ADVERTISEMENT

ಹಿರಿಯ ರಂಗಕರ್ಮಿ ಅಶ್ವಥ್ ಕದಂಬಗೆ ನಾಟಕ ಅಕಾಡೆಮಿಯ ಪ್ರಶಸ್ತಿ ಗರಿ

ರಂಗ ಸೇವೆಗೆ ಸಂದ ಪುರಸ್ಕಾರ

ಡಿ.ಬಿ, ನಾಗರಾಜ
Published 5 ಫೆಬ್ರುವರಿ 2021, 15:00 IST
Last Updated 5 ಫೆಬ್ರುವರಿ 2021, 15:00 IST
ಅಶ್ವಥ್‌ ಕದಂಬ
ಅಶ್ವಥ್‌ ಕದಂಬ   

ಮೈಸೂರು: ಐದೂವರೆ ದಶಕದಿಂದಲೂ ರಂಗಭೂಮಿಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಮೈಸೂರಿನ ಅಶ್ವಥ್‌ ಕದಂಬ ಅವರಿಗೆ ನಾಟಕ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ದೊರೆತಿದೆ.

ಕಲಾವಿದರ ಕುಟುಂಬದ ಕುಡಿ ಅಶ್ವಥ್ ಕದಂಬ ಬಾಲ್ಯದಿಂದಲೂ ನಾಟಕದಲ್ಲಿ ಆಸಕ್ತಿ ಹೊಂದಿದ್ದವರು. ನಾಟಕ ನೋಡುತ್ತಲೇ ಅಭಿನಯ ಕಲಿತ ಪ್ರತಿಭೆ.

‘ನನ್ನ ದೊಡ್ಡಣ್ಣ ಸಿದ್ದಪ್ಪಾಜಿ ರೇಣುಕಾ ಕಲಾನಿಕೇತನ ಸಂಘ ನಡೆಸುತ್ತಿದ್ದರು. ‘ಸತ್ತಾಗ’ ನಾಟಕ ಪ್ರದರ್ಶನ ನಡೆದಿತ್ತು. ನಟಿಯೊಬ್ಬರು ಗೈರಾಗಿದ್ದರು. ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ನಾಟಕ ನೋಡುತ್ತಲೇ ಎಲ್ಲವನ್ನೂ ಅಭ್ಯಾಸ ಮಾಡಿಕೊಂಡಿದ್ದ ನಾನೇ ಸ್ತ್ರೀ ಪಾತ್ರ ಮಾಡುವುದಾಗಿ ಹೇಳಿ ಅಭಿನಯಿಸಿದೆ. ಆಕಸ್ಮಿಕವಾಗಿ ರಂಗ ಪ್ರವೇಶಿಸಿ, ಐದೂವರೆ ದಶಕಗಳಿಂದಲೂ ಇಲ್ಲಿಯೇ ಸಕ್ರಿಯನಾಗಿರುವೆ’ ಎಂದು ಅಶ್ವಥ್‌ ಕದಂಬ, ‘ಪ್ರಜಾವಾಣಿ’ ಜೊತೆ ತಮ್ಮ ‘ರಂಗಯಾನ’ದ ಪಯಣವನ್ನು ಹಂಚಿಕೊಂಡರು.

ADVERTISEMENT

ಎಚ್ಚೆಮ್ಮ ನಾಯಕ, ರಣದುಂದುಭಿ, ವಿಷಜ್ವಾಲೆ, ಸಮಯಕ್ಕೊಂದು ಸುಳ್ಳು, ಪರಿವರ್ತನೆ, ಹೆಣ್ಣು–ಹೊನ್ನು–ಮಣ್ಣು, ಪುರುರವ ಸೇರಿದಂತೆ 22 ನಾಟಕಗಳನ್ನು ನಿರ್ದೇಶಿಸಿರುವ ಅಶ್ವಥ್ ಕದಂಬ, 70ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಕಲ್ಯಾಣ್‌ಕುಮಾರ್‌, ರಾಜಾನಂದ್, ಸುಂದರಕೃಷ್ಣ ಅರಸ್‌, ಮೈಸೂರು ಲೋಕೇಶ್‌, ಮುಸುರಿ ಕೃಷ್ಣಮೂರ್ತಿ, ಹೊನ್ನವಳ್ಳಿ ಕೃಷ್ಣ ಜೊತೆ ನಾಟಕದಲ್ಲಿ ಅಭಿನಯಿಸಿರುವ ಅಶ್ವಥ್‌, ಬೆಳ್ಳಿತೆರೆಯಲ್ಲೂ ನಟಿಸಿದ್ದಾರೆ. ಕುಮಾರ್‌ಬಂಗಾರಪ್ಪ ಅಭಿನಯದ ಅಂಗೈಯಲ್ಲಿ ಅಪ್ಸರೆ ಸಿನಿಮಾದಲ್ಲಿ ವೈದ್ಯರ ಪಾತ್ರ, ಕಂಬಾಲಹಳ್ಳಿ ಸಿನಿಮಾದಲ್ಲೂ ಪಾತ್ರವೊಂದನ್ನು ಮಾಡಿದ್ದಾರೆ. ಸಿನಿಮಾ ಕ್ಷೇತ್ರ ಒಗ್ಗದಿದ್ದರಿಂದ ಅಲ್ಲಿ ಮುಂದುವರೆಯದೆ ವಾಪಸ್‌ ರಂಗಭೂಮಿಗೆ ಮರಳಿ ವಿವಿಧ ಚಟುವಟಿಕೆಗಳಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ.

ವಯಸ್ಸಾದಂತೆ ರಂಗದ ಪರದೆಯ ಹಿಂದೆ ಸರಿದ ಕದಂಬ, ರಂಗ ಕಲಾವಿದರಿಗೆ ಮೇಕಪ್‌ ಮಾಡುವಲ್ಲಿ ಇದೀಗ ನಿಷ್ಣಾತರಾಗಿದ್ದಾರೆ. ಕಾಸ್ಟ್ಯೂಮ್‌ ಡಿಸೈನರ್‌ ಆಗಿಯೂ ತಮ್ಮ ಕೆಲಸ ಮುಂದುವರೆಸಿದ್ದಾರೆ. ಪೌರಾಣಿಕ ನಾಟಕಗಳಿಗೆ ಅಗತ್ಯವಿರುವ ಪರಿಕರಗಳಾದ ಕಿರೀಟ, ಭುಜಕೀರ್ತಿ ಸೇರಿದಂತೆ ಇನ್ನಿತರ ವಸ್ತುಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರಾಗಿದ್ದು, 73ರ ಇಳಿವಯಸ್ಸಲ್ಲೂ ರಂಗಭೂಮಿಗೆ ತಮ್ಮ ಸೇವೆ ಸಲ್ಲಿಸುವಲ್ಲಿ ನಿರತರಾಗಿದ್ದಾರೆ.

ಸುತ್ತೂರು ಮಠದ ‘ದಿವ್ಯ ಚೇತನ’ ರಂಗ ತಂಡದ 101 ನಾಟಕಗಳ ಪಾತ್ರಧಾರಿಗಳಿಗೆ ಮೇಕಪ್‌ ಮಾಡಿದ್ದು ಕದಂಬ ಹೆಗ್ಗಳಿಕೆಗಳಲ್ಲಿ ಒಂದು. ಕದಂಬ ರಂಗ ವೇದಿಕೆ, ರಾಜಾನಂದ ರಂಗ ವೈಭವ, ಅಪ್ರವರಂಭೆ, ಅಮರ ಕಲಾ ಸಂಘ, ವಿಶ್ವ ಕಲಾನಿಕೇತನ, ಮಂಡ್ಯ ರಮೇಶ್‌ ಸಾರಥ್ಯದ ನಟನಾ ಕಲಾ ಶಾಲೆಯಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.