ಮೈಸೂರು: ಭೂ ತಾಯಿ ಮಡಿಲಿನ ಅದ್ಬುತ ಸೃಷ್ಟಿ ಎಂದೇ ಬಿಂಬಿತಗೊಂಡಿರುವ ಗೆಡ್ಡೆ–ಗೆಣಸಿನ ನಾಲ್ಕನೇ ಮೇಳಕ್ಕೆ ನಗರದ ನಂಜರಾಜ ಬಹದ್ದೂರ್ ಛತ್ರ ಸಜ್ಜಾಗಿದೆ.
ಫೆ.12, 13ರ ಶನಿವಾರ, ಭಾನುವಾರ ಎರಡು ದಿನ ಮೇಳ ನಡೆಯಲಿದ್ದು; ರಾಜ್ಯದ ವಿವಿಧೆಡೆಯ ಗೆಡ್ಡೆ–ಗೆಣಸು ಬೆಳೆಗಾರರು, ತಳಿ ಸಂರಕ್ಷಕರು, ಆದಿವಾಸಿಗಳು ಭಾಗಿಯಾಗಿ ತಮ್ಮಲ್ಲಿನ ಅಪರೂಪದ ಉತ್ಪನ್ನಗಳನ್ನು ಪ್ರದರ್ಶಿಸುವ ಜೊತೆಗೆ ಮಾರಾಟ ಮಾಡಲಿದ್ದಾರೆ.
ಎರಡೂ ದಿನ ಬೆಳಿಗ್ಗೆ 10.30ರಿಂದ ಸಂಜೆ 7 ಗಂಟೆವರೆಗೂ ಮೇಳ ನಡೆಯಲಿದೆ. ಸಹಸ್ರ, ಸಹಸ್ರ ಸಂಖ್ಯೆಯ ಜನರು ಭಾಗಿಯಾಗಿ ಅಪರೂಪದ ತಿನಿಸನ್ನು ಖರೀದಿಸಲು ಉತ್ಸುಕರಾಗಿದ್ದಾರೆ.
ವರ್ಷದಿಂದ ವರ್ಷಕ್ಕೆ ಮೈಸೂರಿಗರು ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ಹಿಂದಿನ ವರ್ಷದ ಮೇಳಕ್ಕೆ 6 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು ಎಂದು ಸಂಘಟಕರಲ್ಲೊಬ್ಬರಾದ ಸಹಜ ಸಮೃದ್ಧದ ನಿರ್ದೇಶಕ ಕೃಷ್ಣಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮೇಳದಲ್ಲಿ ವಿವಿಧ ಬಗೆಯ ಕಾಡು, ನಾಡಿನ ಗೆಡ್ಡೆ–ಗೆಣಸುಗಳು, ಮೌಲ್ಯವರ್ಧಿತ ಪದಾರ್ಥಗಳು 25ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಪ್ರದರ್ಶನಗೊಳ್ಳಲಿವೆ.
ಪರ್ಪಲ್ ಯಾಮ್, ಮಾವಿನ ಶುಂಠಿ, ಕೂವೆ ಗೆಡ್ಡೆ, ಉತ್ತರಿ ಗೆಡ್ಡೆ, ಬಿಳಿ ಸಿಹಿ ಗೆಣಸು, ಬಳ್ಳಿ ಬಟಾಟೆ, ಕಪ್ಪು ಅರಿಸಿನ, ಕಪ್ಪು ಶುಂಠಿ, ಕಾಡು ಗೆಣಸು, ಮುಳ್ಳು ಗೆಣಸು, ಸುವರ್ಣ ಗೆಡ್ಡೆ, ಬಗೆ ಬಗೆಯ ಕೆಸುವಿನ ಬೀಜದ ಗೆಡ್ಡೆಗಳು ಪ್ರದರ್ಶನದ ಜೊತೆಗೆ ಖರೀದಿಗೂ ಲಭ್ಯ. ಬಿತ್ತನೆಗೂ ಸಿಗಲಿವೆ.
ಕಪ್ಪು ಕ್ಯಾರೆಟ್, ದೇಸಿ ತರಕಾರಿ ಬೀಜಗಳು, ‘ಗೆಡ್ಡೆ–ಗೆಣಸುಗಳ ಕ್ಯಾಲೆಂಡರ್’, ಸೋರೆ ಕಲಾಕೃತಿಯೂ ಮಾರಾಟಕ್ಕೆ ಬರಲಿವೆ. ಜೇನು ಕುರುಬ ಯುವಕರು ಕಾಡು ಗೆಣಸಿನ ಜೊತೆ ಸವಿಯಲು ಜೇನನ್ನು ತರಲಿರುವುದು ಮೇಳದ ವೈಶಿಷ್ಟ್ಯ.
ಗೆಡ್ಡೆ–ಗೆಣಸು ಅಡುಗೆ ಸ್ಪರ್ಧೆ
ಫಾಸ್ಟ್ ಫುಡ್, ರೆಡಿ ಟು ಈಟ್ ಆಹಾರಗಳಿಗೆ ಮೊರೆ ಹೋಗುತ್ತಿರುವ ಇಂದಿನ ಪೀಳಿಗೆಗೆ ಗೆಡ್ಡೆ–ಗೆಣಸಿನ ತಿನಿಸು ಪರಿಚಯಿಸುವ ಉದ್ದೇಶದಿಂದ ‘ಗೆಡ್ಡೆ–ಗೆಣಸು ಅಡುಗೆ ಸ್ಪರ್ಧೆ’ಯೂ ಭಾನುವಾರ ನಡೆಯಲಿದೆ.
ಕಾಡಿನ ಅಥವಾ ಕೃಷಿ ಮೂಲದ ಗೆಡ್ಡೆ–ಗೆಣಸು ಬಳಸಿ ತಯಾರಿಸುವ ಅಡುಗೆಗಳು ಸಾಂಪ್ರದಾಯಿಕವಾಗಿರಬಹುದು ಅಥವಾ ಹೊಸ ರುಚಿಯಾಗಿರಬಹುದು. ವಿವಿಧ ಜಾತಿಯ ಗೆಡ್ಡೆ–ಗೆಣಸು ಬಳಸಿ ಮಾಡಿದ ಅಡುಗೆಯನ್ನು, ಮನೆಯಲ್ಲೇ ತಯಾರಿಸಿಕೊಂಡು ಮೇಳಕ್ಕೆ ಫೆ.1ರ ಮಧ್ಯಾಹ್ನ 12ರೊಳಗೆ ತರಬೇಕು.
ಅಪರೂಪದ ಅಡುಗೆ ತಯಾರಿಸಿದವರಿಗೆ ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು. ಆಲೂಗೆಡ್ಡೆ ಹೊರತುಪಡಿಸಿ ಮಾಡಿದ ಕಾಡು ಗೆಡ್ಡೆಯ ಅಡುಗೆಗಳಿಗೆ ವಿಶೇಷ ಮನ್ನಣೆ ಸಿಗಲಿದೆ ಎಂದು ಕೃಷ್ಣಪ್ರಸಾದ್ ಮಾಹಿತಿ ನೀಡಿದರು.
ಮಾಹಿತಿಗಾಗಿ 9880908608/7090009911 ಸಂಪರ್ಕಿಸಿ.
ಗೆಡ್ಡೆ–ಗೆಣಸಿನ ಕುರಿತಂತೆ...
ನೈಸರ್ಗಿಕ ವಿಕೋಪ, ಬರಗಾಲದಲ್ಲೂ ಜೀವ ಉಳಿಸುವ, ವಾತಾವರಣದ ವೈಪರೀತ್ಯದಿಂದ ಎಲ್ಲ ಬೆಳೆಗಳು ವಿಫಲವಾದರೂ ರೈತನ ಕೈ ಹಿಡಿದು ಪೊರೆಯುವ ಉತ್ಪನ್ನ ಗೆಡ್ಡೆ–ಗೆಣಸು.
ಆಯುರ್ವೇದ, ಜನಪದ ವೈದ್ಯದಲ್ಲಿ ಮೂಲಿಕೆಯ ಬಳಕೆ ವ್ಯಾಪಕವಾಗಿದೆ. ಪಿಷ್ಟ, ನಾರು, ಪೋಷಕಾಂಶಗಳಿಂದ ಸಮೃದ್ಧವಾದ ಗೆಡ್ಡೆ–ಗೆಣಸು ನಮ್ಮ ಅನ್ನದ ಬಟ್ಟಲು ತುಂಬುವುದರ ಜೊತೆಗೆ, ಆರೋಗ್ಯವನ್ನೂ ವೃದ್ಧಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ನೈಸರ್ಗಿಕವಾಗಿ ಬೆಳೆಯುವ, ವಿಷಮುಕ್ತವಾದ ಗೆಡ್ಡೆ–ಗೆಣಸು ಪೋಷಕಾಂಶದ ಕಣಜ. ನಾರಿನಂಶ ಹೆಚ್ಚಿರುವುದರಿಂದ ವಿಸರ್ಜನಾಕ್ರಿಯೆಗೆ ಸಹಕಾರಿ. ಚರ್ಮದ ಮೈಕಾಂತಿ ವೃದ್ಧಿಸಲು, ವಯಸ್ಸನ್ನು ನಿಧಾನಿಸಲು ಉಪಕಾರಿ. ಇವುಗಳಲ್ಲಿ ಕಾರ್ಬೋಹೈಡ್ರೇಟ್ ಸಂಯುಕ್ತ ರೂಪದಲ್ಲಿದೆ. ರಕ್ತದಲ್ಲಿ ಸಕ್ಕರೆ ಅಂಶ ಒಮ್ಮೆಲೇ ಹೆಚ್ಚುವುದಿಲ್ಲ. ಮಧುಮೇಹಿಗಳೂ ಆತಂಕವಿಲ್ಲದೆ ಸವಿಯಬಹುದು.
ಆದಿವಾಸಿಗಳ ಪಾರಂಪರಿಕ ಆಹಾರ. ಕುಣಬಿ, ಸಿದ್ಧಿ, ಜೇನು ಕುರುಬ, ಬೆಟ್ಟ ಕುರುಬ, ಸೋಲಿಗ, ಇರುಳಿಗ, ಆದಿವಾಸಿಗಳ ಪಾಲಿಗೆ ಇಂದಿಗೂ ಆಹಾರ. ಮಣ್ಣಿನ ಕಸುವನ್ನು ಪಡೆದ ಪುಷ್ಟಿದಾಯಕ ಹಾಗೂ ಶಕ್ತಿದಾಯಕ ಆಹಾರ. ಬರಗಾಲದ, ಆಪತ್ಕಾಲದ ಬಂಧು.
ಅಕ್ಕಿ, ರಾಗಿ, ಜೋಳ, ಗೋಧಿಗಿಂತಲೂ ಹೆಚ್ಚು ಪೌಷ್ಟಿದಾಯಕ. ಹೊಲದ ಅಂಚಿನಲ್ಲಿ ಇಲ್ಲವೇ ಬೆಳೆಯ ಸಾಲಿನ ನಡುವೆಯೂ ಬೆಳೆದುಕೊಳ್ಳಬಹುದು. ಹಿತ್ತಲು, ತಾರಸಿಯಲ್ಲೂ ಬೆಳೆಯಬಹುದು.
ಡಯೋಸ್ಕೋರಿಯಾ ಕುಟುಂಬದ ಬಳ್ಳಿ ಆಲೂಗೆಡ್ಡೆ, ಹುತ್ತರಿ ಗೆಣಸು, ಪರ್ಪಲ್ ಯಾಮ್ ಬಳ್ಳಿಯಾಗಿ ಹಬ್ಬಿ ಬೆಳೆದರೆ, ಕೆಸು ಅಗಲವಾದ ಆಕರ್ಷಕ ಎಲೆಗಳನ್ನು ಹೊತ್ತು ನಿಂತ ಗಿಡ.
ಶುಂಠಿ, ಅರಿಸಿನ, ಆರಾರೂಟ್ ಬೇರಿನ ರೂಪದಲ್ಲಿರುತ್ತವೆ. ಮಾಕಳಿ ಬೇರು ಮೂಲಿಕೆಯೂ ಹೌದು, ಚಪ್ಪರಿಸುವ ಉಪ್ಪಿನಕಾಯಿಯೂ ಹೌದು. ಕ್ಯಾರೆಟ್, ಬೀಟ್‍ರೂಟ್, ಸಿಹಿ ಗೆಣಸು, ಮರ ಗೆಣಸು ನೆಲದೊಡಲ ಸೋಜಿಗ. ಕತ್ತಾಳೆ ಗೆಡ್ಡೆ, ಗೊಟ್ಟಿ ಗೆಡ್ಡೆ ಒಣಭೂಮಿಯ ಸಂಗಾತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.