕರ್ಷಕ ಕಮಾನು: ‘ಈ ಬಾರಿ ಗಜಪಯಣಕ್ಕೆ ವಿಶೇಷ ರೀತಿಯ ರಂಗು ನೀಡುವ ಉದ್ದೇಶದಿಂದ ಗಜಪಯಣ ನಡೆಯುವ ಸ್ಥಳದಲ್ಲಿ ವಿಶಿಷ್ಟ ರೀತಿಯ ಅಲಂಕಾರಕ್ಕೆ ತಯಾರಿ ನಡೆದಿದೆ. ಇದಲ್ಲದೆ ವೀರನಹೊಸಹಳ್ಳಿ ಮುಖ್ಯ ದ್ವಾರದಲ್ಲಿ ಸಾಂಪ್ರದಾಯಕ ಪೂಜೆ ನಡೆಸುವ ಸ್ಥಳದಲ್ಲಿ ವಿಶೇಷ ಕಮಾನು ನಿರ್ಮಿಸಲಿದ್ದೇವೆ. ವೇದಿಕೆಯನ್ನು ವಿಶೇಷ ರೀತಿಯಲ್ಲಿ ಸಿದ್ಧಗೊಳಿಸಿ ನಾಡಹಬ್ಬಕ್ಕೆ ಹೊಸ ಹೊಳಪು ನೀಡುವ ದೃಷ್ಟಿಕೋನದಲ್ಲಿ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ’ ಎಂದು ಮಾಹಿತಿ ನೀಡಿದರು.

₹5 ಲಕ್ಷ ಮೌಲ್ಯದ ವಿಮೆ: ಗಜಪಯಣದ ಆನೆಯೊಂದಿಗೆ ಮೈಸೂರಿಗೆ ಆಗಮಿಸುವ ಮಾವುತ ಮತ್ತು ಕಾವಾಡಿಗಳಿಗೆ ತಲಾ ₹ 5 ಲಕ್ಷ ಮೌಲ್ಯದ ವಿಮೆ ಮಾಡಲಾಗುವುದು ಎಂದರು.

ಟೆಂಡರ್ ಪ್ರಕ್ರಿಯೆ: ಅರಮನೆಗೆ ಆಗಮಿಸುವ ಆನೆಗಳನ್ನು ವೀರನಹೊಸಹಳ್ಳಿ ಗೇಟ್‌ನಿಂದ ಮೈಸೂರು ಅರಣ್ಯ ಭವನಕ್ಕೆ ತರಲು ಲಾರಿ ವ್ಯವಸ್ಥೆಯನ್ನು ಗುತ್ತಿಗೆದಾರ ಶಕೀಬ್ ಪಡೆದಿದ್ದಾರೆ. ಊಟೋಪಚಾರದ ವ್ಯವಸ್ಥೆ ಮೈಸೂರಿನ ನವನೀತ್ ಕೇಟರಿಂಗ್ ಶಿವಣ್ಣ ಮತ್ತು ತಂಡ ವಹಿಸಿಕೊಂಡಿದ್ದು, 3500 ಜನರಿಗೆ ಊಟ ಸಿದ್ಧತೆಗೆ ಕ್ರಮವಹಿಸಿದೆ. ಆನೆಗೆ ಆಹಾರ ಸರಬರಾಜು ಮಾಡಲು ಬಾಬು ಗುತ್ತಿಗೆ ಪಡೆದಿದ್ದಾರೆ ಎಂದು ತಿಳಿಸಿದರು.

ನಾಗರಹೊಳೆ ಮತ್ತಿಗೂಡು ಆನೆ ಶಿಬಿರದಲ್ಲಿರುವ ದಸರಾ ಆನೆ ಮಹೇಂದ್ರ (ಸಂಗ್ರಹ)

ಮೈಸೂರಿಗೆ ತೆರಳಲಿರುವ 9 ಆನೆ

ಆ.21 ರಂದು ವೀರನಹೊಸಹಳ್ಳಿಯಿಂದ ಮೈಸೂರಿಗೆ ತೆರಳಲಿರುವ ಅಭಿಮನ್ಯು (58) ಭೀಮ(24) ಗೋಪಿ(41) ಧನಂಜಯ(43) ಕಂಜನ್ (25) ರೋಹಿಣಿ (22) ಲಕ್ಷ್ಮಿ(53) ವರಲಕ್ಷ್ಮಿ(67) ಮತ್ತು ಏಕಲವ್ಯ (38) 9 ಆನೆ ತೆರಳಲಿದೆ. ಪ್ರಥಮ ಬಾರಿಗೆ ಏಕಲವ್ಯ ಭಾಗಿ: ಮೈಸೂರು ದಸರಾ ನಾಡಹಬ್ಬದಲ್ಲಿ ಪ್ರಥಮ ಬಾರಿಗೆ ಏಕಲವ್ಯ (38) ಭಾಗವಹಿಸುತ್ತಿದೆ. ಈ ಆನೆಯನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಳಿ 2018ರಲ್ಲಿ ಸೆರೆ ಹಿಡಿಯಲಾಗಿತ್ತು. ಪ್ರಸ್ತುತ ಮತ್ತಿಗೂಡು ಆನೆ ಶಿಬಿರದಲ್ಲಿದೆ. ಈ ಆನೆಯ ಯೋಗಕ್ಷೇಮವನ್ನು ಮಾವುತರಾದ ಇನಾಯತ್ ಮತ್ತು ಸೃಜನ್ ನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.