ADVERTISEMENT

ಮೈಸೂರು: ರಾಷ್ಟ್ರೀಯ ಯೋಗ ಒಲಿಂಪಿಯಾಡ್‌ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
<div class="paragraphs"><p>ಪ್ರೊ. ದಿನೇಶ್ ಪ್ರಸಾದ್ ಸಕ್ಲಾನಿ</p></div>

ಪ್ರೊ. ದಿನೇಶ್ ಪ್ರಸಾದ್ ಸಕ್ಲಾನಿ

   

ಮೈಸೂರು: ‘ಇಲ್ಲಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ( ಆರ್‌ಐಇ) ಆವರಣದಲ್ಲಿ ಜೂನ್‌ 18ರಿಂದ 20ರವರೆಗೆ ರಾಷ್ಟ್ರೀಯ ಯೋಗ ಒಲಿಂಪಿಯಾಡ್‌ ನಡೆಯಲಿದ್ದು, ದೇಶದ ವಿವಿಧ ಶಿಕ್ಷಣ ಸಂಸ್ಥೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ್‌ಪ್ರಸಾದ್‌ ಸಕ್ಲಾನಿ ತಿಳಿಸಿದರು.

‘ವಿದ್ಯಾರ್ಥಿಗಳಲ್ಲಿ ಯೋಗ ಜಾಗೃತಿಯ ಆಶಯದೊಂದಿಗೆ ಪ್ರತಿ ವರ್ಷ ಒಲಿಂಪಿಯಾಡ್‌ ಆಯೋಜಿಸಲಾಗುತ್ತಿದೆ. ಕೇಂದ್ರೀಯ ವಿದ್ಯಾಲಯ, ನವೋದಯ, ಸಿಬಿಎಸ್‌ಇ, ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘18ರಂದು ಬೆಳಿಗ್ಗೆ 11ಕ್ಕೆ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಒಲಿಂಪಿಯಾಡ್‌ ಉದ್ಘಾಟಿಸಲಿದ್ದಾರೆ. ಆರ್‌ಐಇ ಆವರಣದಲ್ಲಿ ಸ್ಪರ್ಧೆಗಳು ನಡೆಯಲಿವೆ’ ಎಂದರು.

ಎನ್‌ಸಿಇಆರ್‌ಟಿ ಹೊಣೆಯಲ್ಲ: ‘ಈಚೆಗೆ ನಡೆದ ನೀಟ್ ಪರೀಕ್ಷೆಯ ಪ್ರಶ್ನೆಗಳ ಆಯ್ಕೆಯಲ್ಲಿ ಕಂಡುಬಂದ ಲೋಪಕ್ಕೆ ಎನ್‌ಸಿಇಆರ್‌ಟಿ ಹೊಣೆಯಲ್ಲ. ನಾವು 2020ರಲ್ಲಿ ಪಠ್ಯ ಪರಿಷ್ಕರಿಸಿದ್ದು, ಅದು ಮುದ್ರಣ ಹಾಗೂ ಆನ್‌ಲೈನ್‌ ಎರಡೂ ಮಾಧ್ಯಮದಲ್ಲೂ ಲಭ್ಯವಿದೆ. ಹೀಗಿದ್ದೂ 2020ಕ್ಕಿಂತ ಮುಂಚಿನ ಪಠ್ಯ ಆಧರಿಸಿ ಪ್ರಶ್ನೆಪತ್ರಿಕೆ ರೂಪಿಸಿದ್ದಕ್ಕೆ ಎನ್‌ಎಟಿ ಉತ್ತರಿಸಬೇಕು’ ಎಂದು ಪ್ರತಿಕ್ರಿಯಿಸಿದರು.

‘ದೇಶದಾದ್ಯಂತ ಒಂದೊಂದೇ ರಾಜ್ಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುತ್ತಿದೆ. ಆದರೆ ಕರ್ನಾಟಕ, ಕೇರಳ ಸೇರಿದಂತೆ ಕೆಲವೇ ರಾಜ್ಯಗಳು ಹಿಂಜರಿದಿವೆ. ಶಿಕ್ಷಣ ನೀತಿ ನಿರೂಪಣೆಗಳಿಗೆ ಸಂಬಂಧಿಸಿ ಎನ್‌ಸಿಇಆರ್‌ಟಿ ಸಲಹಾ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಯಾರನ್ನೂ ಒತ್ತಾಯಿಸುವುದಿಲ್ಲ. ದೇಶದಾದ್ಯಂತ ಒಂದೇ ಶಿಕ್ಷಣ ನೀತಿ ಹೊಂದುವುದು ಉತ್ತಮ’ ಎಂದರು.

‘ಎನ್‌ಸಿಇಆರ್‌ಟಿ ಪಠ್ಯದಲ್ಲಿ ಭಾರತ ಮತ್ತು ಇಂಡಿಯಾ ಎರಡೂ ಪದ ಬಳಕೆ ಮುಂದುವರಿಯಲಿದೆ. ಸಂವಿಧಾನದಲ್ಲೇ ಈ ಎರಡೂ ಪದ ಬಳಕೆಯಲ್ಲಿದೆ’ ಎಂದು ಸ್ಪಷ್ಟಪಡಿಸಿದರು.

ಆರ್‌ಐಇ ಪ್ರಾಂಶುಪಾಲ ವೈ. ಶ್ರೀಕಾಂತ್, ಕಾರ್ಯಕ್ರಮ ಸಂಯೋಜಕಿ ಕಲ್ಪನಾ ವೇಣುಗೋಪಾಲ್ ಇದ್ದರು.

 ಪ್ರೊ. ದಿನೇಶ್ ಪ್ರಸಾದ್ ಸಕ್ಲಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.