ADVERTISEMENT

ಮೈಸೂರು | ಪುನರುತ್ಥಾನಕ್ಕಾಗಿ ‘ನವೋದಯ’: ಪ್ರಸನ್ನ

ಕಿರುರಂಗಮಂದಿರದಲ್ಲಿ ಮೇ 5ರಿಂದ ‘ಅಯೋಧ್ಯಾ ಕಾಂಡ’ ಸಂಗೀತ ನಾಟಕ

​ಪ್ರಜಾವಾಣಿ ವಾರ್ತೆ
Published 3 ಮೇ 2022, 13:16 IST
Last Updated 3 ಮೇ 2022, 13:16 IST
ಮೈಸೂರಿನ ಕಿರುರಂಗಮಂದಿರದಲ್ಲಿ ಮಂಗಳವಾರ ‘ಅಯೋಧ್ಯಾಕಾಂಡ’ ಸಂಗೀತ ನಾಟಕದ ಅಭ್ಯಾಸದಲ್ಲಿ ತೊಡಗಿದ್ದ ಕಲಾವಿದರಾದ ‍ಪದ್ಮಶ್ರೀ, ಪ್ರಶಾಂತ ಹಿರೇಮಠ, ರಾಜಲಕ್ಷ್ಮಿ ಅವರಿಗೆ ನಾಟಕದ ನಿರ್ದೇಶಕ ಪ್ರಸನ್ನ ಸಲಹೆ ನೀಡಿದರು
ಮೈಸೂರಿನ ಕಿರುರಂಗಮಂದಿರದಲ್ಲಿ ಮಂಗಳವಾರ ‘ಅಯೋಧ್ಯಾಕಾಂಡ’ ಸಂಗೀತ ನಾಟಕದ ಅಭ್ಯಾಸದಲ್ಲಿ ತೊಡಗಿದ್ದ ಕಲಾವಿದರಾದ ‍ಪದ್ಮಶ್ರೀ, ಪ್ರಶಾಂತ ಹಿರೇಮಠ, ರಾಜಲಕ್ಷ್ಮಿ ಅವರಿಗೆ ನಾಟಕದ ನಿರ್ದೇಶಕ ಪ್ರಸನ್ನ ಸಲಹೆ ನೀಡಿದರು   

ಮೈಸೂರು: ರಂಗಭೂಮಿ, ರಂಗ ಚಳವಳಿಯ ಪುನರುತ್ಥಾನಕ್ಕಾಗಿ ರಂಗಕರ್ಮಿ ಪ್ರಸನ್ನ ಮೈಸೂರಿನಲ್ಲಿ ‘ನವೋದಯ’ ತಂಡ ಕಟ್ಟಿದ್ದು, ‘ಅಯೋಧ್ಯಾ ಕಾಂಡ’ ಸಂಗೀತ ನಾಟಕವನ್ನು ನಿರ್ದೇಶಿಸಿದ್ದಾರೆ. ಕಲಾಮಂದಿರದ ಕಿರುರಂಗಮಂದಿರದಲ್ಲಿ ಮೇ 5ರಿಂದ 8ರ ವರೆಗೆ ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿದೆ. ಗಾನಭಾರತೀಯಲ್ಲೂ ವಾರಂತ್ಯದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ.

‘ಕನ್ನಡ ರಂಗಭೂಮಿಯಲ್ಲಿ ಸಂಗೀತ ನಾಟಕ ಪ್ರಕಾರ ಹಿನ್ನೆಲೆಗೆ ಸರಿದಿದೆ. ಅದ‌ನ್ನು ಮತ್ತೆ ಜನಪ್ರಿಯಗೊಳಿಸುವುದಕ್ಕಾಗಿ ‘ನವೋದಯ’ ಆರಂಭಿಸಲಾಗಿದೆ. ರಾಮಾಯಣವನ್ನು ಆಧರಿಸಿದ ವೃತ್ತಿಪರ ಸಂಗೀತ ನಾಟಕವನ್ನು ಕಟ್ಟಬೇಕು ಎನ್ನುವ ಆಶಯದಲ್ಲೇ ಅಯೋಧ್ಯಾಕಾಂಡ ನಿರ್ಮಿಸಲಾಗಿದೆ‌’ ಎಂದು ಪ್ರಸನ್ನ ಮಂಗಳವಾರ ಕಿರುರಂಗಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಂಗೀತ ನಾಟಕ ಮರಾಠಿಯಲ್ಲಿ ಪ್ರಖ್ಯಾತವಾಗಿದೆ. ಕನ್ನಡದ ಯಕ್ಷಗಾನವನ್ನು ನೋಡಿದ ಸಾಂಗ್ಲಿ ಮಹಾರಾಜ ರಂಗಕರ್ಮಿಗಳನ್ನು ಕರೆಯಿಸಿ ಜನಪ್ರಿಯಗೊಳಿಸಿದರು. ಈ ಪ್ರಕಾರದ ಮೂಲನೆಲೆಯಾದ ಕನ್ನಡದಲ್ಲಿ ಮತ್ತೆ ಮುನ್ನೆಲೆಗೆ ತರಲು ‘ನವೋದಯ’ ಮುಂದಾಗಿದೆ’ ಎಂದರು.

ADVERTISEMENT

‘ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ – ಸಮನ್ವಯ ಸಿದ್ಧಾಂತದ ಮೂಲಕ ಪರಂಪರೆಯ ದುರ್ಗುಣಗಳನ್ನು ತಿರಸ್ಕರಿಸಿ ನವೋದಯ ಚಳವಳಿ ಕಟ್ಟಿದರು. ಕುವೆಂಪು ಅವರು ನಾಡಿನ, ಮೈಸೂರಿನ ದೊಡ್ಡ ಪ್ರತೀಕ. ಅವರು ರಾಮಾಯಣವನ್ನು ರಾಮಾಯಣ ದರ್ಶನವಾಗಿ ಮಾಡಿದರು. ನವೋದಯ ತಂಡವು ಅದೇ ಆಶಯದಲ್ಲಿ ಕೆಲಸ ಮಾಡಲಿದೆ’ ಎಂದು ಪ್ರಸನ್ನ ತಿಳಿಸಿದರು.

‘ಸಾಂಸ್ಕೃತಿಕ ಮೈಸೂರು ಯೋಗನಗರಿ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಕಂಪನಿ ನಾಟಕಗಳಿಗೆ ಪ್ರೋತ್ಸಾಹ ಸಿಕ್ಕಿದ್ದು ಇಲ್ಲಿಯೇ, ಮತ್ತೆ ರಂಗಭೂಮಿ ಗಟ್ಟಿಗೊಳಿಸಬೇಕು. ರಂಗ ಚಳವಳಿ ರೂಪುಗೊಳ್ಳಬೇಕು. ಹೀಗಾಗಿಯೇ ರಾಮಾಯಣ ಆಧರಿಸಿ ಸಂಗೀತ ನಾಟಕಗಳನ್ನು ಕಟ್ಟಲಾಗಿದೆ. ಪ್ರತಿಭಾನ್ವಿತ ತಂಡವು ರೂಪುಗೊಂಡಿದೆ’ ಎಂದು ಹೇಳಿದರು.

‘ಸದ್ಯ ಅಯೋಧ್ಯಾಕಾಂಡ ಸಂಗೀತ ನಾಟಕ ಪ್ರಸ್ತುತ ಪಡಿಸಲಿದ್ದು, ಅರಣ್ಯಕಾಂಡ, ಸುಂದರಕಾಂಡ ಇದೇ ವರ್ಷದಲ್ಲಿ ಪ್ರದರ್ಶನಗೊಳ್ಳಲಿವೆ. ನಗರದಲ್ಲಿ ರಂಗ ತರಬೇತಿಗೆ ಶಾಲೆಗಳು ಇವೆ. ಆದರೆ, ಪ್ರಾಥಮಿಕ ಹಂತದ ನಟನೆಯನ್ನು ಹೇಳಿಕೊಡುತ್ತಿವೆ. ಹೀಗಾಗಿ ‘ಆ್ಯಕ್ಟಿಂಗ್ ಶಾಸ್ತ್ರ’ ಹೆಸರಿನಲ್ಲಿ ಸಮಗ್ರ ರಂಗಭೂಮಿ ಅರಿಯುವ ಶಾಲೆ ಅಥವಾ ಶಿಬಿರ ರೂಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ರಂಗಭೂಮಿಯಲ್ಲಿ ಒಗ್ಗಟ್ಟು ಅನಿವಾರ್ಯ. ಜಗಳ, ಅಭಿಪ್ರಾಯ ಭೇದಗಳಿದ್ದರೂ ಪ್ರೇಕ್ಷಕರು, ಕಲಾವಿದರನ್ನು ಒಂದಾಗಿ ನೋಡುವುದು, ಗೌರವಿಸುವುದು ವೃತ್ತಿಧರ್ಮ. ಅದನ್ನು ಇಂದು ಕೆಲವರು ಮರೆತಿದ್ದಾರೆ. ವೃತ್ತಿ ಧರ್ಮವನ್ನು ಸಾಧಿಸುವುದಕ್ಕಾಗಿ ರಾಮಾಯಣ ಆರಿಸಿಕೊಂಡಿದ್ದೇವೆ’ ಎಂದರು.

ನಾಟಕದ ನಟರು ಹಾಗೂ ರಂಗ ತಂತ್ರಜ್ಞರಾದ ಪ್ರಶಾಂತ ಹಿರೇಮಠ, ರಾಜಲಕ್ಷ್ಮಿ, ಪದ್ಮಶ್ರೀ, ಅನುಷ್‌ ಎ.ಶೆಟ್ಟಿ, ಸುಂದರೇಶ ದೇವಪ್ರಿಯಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.