ADVERTISEMENT

ಮೈಸೂರು | ನಂದಿ ಮಹಾಭಿಷೇಕ; ಭಕ್ತರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 14:09 IST
Last Updated 17 ನವೆಂಬರ್ 2024, 14:09 IST
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿ ವಿಗ್ರಹಕ್ಕೆ ಕುಂಕುಮ ಅಭಿಷೇಕ ಭಾನುವಾರ ನೆರವೇರಿತು. ಸೋಮೇಶ್ವರನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚಿದಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್‌
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿ ವಿಗ್ರಹಕ್ಕೆ ಕುಂಕುಮ ಅಭಿಷೇಕ ಭಾನುವಾರ ನೆರವೇರಿತು. ಸೋಮೇಶ್ವರನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚಿದಾನಂದ ಸ್ವಾಮೀಜಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್‌   

ಮೈಸೂರು: ನಗರದ ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್‌ನಿಂದ ಚಾಮುಂಡಿ ಬೆಟ್ಟದಲ್ಲಿನ ನಂದಿ ವಿಗ್ರಹಕ್ಕೆ ಭಾನುವಾರ 19ನೇ ವರ್ಷದ ಮಹಾಭಿಷೇಕ ನಡೆಯಿತು. ಹೂವುಗಳಿಂದ ಅಲಂಕೃತಗೊಂಡಿದ್ದ ಅಟ್ಟಣಿಗೆಯ ನಡುವೆ ಮನಮೋಹಕವಾಗಿ ಕಂಗೊಳಿಸುತ್ತಿದ್ದ ನಂದಿಯು ವಿವಿಧ ದ್ರವ್ಯಗಳ ಸಿಂಚನದಲ್ಲಿ ಮಿಂದೆದ್ದಿತು.

ಮುಂಜಾನೆ 8.30ಕ್ಕೆ ಆರಂಭವಾದ ಅಭಿಷೇಕ ಕಾರ್ಯದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಹಾಗೂ ಹೊಸಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಗಂಧ ಪಂಚಕಾಭಿಷೇಕ, ಪಂಚಾಮೃತಾಭಿಷೇಕ, ಫಲಪೂಜಾಮೃತ, ರಸಪಂಚಾಮೃತ, ಪಿಷ್ಟ ಪಂಚಕಾಭಿಷೇಕ ನಡೆದವು. ಹಾಲು, ಮೊಸರು, ತುಪ್ಪ, ಜೇನುತುಪ್ಪ, ಎಳನೀರು, ಕಬ್ಬಿನ ಹಾಲು, ನಿಂಬೆ, ತೈಲ, ಬಾಳೆಹಣ್ಣು, ದ್ರಾಕ್ಷಿ, ಬೇಲ, ಖರ್ಜೂರ, ಸೌತೆಕಾಯಿ, ಗೋಧಿ ಹಿಟ್ಟು, ಅಕ್ಕಿಹಿಟ್ಟು, ಹೆಸರು ಹಿಟ್ಟು, ದರ್ಬೆ, ಪತ್ರೆ ಹಾಗೂ ಪುಷ್ಪ ಮೊದಲಾದ 34 ಬಗೆ ದ್ರವ್ಯಗಳೂ ಸೇರಿದಂತೆ 38 ವಿಧಗಳಲ್ಲಿ ಅಭಿಷೇಕ ಜರುಗಿತು. ಒಂದೊಂದು ಅಭಿಷೇಕದಲ್ಲೂ ವಿಭಿನ್ನ ಬಣ್ಣಗಳಿಂದ ಕಂಗೊಳಿಸಿದ ವಿಗ್ರಹವನ್ನು ಜನರು ಕಣ್ತುಂಬಿಕೊಂಡರು.‌

ADVERTISEMENT

ಕನಕ ಅಭಿಷೇಕ ಸಂದರ್ಭದಲ್ಲಿ ನಂದಿ ಮೇಲಿಂದ ಬೀಳುತ್ತಿದ್ದ ನಾಣ್ಯಗಳನ್ನು ಪಡೆಯಲು ಭಕ್ತರು ಮುಂದಾದರು. ಪಂಚಾಮೃತ, ಶಾಲ್ಯಾನ್ನ, ರುದ್ರಾಭಿಷೇಕ ಹಾಗೂ ಸುಗಂಧ ದ್ರವ್ಯ ಅಭಿಷೇಕ ಮತ್ತು ಪಂಚಕಲಶ ವಿಸರ್ಜನೆಯೊಂದಿಗೆ ಅಭಿಷೇಕ ಪೂರ್ಣಗೊಂಡಿತು. ಸುಮಾರು 1.30 ಗಂಟೆ ನಡೆದ ಅಭಿಷೇಕವು ನೋಡುಗರನ್ನು ಭಕ್ತಿಭಾವದಲ್ಲಿ ತೇಲಿಸಿತು.

ಪುರೋಹಿತರಾದ ಪ್ರವೀಣ್‌ ಮತ್ತು ಷಡಕ್ಷರಿ ಅಭಿಷೇಕದ ವಿಧಿಗಳನ್ನು ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಸ್ವಾಮೀಜಿಗಳನ್ನು ವೀರಗಾಸೆ ನೃತ್ಯದ ಮೂಲಕ ಸ್ವಾಗತಿಸಲಾಯಿತು. ಭಕ್ತರಿಗೆ ಟ್ರಸ್ಟ್‌ನಿಂದ ಅನ್ನಸಂತರ್ಪಣೆ ನಡೆಯಿತು.

ಟ್ರಸ್ಟ್‌ ಅಧ್ಯಕ್ಷ ಎಸ್‌.ಪ್ರಕಾಶನ್‌, ಕಾರ್ಯದರ್ಶಿ ಎನ್‌.ಗೋವಿಂದ, ಖಜಾಂಚಿ ವಿ.ಎನ್‌.ಸುಂದರ್, ಪದಾಧಿಕಾರಿಗಳಾದ ಶಂಕರ್, ಮಹದೇವ್ ಪಾಲ್ಗೊಂಡರು.

ನಂದಿ ವಿಗ್ರಹವು ಹಾಲಿನ ಅಭಿಷೇಕದಲ್ಲಿ ಕಂಗೊಳಿಸಿತು
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಟ್ಟದ ಬಳಗ ಟ್ರಸ್ಟ್‌ನಿಂದ ಭಾನುವಾರ ನಂದಿ ವಿಗ್ರಹಕ್ಕೆ ನಡೆದ 19ನೇ ವರ್ಷದ ಅಭಿಷೇಕವನ್ನು ವೀಕ್ಷಿಸಿದ ಜನರು  –ಪ್ರಜಾವಾಣಿ ಚಿತ್ರ: ಹಂಪಾ ನಾಗರಾಜ್‌

‘ಶಾಂತಿ ನೆಮ್ಮದಿ ದೊರೆಯಲಿ’

‘ಮಹಾರಾಜರ ಕಾಲದಿಂದಲೂ ಕಾರ್ತೀಕ ಮಾಸದಲ್ಲಿ ಇಲ್ಲಿನ ನಂದಿಗೆ ಅಭಿಷೇಕ ನಡೆಯುತ್ತ ಬಂದಿದೆ. ಇದೊಂದು ದೈವಿಕ ಕಾರ್ಯವಾಗಿದ್ದು ಭಕ್ತಿಯ ಜಾಗೃತಿಗೆ ಪ್ರಸರಣೆಗೆ ಅಗತ್ಯ. ಬೆಟ್ಟದ ಬಳಗದ ಸದಸ್ಯರು ಮತ್ತು ಭಕ್ತರು ಅಭಿಷೇಕವನ್ನು ಉತ್ತಮವಾಗಿ ನೆರವೇರಿಸಿದ್ದು ಇದರಿಂದ ದೇಶ ಜನತೆಗೆ ಶಾಂತಿ ನೆಮ್ಮದಿ ದೊರಕಲಿ’ ಎಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.