ಮೈಸೂರು: 'ಸಮಾನತೆ, ಸಾಮರಸ್ಯದ ಸ್ಥಾಪನೆಗೆ ದ್ರಾವಿಡ ಶಕ್ತಿ ಹಾಗೂ ಚಳವಳಿಯ ಪುನರುತ್ಥಾನವಾಗಬೇಕು' ಎಂದು ಲೇಖಕ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.
ಇಲ್ಲಿನ ಚಾಮುಂಡಿಬೆಟ್ಟದ ಪಾದದಲ್ಲಿರುವ ಸ್ಮಶಾನದಲ್ಲಿ ಬುಧವಾರ ದ್ರಾವಿಡ, ಮುಸ್ಲಿಮ್ ಹಾಗೂ ಕ್ರೈಸ್ತ ಸಮುದಾಯದ ಮುಖಂಡರ ಸೌಹಾರ್ದ ಕೂಟ ಹಾಗೂ ಸಹಪಂಕ್ತಿ ಭೋಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
'ಇತಿಹಾಸದುದ್ದಕ್ಕೂ ಆರ್ಯರಿಗೆ ಅಭದ್ರತೆಯೇ ಕಾಡಿದೆ. ಹೀಗಾಗಿಯೇ ಅಧಿಕಾರಕ್ಕಾಗಿ ತಂತ್ರಗಾರಿಕೆ ನಡೆಸಿ ನಾಗರಿಕತ ಕಟ್ಟಿದ ಮೂಲನಿವಾಸಿಗಳಾದ ದ್ರಾವಿಡರನ್ನು ಜಾತಿ, ಆಹಾರ, ವೃತ್ತಿಯ ಹೆಸರಿನಲ್ಲಿ ಒಡೆದಿದ್ದಾರೆ' ಎಂದು ಅಭಿಪ್ರಾಯಪಟ್ಟರು.
'85 ದ್ರಾವಿಡ ಭಾಷೆಗಳಿದ್ದು, 25 ಭಾಷೆಗಳು ಅಸ್ತಿತ್ವದಲ್ಲಿವೆ. ತಮಿಳುನಾಡಿನಲ್ಲಿ ಪೆರಿಯಾರ್ ಆರಂಭಿಸಿದ್ದ ದ್ರಾವಿಡ ಚಳವಳಿ ಇಲ್ಲಿಯೂ ಆಗಬೇಕು. ದ್ರಾವಿಡರು ಒಂದಾದರೇ ದೇಶದಲ್ಲಿನ ಕೋಮುವಾದ, ದ್ವೇಷ ತಣ್ಣಗಾಗುತ್ತದೆ' ಎಂದು ಅಭಿಪ್ರಾಯಪಟ್ಟರು.
'ಸತ್ತಾಗಿ ಸೇರುವುದು ಒಂದೇ ಜಾಗ. ಒಂದಾಗಿ ಸೇರೋಣ ಬದುಕಿರುವಾಗ' ಎಂದರು.
ಧಾರ್ಮಿಕ ಮುಖಂಡ ಹರ್ಷದ್ ಮೌಲಾನ ಮಾತನಾಡಿ, ' ಒಂದೇ ಹೂವುಗಳು ಇದ್ದರೆ ಉದ್ಯಾನ ಶೋಭಿಸದು. ದೇಶವೆಂಬ ಹೂಗಳ ತೋಟದಲ್ಲಿ ಎಲ್ಲ ಹೂ ಗಿಡಗಳು ಇರಬೇಕು. ಸುವಾಸನೆಯ ಘಮಲು, ಒಳ್ಳೆಯ ಮಾತುಗಳು ಭಾರತಾಂಬೆಯ ಮಕ್ಕಳನ್ನು ನಲಿಸಬೇಕು. ಧರ್ಮಗಳು, ಜಾತಿಗಳ ಬಣ್ಣಗಳ ವೈವಿಧ್ಯತೆ ನಮ್ಮನ್ನು ಕಾಪಾಡಬೇಕೆ ಹೊರತು ಒಡೆಯುವುದಕ್ಕಲ್ಲ' ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯು ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, 'ಸಮಾಜದಲ್ಲಿರುವ ಮೌಢ್ಯ, ವೈಷಮ್ಯ ತೊಡೆದು ಹಾಕಲು, ದ್ರಾವಿಡ ಚಳವಳಿ ಕಡೆ ನಮ್ಮ ನಡೆ ಚಳಚಳಿಯನ್ನು ಆರಂಭಿಸಲು ಭೋಜನ ಏರ್ಪಡಿಸಲಾಗಿದೆ' ಎಂದರು.
ಲೇಖಕರಾದ ಪ್ರೊ.ಸಿ.ಪಿ.ಕೃಷ್ಣಕುಮಾರ್, ಪ್ರೊ.ಕೆ.ಎಸ್.ಭಗವಾನ್, ಮಹೇಶ್ ಚಂದ್ರಗುರು, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಪುರುಷೋತ್ತಮ್, ಫಾದರ್ ಜೇಮ್ಸ್ ಡೋಮಿನಿಕ್, ದಲಿತ ಸಾಹಿತ್ಯ ಅಕಾಡೆಮಿ ಸಮೀರ್ ಮುಸ್ತಾಫ, ಎಂ.ಎಫ್.ಖಲೀಫ್, ಫ್ರಾನ್ಸಿಸ್, ಮರೀಗೌಡ, ಎಚ್.ಎಸ್.ಪ್ರಕಾಶ್, ಎನ್.ಆರ್.ನಾಗೇಶ್, ಯೋಗೇಶ್ ಉಪ್ಪಾರ್, ಹಿನಕಲ್ ಉದಯ್, ರಫೀಕ್, ನಜರ್ ಬಾದ್ ನಟರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.