ನಂಜನಗೂಡು: ಇಲ್ಲಿನ ಶ್ರೀಕಂಠೇಶ್ವರ ದೇಗುಲದಲ್ಲಿ ಇತ್ತೀಚೆಗೆ ನಡೆದ ‘ಅಂಧಕಾಸುರ ವಧೆ’ ಧಾರ್ಮಿಕ ಕಾರ್ಯಕ್ಕೆ ಅಡ್ಡಿಪಡಿಸಿ, ಉತ್ಸವ ಮೂರ್ತಿಗಳಿಗೆ ಅಶುದ್ಧ ನೀರು ಎರಚಿದ ಪ್ರಕರಣವನ್ನು ಖಂಡಿಸಿ ಶ್ರೀಕಂಠೇಶ್ವರ ಭಕ್ತ ಮಂಡಳಿ ಗುರುವಾರ ಕರೆ ನೀಡಿದ್ದ ‘ನಂಜನಗೂಡು ಬಂದ್’ಗೆ ಜನರಿಗೆ ಉತ್ತಮ ಬೆಂಬಲ ವ್ಯಕ್ತವಾಯಿತು.
ವಹಿವಾಟು ನಡೆಸುವಂತೆ ತಾಲ್ಲೂಕು ಆಡಳಿತವು ವ್ಯಾಪಾರಿಗಳಿಗೆ ಧ್ವನಿವರ್ಧಕದ ಮೂಲಕ ಪ್ರಚಾರ ಮನವಿ ಮಾಡಿದ್ದರೂ, ವ್ಯಾಪಾರಿಗಳು ಅಂಗಡಿ– ಮುಂಗಟ್ಟುಗಳನ್ನು ಮುಚ್ಚಿ ಬಂದ್‌ನಲ್ಲಿ ಪಾಲ್ಗೊಂಡರು.
ಬಿಜೆಪಿ ಮುಖಂಡ ಬಿ.ಹರ್ಷವರ್ಧನ್ ನೇತೃತ್ವದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ನಗರದ ಬಜಾರ್ ರಸ್ತೆ, ಅಂಗಡಿ ಬೀದಿ, ರಾಷ್ಟ್ರಪತಿ ರಸ್ತೆ, ಎಂಜಿಎಸ್ ರಸ್ತೆ, ಹುಲ್ಲಹಳ್ಳಿ ರಸ್ತೆ ಸೇರಿದಂತೆ ಎಲ್ಲೆಡೆ ಜನ ಸಂಚಾರವಿರಲಿಲ್ಲ. ತಾಲ್ಲೂಕು ವಕೀಲರ ಸಂಘದ ಕರೆಯಂತೆ ವಕೀಲರು ನ್ಯಾಯಾಲಯದ ಕಾರ್ಯ ಕಲಾಪವನ್ನು ಬಹಿಷ್ಕರಿಸಿ ಬಂದ್‍ಗೆ ಬೆಂಬಲ ಸೂಚಿಸಿದರು. ಔಷಧ ಅಂಗಡಿ ವರ್ತರು, ಮಾಲೀಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ದೇವಾಲಯ ಪ್ರದಕ್ಷಿಣೆ: ರಾಕ್ಷಸ ಮಂಟಪ ವೃತ್ತದಲ್ಲಿ ಸಮಾವೇಶಗೊಂಡ ಭಕ್ತರು, ಸ್ಥಳೀಯರು, ವ್ಯಾಪಾರಿಗಳು ಸಂಸ್ಕೃತ ಪಾಠಶಾಲಾ ಬೀದಿ, ಅಂಗಡಿ ಬೀದಿ ಮೂಲಕ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಪ್ರದಕ್ಷಿಣೆ ಹಾಕಿದರು. ರಾಷ್ಟ್ರಪತಿ ರಸ್ತೆಯ ಮೂಲಕ ಪ್ರಸನ್ನ ಚಿಂತಾಮಣಿ ಗಣಪತಿ ದೇವಾಲಯದವರೆಗೂ ಬೃಹತ್ ಮೆರವಣಿಗೆ ನಡೆಸಿದರು. ಈ ವೇಳೆ ತಾಲ್ಲೂಕು ಹಾಗೂ ಜಿಲ್ಲಾಡಳಿತ ವೈಫಲ್ಯ ಖಂಡಿಸಿ ಘೋಷಣೆ ಕೂಗಿದರು.
ಚಿಂತಾಮಣಿ ಗಣಪತಿ ದೇವಾಲಯ ವೃತ್ತದಲ್ಲಿ ತಹಶೀಲ್ದಾರ್ ಶಿವಪ್ರಸಾದ್ ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದರು.
ಮುಖಂಡ ಹರ್ಷವರ್ಧನ್ ಮಾತನಾಡಿ, ‘ಅಂಧಕಾಸುರನ ವಧೆ ಕಾರ್ಯಕ್ರಮ ಯಾವುದೋ ಸಂಘಟನೆ, ಸಂಘ ಸಂಸ್ಥೆಯಿಂದ ಮಾಡಿದ್ದಲ್ಲ. ಧಾರ್ಮಿಕ ದತ್ತಿ ಇಲಾಖೆ ಕೈಪಿಡಿ ಆಧಾರದ ಮೇಲೆಯೇ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಕರಣದ ಬಗ್ಗೆ ಶಾಸಕರು ಮೌನಕ್ಕೆ ಶರಣಾಗಿದ್ದಾರೆ. ಅವರಿಗೆ ಕ್ಷೇತ್ರದ ಆಡಳಿತದ ಮೇಲೆ ಹಿಡಿತವಿಲ್ಲ’ ಎಂದು ದರ್ಶನ್ ಧ್ರುವನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ದೇವಾಲಯ ಪ್ರವೇಶ ಮಾಡದಿರುವುದು. ಪುತ್ರ ಯತೀಂದ್ರ ಭಾರತ ಹಿಂದೂ ರಾಷ್ಟ್ರವಾದರೆ ಉಳಿಗಾಲವಿಲ್ಲವೆಂಬ ಹೇಳಿಕೆ ನೀಡಿರುವುದು. ಹಿಂದೂ ಧಾರ್ಮಿಕ ಆಚರಣೆಗಳಿಗೆ ಸರ್ಕಾರವೇ ಹಿಂಬಾಗಿಲಿನಿಂದ ಅಡ್ಡಿಪಡಿಸುತ್ತಿದೆ ಎಂಬ ಅನುಮಾನ ಜನರಲ್ಲಿ ಮೂಡಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಮುಖಂಡರಾದ ಎನ್.ಆರ್.ಕೃಷ್ಣಪ್ಪಗೌಡ, ಸಿಂಧೂವಳ್ಳಿ ಕೆಂಪಣ್ಣ, ಚಿಕ್ಕರಂಗನಾಯ್ಕ, ಮಹೇಶ್, ಶ್ರೀನಿವಾಸರೆಡ್ಡಿ, ಕಪಿಲೇಶ್, ಎನ್.ಸಿ.ಬಸವಣ್ಣ, ಮಹೇಶ್, ಹೆಮ್ಮರಗಾಲ ಶಿವಣ್ಣ, ಎಸ್.ಚಂದ್ರಶೇಖರ್, ಗಿರೀಶ್, ಎನ್.ಜೆ.ಸುನಿಲ್, ಆನಂದ್ ಬಿ.ನಾಯರ್, ನಿತಿನ್, ರವಿ, ಕಿರಣ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.