ADVERTISEMENT

ನೀಟ್ ಪರೀಕ್ಷೆ: ತನಿಖೆಗೆ ಎಎಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:27 IST
Last Updated 13 ಜೂನ್ 2024, 14:27 IST

ಮೈಸೂರು: ‘ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಕೇಂದ್ರ ಸರ್ಕಾರ ಪಾರದರ್ಶಕ ತನಿಖೆಗೆ ಆದೇಶಿಸಬೇಕು’ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷೆ ಧರ್ಮಶ್ರೀ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ‌ ನೀಟ್ ಬರೆದ 67 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ ಬಂದಿದ್ದು, ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ 6 ವಿದ್ಯಾರ್ಥಿಗಳು ಟಾಪರ್ ಆಗಿದ್ದಾರೆ. ಇದು ಈಗಾಗಲೇ ವಿದ್ಯಾರ್ಥಿ ವಲಯದಲ್ಲಿ ಹರಡಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ, ಪರೀಕ್ಷಾ ಅಕ್ರಮ ನಡೆದಿದೆ ಎಂಬ ಅನುಮಾನಗಳನ್ನು ಸಾಬೀತು ಪಡಿಸುವಂತಿದೆ’ ಎಂದು ಹೇಳಿದರು.

‘ಈ ರೀತಿ ಅಕ್ರಮ ನಡೆದಿದ್ದರೆ ಹಲವು ವಿದ್ಯಾರ್ಥಿಗಳ ವೈದ್ಯಕೀಯ ವ್ಯಾಸಂಗದ ಕನಸು ಭಗ್ನವಾಗಲಿದೆ. ಆದ್ದರಿಂದ ಭವಿಷ್ಯದಲ್ಲಿ ಇಂಥ ಗೊಂದಲ ಉಂಟಾಗದಂತೆ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಬೇಕು. ನೀಟ್‌ ಪಾರದರ್ಶಕವಾಗಿ ನಡೆಯದಿದ್ದರೆ ರಾಜ್ಯದ ವಿದ್ಯಾರ್ಥಿಗಳು ಸಾಕಷ್ಟು ನಷ್ಟ ಅನುಭವಿಸಲಿದ್ದು, ನಮ್ಮಲ್ಲಿ ಇದರ ಬದಲು ಸಿಇಟಿ ಮುಖಾಂತರ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ ರಾಜ್ಯ ಸರ್ಕಾರ ಯೋಜನೆ ರೂಪಿಸುವುದು ಒಳಿತು’ ಎಂದು ಸಲಹೆ ನೀಡಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕಿರಣ್ ಕಲ್ಯಾಣಿ, ಕಾರ್ಯಾಧ್ಯಕ್ಷ ಜಯಶ್ರೀ, ಎನ್.ಆರ್.ವಿಭಾಗದ ಮುಖಂಡ ಶಹಬುರ್ ರೆಹಮಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.