ADVERTISEMENT

ಸೀಗೆ ಹುಣ್ಣಿಮೆ: ನಂಜನಗೂಡು ಶ್ರೀಕಂಠೇಶ್ವರ ದೇಗುಲದಲ್ಲಿ ಜನಸಾಗರ

ರಾಜ್ಯದ ವಿವಿಧ ಭಾಗಗಳಿಂದ ದರ್ಶನ ಪಡೆಯಲು ಬಂದಿದ್ದ ಭಕ್ತರು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 5:27 IST
Last Updated 14 ಅಕ್ಟೋಬರ್ 2019, 5:27 IST
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಪ್ರಯುಕ್ತ ದೇವರ ದರ್ಶನ ಪಡೆಯಲು ಸೇರಿದ್ದ ಭಕ್ತರು
ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಹುಣ್ಣಿಮೆ ಪ್ರಯುಕ್ತ ದೇವರ ದರ್ಶನ ಪಡೆಯಲು ಸೇರಿದ್ದ ಭಕ್ತರು   

ನಂಜನಗೂಡು: ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಭಾನುವಾರ ಸೀಗೆ ಹುಣ್ಣಿಮೆ ಪ್ರಯುಕ್ತ ಸ್ವಾಮಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಜನಸಾಗರ ಹರಿದು ಬಂದಿತ್ತು.

ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ಭಕ್ತರು ಹೊರ ಊರುಗಳಿಂದ ಶನಿವಾರ ರಾತ್ರಿ ಬಂದು ದೇವಾಲಯದ ಕೈಸಾಲೆ ಹಾಗೂ ಆವರಣದಲ್ಲಿ ತಂಗಿದ್ದರು. ಬೆಳಿಗ್ಗೆ 4.30ರಿಂದಲೇ, ಕಪಿಲಾ ನದಿಯ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಿ ದೇವಾಲಯದ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು.

ದೇವಾಲಯದ ಆಗಮಿಕರಾದ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಸ್ವಾಮಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ಸೇವೆಯ ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಲಾಯಿತು.

ADVERTISEMENT

ದೇವಾಲಯದ ಮುಂಭಾಗ ಭಕ್ತರು ಉರುಳು ಸೇವೆ, ಧೂಪ, ದೀಪದ ಸೇವೆಯಲ್ಲಿ ನಿರತರಾಗಿದ್ದರು. ಹರಿಕೆ ಮುಡಿ ಸಲ್ಲಿಸಲು, ಮುಡಿಕಟ್ಟೆಯಲ್ಲಿ ಭಕ್ತರ ಸಂದಣಿ ಏರ್ಪಟ್ಟಿತ್ತು. ಸೀಗೆ ಹುಣ್ಣಿಮೆ ಪ್ರಯುಕ್ತ ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯ ಮೂರ್ತಿಗಳನ್ನು ಚಿಕ್ಕ ತೇರಿನಲ್ಲಿ ಪ್ರತಿಷ್ಠಾಪಿಸಿ, ದೇವಾಲಯದ ಸುತ್ತ ಭಕ್ತರು ತೇರು ಎಳೆದು ಸಂಭ್ರಮಿಸಿದರು.

ಸ್ವಾಮಿಯ ವಿಶೇಷ ದರ್ಶನದ ₹ 100 ಹಾಗೂ ₹ 30 ಟಿಕೆಟ್ ಕೌಂಟರ್ ಹಾಗೂ ಪ್ರಸಾದದ ಕೌಂಟರ್ ನಲ್ಲಿ ಲಾಡು, ಕಲ್ಲು ಸಕ್ಕರೆ ಪ್ರಸಾದಕ್ಕೆ ಹೆಚ್ಚಿನ ಬೇಡಿಕೆ ಕಂಡುಬಂದಿತು. ದಾಸೋಹ ಭವನದಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು ಎಂದು ದೇವಾಲಯದ ಎಇಒ ಗಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.