ಮೈಸೂರು: ಬೇಸಿಗೆಯಲ್ಲಿ ಜನರ ದಾಹ ಮತ್ತು ಆರೋಗ್ಯ ರಕ್ಷಣೆಗೆಂದು ನಂದಿನಿ ಬ್ರ್ಯಾಂಡ್‌ನಿಂದ ರಾಗಿ ಅಂಬಲಿ ಮತ್ತು ಪ್ರೋಬಯಾಟಿಕ್ ಮಜ್ಜಿಗೆ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ.
ಮೈಸೂರು ಹಾಲು ಉತ್ಪಾದಕರ ಒಕ್ಕೂಟ (ಮೈಮುಲ್) ಈ ಉತ್ಪನ್ನಗಳನ್ನು ತಯಾರಿಸಿ ಏ.5ರಂದು ಪರೀಕ್ಷಾತ್ಮಕವಾಗಿ ಮಾರುಕಟ್ಟೆಗೆ ಪರಿಚಯಿಸಿದ್ದು, ನಿತ್ಯವೂ ಸಾವಿರಕ್ಕೂ ಹೆಚ್ಚು ಲೀಟರ್ ಮಾರಾಟವಾಗುತ್ತಿದೆ. ಜನರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಉತ್ಪಾದನೆ ಹೆಚ್ಚಳಕ್ಕೂ ಯೋಜನೆ ನಡೆಯುತ್ತಿದೆ.
‘ಈ ಎರಡು ಉತ್ಪನ್ನಗಳೂ 200 ಮಿ.ಲೀ ಪ್ಯಾಕೆಟ್‌ನಲ್ಲಿ ಲಭ್ಯವಿದ್ದು, ತಲಾ ₹10ರಂತೆ ಮಾರಾಟ ಮಾಡಲಾಗುತ್ತಿದೆ. ಬನ್ನೂರು ರಸ್ತೆಯ ಮೈಮುಲ್ ಮೆಗಾ ಡೇರಿಯಲ್ಲಿಯೇ ಉತ್ಪನ್ನಗಳ ಸಂಶೋಧನೆ ಮತ್ತು ತಯಾರಿ ಮಾಡಲಾಗಿದ್ದು, ನಿತ್ಯವೂ 1,000 ಲೀಟರ್ ಅಂಬಲಿ ಮತ್ತು 500ರಿಂದ 600 ಲೀಟರ್‌ನಷ್ಟು ಮಜ್ಜಿಗೆ ಸಿದ್ಧಪಡಿಸಲಾಗುತ್ತಿದೆ’ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ವಿಜಯ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕ್ಯಾಲ್ಸಿಯಂ ಅಂಬಲಿ: ‘ರಾಗಿ ಅಂಬಲಿ ಮನೆಯಲ್ಲಿ ಸಾಮಾನ್ಯವಾಗಿ ತಯಾರಿಸುವ ಪೇಯ. ಬಹುತೇಕರು ರಾಗಿಯನ್ನು ಅಂಬಲಿ ರೂಪದಲ್ಲಿ ಕುಡಿಯುವುದುಂಟು. ಇದನ್ನು ಇನ್ನಷ್ಟು ಆರೋಗ್ಯಕರವಾಗಿ, ಸುಲಭದಲ್ಲಿ ಜನರಿಗೆ ದೊರೆಯುವಂತೆ ಮಾಡುವ ಉದ್ದೇಶದಿಂದ ಹುರಿದ ರಾಗಿ ಹಿಟ್ಟಿಗೆ ಮಜ್ಜಿಗೆ ಹಾಗೂ ಜೀರಿಗೆಯನ್ನು ಸೇರಿಸಿ ರುಚಿಕರ ಅಂಬಲಿ ರೂಪಿಸಲಾಗಿದೆ. ಇದು ನಾರು ಮತ್ತು ಕ್ಯಾಲ್ಸಿಯಂ ಅಂಶದೊಂದಿಗೆ ಜನರಿಗೆ ಉತ್ತಮ ಆರೋಗ್ಯದ ಪ್ರಯೋಜನ ನೀಡಲಿದೆ’ ಎಂದರು.
‘ಪ್ರೋಬಯಾಟಿಕ್ ಮಜ್ಜಿಗೆಯು ಮೈಸೂರು ಡೇರಿ ಹೊಸ ಉತ್ಪನ್ನವಾಗಿದ್ದು, ಇದರಲ್ಲಿ ಜೀರ್ಣಕ್ರಿಯೆಗೆ ಪೂರಕವಾದ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಪೂರಕ ಅಂಶಗಳಿರುತ್ತವೆ. ವಿದೇಶದಲ್ಲಿ ಈಗಾಗಲೇ ಪ್ರೋಬಯಾಟಿಕ್ ಉತ್ಪನ್ನಗಳು ಆರೋಗ್ಯ ದೃಷ್ಟಿಯಿಂದ ಸಾಕಷ್ಟು ಜನಪ್ರಿಯತೆ ಪಡೆದಿವೆ. ನಂದಿನಿ ಕೂಡ ಈ ಉತ್ಪನ್ನದ ಮೂಲಕ ಜೀರ್ಣಾಂಗ ವ್ಯವಸ್ಥೆಗೆ ಪೂರಕ ಉತ್ಪನ್ನವನ್ನು ದೊರೆಯುವಂತೆ ಮಾಡಿದೆ. ಸಾಧಾರಣ ಮಜ್ಜಿಗೆಯಂತೆಯೇ ರುಚಿಯಿದ್ದರೂ ಆರೋಗ್ಯಕ್ಕೆ ಇತರ ಮಜ್ಜಿಗೆಗಿಂತ ಇದು ಹೆಚ್ಚು ಪ್ರಯೋಜನಕಾರಿ’ ಎಂದು ವಿವರಿಸಿದರು.
‘ಪ್ರಾಯೋಗಿಕವಾಗಿ ನಗರದ 209 ಪಾರ್ಲರ್ ಹಾಗೂ 1,200 ಏಜೆಂಟ್ ಪಾಯಿಂಟ್ ಸೇರಿ ಜಿಲ್ಲೆಯ ನೂರಾರು ಬೇಕರಿ, ಅಂಗಡಿಗಳ ಮೂಲಕ ನಿತ್ಯ ಸಾವಿರ ಲೀಟರ್ ಉತ್ಪನ್ನಗಳ ಮಾರಾಟ ಮಾಡುತ್ತಿದ್ದೇವೆ. ಬೇಡಿಕೆ ಗಮನಿಸಿ ಇನ್ನಷ್ಟು ನೂತನ ಉಪಕರಣಗಳನ್ನು ಅಳವಡಿಸಿ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶವಿದೆ. ಬೇರೆ ಬೇರೆ ರುಚಿಯಲ್ಲೂ ಅಂಬಲಿ ಮಾಡುವ ಯೋಜನೆಯಿದೆ’ ಎಂದು ತಿಳಿಸಿದರು.
ಇಂದು ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದು ರಾಗಿ ಉತ್ಪನ್ನ ತಯಾರಿಗೆ ನಂದಿನಿ ಕೂಡ ಮುಂದಾಗಿದೆ
– ಬಿ.ಎನ್.ವಿಜಯ್‌ಕುಮಾರ್ ವ್ಯವಸ್ಥಾಪಕ ನಿರ್ದೇಶಕ ಮೈಮುಲ್
ಮಧುಮೇಹಿಗಳಿಂದ ಹೆಚ್ಚಿದ ಬೇಡಿಕೆ
‘ಈ ಹಿಂದೆ ಮಜ್ಜಿಗೆ ಲಸ್ಸಿ ಕುಡಿಯುತ್ತಿದ್ದವರೂ ಈಗ ರಾಗಿ ಅಂಬಲಿ ಕೇಳುತ್ತಿದ್ದಾರೆ. ಅದರಲ್ಲೂ ಮಧುಮೇಹಿ ಸಮಸ್ಯೆ ಇರುವವರಿಂದ ಬೇಡಿಕೆ ಹೆಚ್ಚುತ್ತಿದೆ’ ಎಂದು ಚಾಮರಾಜ ಜೋಡಿ ರಸ್ತೆಯ ನಂದಿನಿ ಪಾರ್ಲರ್ ಮಾಲೀಕರಾದ ಎಂ.ಮಂಜುಳಾ ತಿಳಿಸಿದರು. ‘ರುಚಿ ಕೂಡ ಉತ್ತಮವಾಗಿದೆ ಎನ್ನುತ್ತಿದ್ದಾರೆ ಗ್ರಾಹಕರು. ಆರ್ಡರ್ ಹಾಕಿದಷ್ಟು ಖಾಲಿಯಾಗುತ್ತಿದೆ. ಪ್ರೋಬಯಾಟಿಕ್ ಮಜ್ಜಿಗೆ ಸ್ವಲ್ಪ ಕಡಿಮೆ ವ್ಯಾಪಾರವಾಗುತ್ತಿದ್ದು ಇನ್ನಷ್ಟು ಪ್ರಚಾರವಾಗಬೇಕು’ ಎಂದರು. ‘ಈ ದರದಲ್ಲಿ ಉತ್ತಮ ಪ್ರಾಡಕ್ಟ್ ಬೇಸಿಗೆಗೆ ಒಳ್ಳೆಯ ಪಾನೀಯವಿದು’ ಎಂದು ಗ್ರಾಹಕ ಹರೀಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.