ಎಚ್.ಡಿ.ಕೋಟೆ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಸಿಗೆ ಸಮಯದಲ್ಲಿ ಬೆಂಕಿ ಅನಾಹುತ ತಪ್ಪಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಬೆಂಕಿ ಕಾಣಿಸಿಕೊಳ್ಳುವ ಸ್ಥಳಕ್ಕೆ ಕೂಡಲೇ ಧಾವಿಸಿ ನಂದಿಸುವ ಕಾರ್ಯಾಚರಣೆಗೆ ಈ ಬಾರಿ ಮೊಬೈಲ್ ಫೈರ್ ಪ್ರೊಟೆಕ್ಷನ್ ತಂಡದ ಜೊತೆಗೆ ಇನ್ನೂ ಎರಡು ವಿಶೇಷ ತಂಡಗಳನ್ನು ನಿಯೋಜಿಸಿದೆ.
‘ಕಾಡಿಗೆ ಬೆಂಕಿ ಬಿದ್ದ ತಕ್ಷಣ ಒಂದು ಗಂಟೆಯೊಳಗೆ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಗುರುತಿಸಿ ನಂದಿಸುವ ಕಾರ್ಯ ಆರಂಭಿಸಬೇಕು. ತಡವಾಗಿ ತೆರಳಿದರೆ ಬೆಂಕಿ ನಿಯಂತ್ರಣಕ್ಕೆ ಸಿಗುವುದಿಲ್ಲ. ಅಪಾರ ಪ್ರಮಾಣದ ಕಾಡಿನ ಸಂಪತ್ತು ನಾಶವಾಗುತ್ತದೆ. ಹೀಗಾಗಿ ಈ ಬಾರಿ ಅರಣ್ಯ ಇಲಾಖೆ ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಶೀಘ್ರವಾಗಿ ತೆರಳಿ ಕಾರ್ಯಾಚರಣೆ ಆರಂಭಿಸಲು ಸ್ಟ್ರಾಟಿಕ್ ಮೊಬೈಲ್ ಫೈರ್ ಪ್ರೊಟೆಕ್ಷನ್ ತಂಡವನ್ನು ರಚಿಸಿದೆ. ಬೆಂಕಿ ವೀಕ್ಷಣಾ ತಂಡ, ಬೆಂಕಿ ನಂದಿಸುವ ಸಂಚಾರ ತಂಡವನ್ನೂ ರಚಿಸಲಾಗಿದೆ’ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದರು.
‘ಅರಣ್ಯ ಸಿಬ್ಬಂದಿ, 8ರಿಂದ 10 ವಾಚರ್‌ಗಳಿರುವ ಸ್ಟ್ರಾಟಿಕ್ ಫೈರ್ ಪ್ರೊಟೆಕ್ಷನ್ ತಂಡಗಳು ಬೀಡುಬಿಟ್ಟಿದ್ದು, ಅರಣ್ಯದ ವಲಯವಾರು ಜಾಗದಲ್ಲಿ ಕ್ಯಾಂಪ್ ಹಾಕಿಕೊಂಡು ಸಸ್ಯಸಂಪತ್ತು, ವನ್ಯಜೀವಿಗೆ ಹಾನಿ ಆಗದಂತೆ ನಿಗಾವಹಿಸುತ್ತಿವೆ. ಕಾಡಿನಲ್ಲಿರುವ ವಾಚ್ ಟವರ್‌ಗಳಲ್ಲಿರುವ ಸಿಬ್ಬಂದಿ, ಆರಣ್ಯದಲ್ಲಿ ಬೆಂಕಿ ಬಿದ್ದರೆ, ಹೊಗೆಯಾಡುತ್ತಿದ್ದರೆ ಅದರ ಮಾಹಿತಿಯನ್ನು ನೀಡುತ್ತಾರೆ. ಅದನ್ನು ಆಧರಿಸಿ ಬೆಂಕಿ ಬಿದ್ದ ಸ್ಥಳಕ್ಕೆ ಕೂಡಲೇ ತೆರಳಿ ಕಾರ್ಯಾಚರಣೆ ಆರಂಭಿಸುತ್ತಾರೆ’ ಎಂದು ಮೇಟಿಕುಪ್ಪೆ ವನ್ಯಜೀವಿ ಉಪ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಂಗಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.