ಮೈಸೂರು: ‘ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ತೆರಿಗೆ ಸಂಗ್ರಹ ಪ್ರಮಾಣವು ಶೇ 18ರಷ್ಟು ಹೆಚ್ಚಿದ್ದು, ಇದರಲ್ಲಿ ತೆರಿಗೆ ಸಂಗ್ರಹದಾರರ ಶ್ರಮವೂ ಹೆಚ್ಚಿದೆ’ ಎಂದು ಆದಾಯ ತೆರಿಗೆ ಇಲಾಖೆ ಆಯುಕ್ತ ಸತೀಶ್ ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಅಖಿಲ ಭಾರತ ತೆರಿಗೆ ಸಲಹೆಗಾರರ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘವು ಆಯೋಜಿಸಿದ್ದ ರಾಷ್ಟ್ರೀಯ ತೆರಿಗೆ ಸಮ್ಮೇಳನ ಮತ್ತು ತೆರಿಗೆ ಸಲಹೆಗಾರರ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಆದಾಯ ತೆರಿಗೆ ಪಾವತಿಸುವವರ ಪ್ರಮಾಣವು ಈ ವರ್ಷ ಶೇ 7ರಷ್ಟು ಹೆಚ್ಚಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರವು ಹಲವು ವಿನಾಯಿತಿಗಳನ್ನು ಘೋಷಿಸಿದ್ದು, ಅದರಿಂದ ತೆರಿಗೆ ಪಾವತಿದಾರರಿಗೆ ಹೆಚ್ಚು ಲಾಭವಾಗಲಿದೆ’ ಎಂದು ವಿವರಿಸಿದರು.
‘ಈ ವರ್ಷ ಎಂಎಸ್‌ಎಂಇಗಳನ್ನು (ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ) ಕೈಗಾರಿಕೆ ಹೊಸ ತೆರಿಗೆ ವ್ಯಾಪ್ತಿಗೆ ತಂದಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ವಿ.ಎಸ್.ವಿ.ಎಸ್. ಪದ್ಧತಿಯಿಂದಾಗಿ ತೆರಿಗೆ ಪಾವತಿದಾರರಿಗೆ ಹಲವು ಅನುಕೂಲಗಳು ಆಗಲಿವೆ. ಸಕಾಲದಲ್ಲಿ ತೆರಿಗೆ ಪಾವತಿಯು ದೇಶದ ಅಭಿವೃದ್ಧಿಗೆ ಪೂರಕ ಆಗಲಿದೆ’ ಎಂದು ಅಭಿಪ್ರಾಯಪಟ್ಟರು.
ಅಖಿಲ ಭಾರತ ತೆರಿಗೆ ಸಲಹೆಗಾರರ ಒಕ್ಕೂಟದ ಅಧ್ಯಕ್ಷ ನಾರಾಯಣ ಜೈನ್ ಮಾತನಾಡಿ, ‘ರಾಷ್ಟ್ರ ಮಟ್ಟದ ಸಂಘದಲ್ಲಿ 11,073 ಸದಸ್ಯರಿದ್ದಾರೆ. ಸದಸ್ಯರಿಗೆ ಅನುಕೂಲ ಆಗುವಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಸಂಚಿಕೆ ರೂಪದಲ್ಲಿ ಮಾಹಿತಿ ಕೈಪಿಡಿಯನ್ನು ಹೊರತರಲಾಗುತ್ತಿದೆ. ರಾಷ್ಟ್ರ ಹಾಗೂ ರಾಜ್ಯ ಸಂಘಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕಿದೆ’ ಎಂದರು.
ಒಕ್ಕೂಟದ ದಕ್ಷಿಣ ವಲಯ ಅಧ್ಯಕ್ಷ ರಾಮರಾಜು, ‘ತೆರಿಗೆ ಸಲಹೆಗಾರರು ರಾಷ್ಟ್ರ ಪ್ರಗತಿ ಹಾಗೂ ಗ್ರಾಹಕರ ಏಳಿಗೆಗೆ ಶ್ರಮಿಸಬೇಕು. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ನಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ವೃತ್ತಿಪರ ಕೌಶಲ ಹೆಚ್ಚಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ನಂಜುಂಡ ಪ್ರಸಾದ್ ಮಾತನಾಡಿ, ‘ತೆರಿಗೆ ಸಲಹೆಗಾರರು ಒತ್ತಡದಲ್ಲಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕಾರಣಕ್ಕೆ ಕರ್ನಾಟಕವು ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಸರ್ಕಾರವು ಬೇರೆ ಕ್ಷೇತ್ರಗಳಿಗೆ ನೀಡಿದಂತೆ ನಮಗೂ ವಿಮೆ ಸೌಲಭ್ಯ ನೀಡಬೇಕು. ಪ್ರತ್ಯೇಕ ಕಾನೂನು ರೂಪಿಸುವುದರ ಜೊತೆಗೆ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ತೆರಿಗೆ ಸಲಹೆದಾರರಿಗೂ ಸ್ಥಾನ ನೀಡಬೇಕು’ ಎಂದು ಆಗ್ರಹಿಸಿದರು.
ಒಕ್ಕೂಟದ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ದಿಯೊ ಕಾಕ್ರ, ದಕ್ಷಿಣ ವಲಯದ ಉಪಾಧ್ಯಕ್ಷ ಡಿ.ಎಂ. ಭತ್ತಡ್, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಮುಕುಂದ ಪೋತ್ನಿಸ್, ಮೈಸೂರು ಘಟಕದ ಎಸ್. ಪ್ರಸಾದ್, ಸುದರ್ಶನ್ ಇದ್ದರು. ದೇಶದ ವಿವಿಧ ಭಾಗಗಳ ತೆರಿಗೆ ಸಲಹೆಗಾರರು ಪಾಲ್ಗೊಂಡಿದ್ದು, ವಿಷಯ ತಜ್ಞರು ಉಪನ್ಯಾಸ ನೀಡಿದರು.
Highlights - ಅಖಿಲ ಭಾರತ ತೆರಿಗೆ ಸಲಹೆಗಾರರ ಒಕ್ಕೂಟದಿಂದ ಆಯೋಜನೆ ತೆರಿಗೆ ಸಲಹೆಗಾರರ ದಿನಾಚರಣೆ ಸಮನ್ವಯದಿಂದ ಕಾರ್ಯನಿರ್ವಹಿಸಲು ಸಲಹೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.