ನಿತ್ಯದ ವಾಯುವಿಹಾರ ಮುಗಿಸಿ ನಾವು ಯಾವಾಗಲೂ ಕುಳಿತುಕೊಂಡು ಒಂದಿಷ್ಟು ಹರಟೆ ಹೊಡೆಯುವ ಜಾಗದಲ್ಲಿ ಬಂದು ಸೇರುವ ಹೊತ್ತಿಗೆ ಮೋಡ ಕವಿದು ಸಣ್ಣನೆಯ ಹನಿ ಬೀಳತೊಡಗಿದ್ದವು. ಬೆಳ್ಳಂಬೆಳಿಗ್ಗೆಯ ಈ ಪರಿಯ ಹನಿಗೆ (ಮೋಡಗಳಿಗೆ ಬೆಳಿಗ್ಗೆ ಏನು, ಸಂಜೆ ಏನು?) ಹೆದರಿ ನಾವು ಮಾಮೂಲಿಗರು ಸರಸರನೆ ಬಂದು ಬಸ್ ಶೆಲ್ಟರ್ ಸೇರಿದೆವು. ಅದಾಗಲೇ ಕೊಡಗು, ಕೇರಳದಲ್ಲಿ ಕಂಡು ಕೇಳರಿಯದ ಮೇಘ ಸ್ಪೋಟದಿಂದಾಗಿ ಸಾಕಷ್ಟು ಆಸ್ತಿ–ಪಾಸ್ತಿ ನಷ್ಟ, ಜೀವಹಾನಿ, ಅವಘಡಗಳು ಆಗಿಹೋಗಿದ್ದವು. ಹಾಗಾಗಿ ಸ್ವಾಭಾವಿಕವಾಗಿಯೇ ನಮ್ಮ ಅಂದಿನ ಚುಟುಕು ಮಾತುಕತೆ ಮಳೆಯ ಅವಾಂತರದ ಕಡೆಗೆ ತಿರುಗಿತು. ‘ಛೇ.. ಹೀಗಾಗಬಾರದಾಗಿತ್ತು. ಅದನ್ನೆಲ್ಲಾ ಟಿ.ವಿ.ಯಲ್ಲಿ ನೋಡಿ ಪತ್ರಿಕೆಗಳಲ್ಲಿ ಓದಿದರೆ ಮನ ಕಲಕುತ್ತದೆ’ ಎಂಬುದು ಸಮಾನ ಅಭಿಪ್ರಾಯವಾಗಿತ್ತು. ಈ ಕುರಿತಂತೆ ಮಾತು ಮುಂದುವರೆಯುತ್ತಿರುವಾಗಲೇ ಮತ್ತೊಬ್ಬರು ಮಳೆಹನಿಯಿಂದ ಬಚಾವಾಗಲು ಆಶ್ರಯಕ್ಕೆ ನಾವಿದ್ದಲ್ಲಿಗೆ ಬಂದು ನಿಂತರು. ಅವರೂ ಸಹ ತಮ್ಮದೊಂದು ಸಂತಾಪ ನುಡಿ ಸೇರಿಸಿ ತುಟಿಯಂಚಿನ ಸಂತಾಪ. (ಲಿಪ್–ಸಿಂಪತಿ, ಇದು ಎಲ್ಲಾ ಕಡೆ ಸಿಗುವ ಪುಕ್ಕಟ್ಟೆ ಧಾರಾಳ ಸಂತಾಪ) ವ್ಯಕ್ತಪಡಿಸಿದರು.
ಇದಿಷ್ಟು ಆಗದ್ದಿದ್ದರೆ ನನಗೆ ಈ ಕುರಿತಂತೆ ಮುಂದುವರೆದು ಯೋಚಿಸಲು ದಾರಿಯೇ ಸಿಗುತ್ತಿರಲಿಲ್ಲವೇನೋ..! ಅವರು ‘ಏನ್ ಮಾಡೋದು ಅವರವರ ಕರ್ಮಫಲ, ಗ್ರಹಬಲದ ಮೇಲಾಟ ಎಂದು ಫರ್ಮಾನು ಹೊರಡಿಸಿದರು. ಇಲ್ಲಿ ‘ಫಲ ಗ್ರಹಬಲ ಏನುಬಂತು, ಇದು ಪ್ರಕೃತಿಯ ಮೇಲೆ ನಡೆದ ಮಾನವನ ಸ್ವಾರ್ಥದಾಟ ಅಲ್ಲವೇ?. ಎಂದು ನಾನು ಪ್ರತಿಕ್ರಿಯಿಸಿದೆ. ಅದಕ್ಕೆ ಅವರು ‘ಅದು ಹೌದಾದರೂ ಗ್ರಹಗತಿ, ಜೋತಿಷ್ಯದ ಬಗ್ಗೆ ನಂಬಿಕೆ ಇಲ್ಲದಿರುವುದೂ ಕಾರಣವಾಗುತ್ತದೆ. ಜ್ಯೋತಿಷಿಗಳೂ ಹೀಗಾಗಬಹುದೆಂದು ಗ್ರಹ, ರಾಶಿ, ಲೆಕ್ಕಾಚಾರದಲ್ಲಿ ಹೇಳಿದ್ದರು. ಇದು ಗ್ರಹಚಾರದ ಫಲವಲ್ಲದೇ ಬೇರೆನು?. ಎಂದು ಮರುಪ್ರಶ್ನೆ ಹಾಕಿದರು. ಸರಿ ಇದ್ಯಾಕೋ ‘ವಿಜ್ಞಾನವೇ ಸತ್ಯ ಪ್ರಮಾಣಿಕ ಎಂಬ ಮಾತಿಗೆ ‘ಸತ್ಯಕ್ಕೆ ವಿರುದ್ಧವಾದ ವಾದ–ವಿತಂಡವಾದ’ ವಾಗಬಹುದೆಂದು ಗ್ರಹಿಸಿ ನಾನು ಅಲ್ಲಿಂದ ಹೊರಟು ಮುಂದಡಿ ಇಡುತ್ತ ಯೋಚಿಸಿದೆ.
ನಮ್ಮ ದೇಶದಲ್ಲಿ ಭೂಕಂಪ, ಮಳೆ, ಚಂಡಮಾರುತ, ಮುಂತಾದ ಯಾವುದೇ ರೀತಿಯ ಪ್ರಾಕೃತಿಕ ವಿನಾಶ, ಅನಾಹುತಗಳು ಸಂಭವಿಸಿದಾಗ ತಕ್ಷಣ ಅವೆಲ್ಲವನ್ನು ಪ್ರಕೃತಿಯಲ್ಲೂ ಏರು–ಪೇರು, ವಿವಿಧ ರೀತಿ ಒತ್ತಡಗಳು ಕಾರಣ ಎಂದು ವೈಜ್ಞಾನಿಕವಾಗಿ ಹೇಳುವ ಒಂದು ವರ್ಗವಾದರೆ ಅವೆಲ್ಲದಕ್ಕೂ ಗ್ರಹಗತಿ, ನಕ್ಷತ್ರ, ರಾಶಿಗಳ ಸಂಬಂಧವನ್ನು ಬೆಸೆದು ಗ್ರಹ, ದೇವತೆಗಳ ಮುನಿಸು, ರೌದ್ರಾವತಾರ ಎಂದು ಹೇಳುತ್ತಾ ಶಾಂತಿ, ಹೋಮ, ಜನಪದಗಳ ಆಚರಣೆ ನೀಡುತ್ತ ದಾನ–ದಕ್ಷಿಣೆಯನ್ನು ಧಾರಾಳವಾಗಿ ಪಡೆಯುವ ಇನ್ನೊಂದು ದೊಡ್ಡವರ್ಗವೇ ಇದೆ. ದಿನಪ್ರತಿ ವಿವಿಧ ಚಾನಲ್ಲುಗಳಲ್ಲಿ ಸರ್ವಾಲಂಕಾರ ಭೂಷಿತರಾಗಿ ಬೆಳಿಗ್ಗೆ–ಮಧ್ಯಾಹ್ನ–ಸಂಜೆ ಎನ್ನದೇ ಆಸ್ತಿಕರಲ್ಲಿ ದಿಗಿಲು ಹುಟ್ಟಿಸುವಮಟ್ಟಿಗೆ ಕಾಣಿಸಿಕೊಳ್ಳುವ ದೊಡ್ಡ ಜೋತಿಷಿ ವರ್ಗವೇ ಇದೆ. ಆಸ್ತಿಕತೆ ಅವರವರ ನಂಬಿಕೆ, ಸ್ವತ್ತು ಸರಿ. ಆದರೆ ಅದೇ ನಂಬಿಕೆಯನ್ನು ನಗದೀಕರಿಸಿಕೊಳ್ಳುವ ಕೆಲಸ ಅವ್ಯಾಹತವಾಗಿ ನಡೆದೇ ಇದೆ. ಅದರಲ್ಲೂ ವಿದ್ಯಾವಂತರಲ್ಲೀ ಅದೂ ಕೂಡ ನಗರ ಪ್ರದೇಶಗಳಲ್ಲಿ ಆಸ್ತಿಕತೆ ವ್ಯಾಪಕವಾಗಿರುವುದು ಯಾವುದರ ದ್ಯೋತಕ ಎಂಬುದು ನನಗಂತೂ ಅರ್ಥವಾಗದ ಸಂಗತಿಯಾಗಿಬಿಟ್ಟಿದೆ.
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಬಂಗಾಳದಲ್ಲಿ ಭೀಕರ ಬರಗಾಲ ಉಂಟಾಗಿ ವರ್ಷಗಳ ತನಕ ಬರಗಾಲದ ಬಾಂಧವರನ್ನು ಇನ್ನಿಲ್ಲದಂತೆ ಕಾಡಿತ್ತು. ಸಾವಿರಾರು ಜನ ಅನ್ನ–ನೀರು ಇಲ್ಲದೇ ಎಲ್ಲೆಂದರಲ್ಲಿ ಹಸುಳೆ, ಹಿರಿಯರು ಎಂಬ ಭೇದವಿಲ್ಲದೆ ಅಸುನೀಗಿದರು. ಅದು ‘ಬಂಗಾಲ್ ಕ ಅಕಾಲ್’ (ಬಂಗಾಳದ ಬರಗಾಲ) ಎಂದೇ ಗುರುತಿಸಲ್ಪಟ್ಟು ಗಾಂಧೀಜಿಯವರು ಅಲ್ಲಿಯೇ ಮೊಕ್ಕಾಂ ಹೂಡಿ ಜನರ ಸೇವೆ ಮಾಡುತ್ತ ದೇಶಬಾಂಧವರ ನೋವಿಗೆ ಮಡಿದರು. ಅದ್ಯಾವ ಗ್ರಹಗತಿ , ರಾಶಿದೋಷದಿಂದ ಅಲ್ಲಿಗೆ ಬರಗಾಲ ಒಕ್ಕರಿಸಿತ್ತು?. ಎಂಬುದು ಪ್ರಶ್ನಾ ವಿಚಾರ. ಸ್ವಾತಂತ್ರ್ಯ ಬಂದಮೇಲೆ ಅರವತ್ತು –ಎಪ್ಪತ್ತರ ದಶಕದ ಆಸುಪಾಸು ದೇಶಕ್ಕೆ ಬರಗಾಲ ತಟ್ಟಿತ್ತು. ನಾನಾಗ ಏಳು ಏಂಟನೇ ತರಗತಿಯಲ್ಲಿ ಓದುತಿದ್ದ ನೆನಪು ನಮಗೆ ಆಗ ಒಂದು ಹೊತ್ತಿನ ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ಆಗಿತ್ತು. ಒಂದೆರಡು ವರ್ಷ ಮಲೆನಾಡು ಸೇರಿದಂತೆ ಬಯಲು ಸೀಮೆಯನ್ನು ಬರ ಹಿಂಡಿ ಹಿಪ್ಪೆ ಮಾಡಿಬಿಟ್ಟಿತ್ತು. ಆಗ ನನ್ನ ಊರಿನ ಜನ ಹೇಳುತ್ತಿದುದು ‘ಏನೋ ಆಗಿ ಹೋಗಿದೆ, ದೇವರು ಕಣ್ಣು ಬಿಡೋತನಕ ಏನು ಮಾಡುವ ಹಾಗಿಲ್ಲ. ಅನುಭವಿಸಬೇಕು ಅಷ್ಟೇ ಇಂದಲ್ಲ ನಾಳೆ ಮಳೆ ಬಂದಾತು’ ಎಂಬ ಆಶಾದಾಯಕ ಮಾತು. ನನಗೆ ತಿಳಿದ ಮಟ್ಟಿಗೆ ಯಾವ ಜೋತಿಷಿಯೂ ಸುಳಿದಿರಲಿಲ್ಲ, ಕ್ರಮೇಣ ಕಾಲ ಬದಲಾಯಿತು. ಜನ ನಿರಾಳರಾದರು. ಎಪ್ಪದರ ದಶಕವಿರಬೇಕು– ಆಂಧ್ರಪ್ರದೇಶದಲ್ಲಿ ಇನ್ನಿಲ್ಲದ ಚಂಡಮಾರುತ ಬಿರುಗಾಳಿ ಬೀಸಿ ಅಲ್ಲಿನ ಜನರ ಬದುಕನ್ನು ಹೊಸಕಿಹಾಕಿತ್ತು. ಸರ್ಕಾರಗಳು, ಜನರು ಸಂಕಷ್ಟಪೀಡಿತರ ನೆರವಿಗೆ ಧಾವಿಸಿ ಸಂತ್ರಸ್ತರ ಕಣ್ಣೀರು ಒರೆಸಿದರು. ಇದೆಲ್ಲ ದೇವರ ರೌದ್ರಾವತಾರ ಎಂದವರಿಗೆ ಮತ್ತೊಂದು ವರ್ಗ ‘ಅಲ್ಲಿಯೇ ಸಾಯಿಬಾಬ ಇದ್ದಾರಲ್ಲ ಅವರೇಕೆ ಪವಾಡಮಾಡಿ ಚಂಡಮಾರುತವನ್ನು ತಡೆಯಲಿಲ್ಲಾ’ ಎಂದು ಪ್ರಶ್ನಿಸಿದ್ದೂ ಆಯಿತು. ಆದದ್ದು ಆಗಿಹೋಯಿತು. ಜನರು ಹೊಸ ಬದುಕನ್ನು
ಕಟ್ಟಿಕೊಂಡರು.
ಇತ್ತೀಚೆಗಷ್ಟೇ ನಾಲ್ಕಾರು ವರ್ಷಗಳ ಹಿಂದೆ ಉತ್ತರಖಂಡದಲ್ಲಿ ಮೆಘಸ್ಪೋಟ ಉಂಟಾಗಿ ಪ್ರಳಯವೇ ಆಗಿಹೋಯಿತು. ದೇವರ ಉಗಮ ಸ್ಥಾನದಲ್ಲಿಯೇ ದೇವರಿಗೆ ನೆಲೆಯಿಲ್ಲವಾಯಿತು. ಜನರು ಹೊಸದಾಗಿ ಬದುಕುರೂಪಿಸಿಕೊಳ್ಳಲು ಇನ್ನೂ ಹೆಣಗಾಡುತ್ತಲೇ ಇದ್ದಾರೆ. ಕೆಲವು ವರ್ಷಗಳ ಹಿಂದೆ ‘ಸುನಾಮಿ ಬಂದಾಗ ತಡೆಯಲಾಗಿತ್ತೆ. ಆದರೂ ಇದು ಕಲಿಯುಗದ ಅಂತ್ಯದ ಸ್ಯಾಂಪಲ್ ಎಂದವರೇ ಶಕ್ತಿಯ ಎದುರಿಗೆ ಯಾವ ಮಂತ್ರ–ತಂತ್ರಗಾರಿಕೆಯೂ ನಗಣ್ಯ ಎಂಬುದನ್ನು ಪ್ರಕೃತಿಯೇ ಬೇರೆ–ಬೇರೆ ಸಂದರ್ಭಗಳಲ್ಲಿ ಪ್ರಮಾಣಿಕರಿಸಿ ತೋರಿಸಿದೆ. ಮಾನವ ಪ್ರಕೃತಿಯ ಮೂಲ ವ್ಯವಸ್ಥೆಯನ್ನು ಅಲುಗಾಡಿಸ ಹೊರಟರೇ ಅದು ಇನ್ನಷ್ಟು ರೌದ್ರಾವತಾರ ತೋರಿಸದೇ ಬಿಡುವುದಿಲ್ಲ ಎಂಬುದು ಕಾಲಕಾಲಕ್ಕೆ ಸಾಬೀತಾಗಿದೆ. ನಂಬಿಕೆಗಳು ಇರಲಿ –ಹಾಗೇನೆ ಮನುಷ್ಯನ ದುರಾಸೆಗೆ ಪ್ರಕೃತಿಯ ಸಮತೋಲನ ತಪ್ಪಿಸದಿರಲಿ. ಈಗಾಗಿರುವ ಅನಾಹುತಕ್ಕೆ ಲಿಪ್ ಸಿಂಪತಿಗೆ ಬದಲಾಗಿ ಮನಃ ಪೂರ್ವಕವಾಗಿ ಸಹಾಯಹಸ್ತ ಚಾಚುತ್ತಿರುವವರ ಜೊತೆಗೆ ಉಳಿದ ನಾವೂ ಸೇರಿ ಮಾನವೀಯತೆ ಮೆರೆಯೋಣ–
ನೀವೆನಂತೀರಿ...?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.