ADVERTISEMENT

ಮೈಸೂರು: ನೇಹಾ ಹತ್ಯೆ ಖಂಡಿಸಿ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 6:39 IST
Last Updated 22 ಏಪ್ರಿಲ್ 2024, 6:39 IST
<div class="paragraphs"><p>ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.</p></div>

ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

   

ಮೈಸೂರು: ಮಹಿಳೆಯರ ಮೇಲಿನ ದೌರ್ಜನ್ಯ, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿಚೌಕದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಕಾರರು, 'ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿದೆ, ಲವ್ ಜಿಹಾದ್ ಗೆ‌ ಕಡಿವಾಣ ಹಾಕದ ಸರ್ಕಾರ' ಎಂದು ಆಕ್ರೋಶ ವ್ಯಕ್ತಪಡಿಸಿದರು.‌ ಭಿತ್ತಿ ಫಲಕ ಹಿಡಿದು ಧಿಕ್ಕಾರ ಕೂಗಿದರು.

ADVERTISEMENT

ವಿಜಯೇಂದ್ರ ಮಾತನಾಡಿ, 'ಕಳೆದ ಮೂರು ದಿನದಿಂದ ರಾಜ್ಯದಲ್ಲಿ 8 ಹತ್ಯೆಗಳು ನಡೆದಿದ್ದರೂ ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಬಂದಾಗಿನಿಂದಲೂ ರಾಜ್ಯಕ್ಕೆ ದರಿದ್ರ ಅಂಟಿಕೊಂಡಿದೆ. ಹೀಗಾಗಿಯೇ ಬರ ಬಂದಿದೆ, ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸಿದೆ. ಹೆಣ್ಣು ಮಕ್ಕಳಿಗೆ ಅಭದ್ರತೆ ಕಾಡುತ್ತಿದೆ' ಎಂದು ದೂರಿದರು.

'ತುಷ್ಟೀಕರಣ ರಾಜಕಾರಣವು ಮೊದಲಿಂದಲೂ‌ ಕಾಂಗ್ರೆಸ್ ಅನುಸರಿಸಿದೆ. ಕೆ.ಜಿ.ಹಳ್ಳಿ-ಡಿಜಿಹಳ್ಳಿಯಲ್ಲಿ ತನ್ನದೇ ಶಾಸಕರ ಮೇಲೆ ದಾಳಿ ನಡೆದರೂ ಸರ್ಕಾರ ಕ್ರಮವಹಿಸಲಿಲ್ಲ.‌ ಮತ ಪಡೆಯುವುದಕ್ಕಾಗಿ ಅಲ್ಪಸಂಖ್ಯಾತರ ಓಲೈಸಿ, ದಲಿತರು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದೆ' ಎಂದರು‌.

'ನೇಹಾ ಪೋಷಕರಿಗೆ ಮುಖ್ಯಮಂತ್ರಿ ಸಾಂತ್ವನ ಹೇಳಲಿಲ್ಲ. ವೈಯಕ್ತಿಕ ಕಾರಣಕ್ಕೆ ಪ್ರಕರಣ ನಡೆದಿದೆಯೆಂದು ಹಗುರವಾಗಿ ಮಾತನಾಡಿದರು. ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆಗ, ರಾಜ್ಯದಲ್ಲಿ ಇಂಥ ಹತ್ಯೆಗಳು ಮರುಕಳಿಸದಂತೆ ಕ್ರಮವಹಿಸಲು ಸಾಧ್ಯವಾಗುತ್ತದೆ. ಕಾನೂನು ಸುವ್ಯವಸ್ಥೆ ಹದಗೆಡಿಸಿರುವ ಮುಖ್ಯಮಂತ್ರಿ ಅವರೇ ಹೊಣೆ ಹೊರಬೇಕು. ನಾಡಿನ ತಾಯಂದಿರ ಮೇಲೆ ಗೌರವ ಇದ್ದರೆ, ರಾಜೀನಾಮೆ ನೀಡಬೇಕು' ಎಂದು ಆಗ್ರಹಿಸಿದರು.

'ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದವರಿಗೆ ರಾಜ್ಯ ಸರ್ಕಾರ ಬೆಂಬಲವಾಗಿದೆ. ಕೊಡಗಿನಲ್ಲಿಯೂ ಪಕ್ಷದ ಕಾರ್ಯಕರ್ತನ ಹತ್ಯೆಯಾಗಿದೆ. ಕಾಂಗ್ರೆಸ್ ಸರ್ಕಾರ ಬಂದೊಡನೆಯೇ ರಾಜ್ಯಕ್ಕೆ ಶನಿಕಾಟ ಶುರುವಾಗಿದೆ' ಎಂದರು.

'ಪ್ರಧಾನಿ ನಾಲಾಯಕ್ ಅನ್ನುವ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ 28 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಜನರುಬಪಾಠ ಕಲಿಸಲಿದ್ದಾರೆ. ಕೊಲೆಗಡುಕರಿಗೆ ರಕ್ಷಣೆ ನೀಡುತ್ತಿರುವ ಹೊಣೆಗೇಡಿ, ನಾಲಾಯಕ್ ಮುಖ್ಯಮಂತ್ರಿ, ಗೃಹ ಸಚಿವರನ್ನು ಮನೆಗೆ ಕಳುಹಿಸಲಿದ್ದಾರೆ' ಎಂದು ಹೇಳಿದರು.

'ಚುನಾವಣೆಗಳು ಬರುತ್ತವೆ ಹೋಗುತ್ತವೆ. ಹೆಣ್ಣು ಮಕ್ಕಳ ಗೌರವ ಉಳಿಸಲು ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಿದ್ದಾನೆ. ನಾವು ರಾಜಕೀಯ ಮಾಡುತ್ತಿಲ್ಲ. ಮಹಿಳೆಯರ ಗೌರವಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ' ಎಂದು ತಿಳಿಸಿದರು.‌

ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ರಘು ಆರ್.ಕೌಟಿಲ್ಯ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅನಿಲ್ ಥಾಮಸ್, ನಗರ ಘಟಕ ಅಧ್ಯಕ್ಷ ಎಲ್.ನಾಗೇಂದ್ರ , ಮಾಜಿ ಮೇಯರ್ ಶಿವಕುನಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್. ಆರ್.ಮಹಾದೇವಸ್ವಾಮಿ, ಮುಖಂಡರಾದ ಎಸ್.ಎ. ರಾಮದಾಸ್, ಮೈ.ವಿ.ರವಿಶಂಕರ, ಎಂ.ಜಿ.ರೂಪಾ, ಎಂ.ಸತೀಶ್, ಬಿ.ವಿ.ಮಂಜುನಾಥ್, ಎಸ್.ಸಂದೇಶ್ ಸ್ವಾಮಿ, ಕೌಲನಹಳ್ಳಿ ಸೋಮಶೇಖರ್, ಅಶ್ವಿನಿ ಶರತ್, ಪ್ರಮೀಳಾ ಭರತ್, ಮಿರ್ಲೆ ಶ್ರೀನಿವಾಸಗೌಡ, ನಾಗರಾಜ ಮಲ್ಲಾಡಿ, ವಾಣೀಶ್ ಕುಮಾರ್, ಮಂಗಳಾ ಸೋಮಶೇಖರ್, ಎಸ್.ಲಕ್ಷ್ಮಿದೇವಿ, ರೇಣುಕಾ ರಾಜ್, ಜ್ಯೋತಿ ರೇಚಣ್ಣ, ಪ್ರಫುಲ್ಲಾ ಮಲ್ಲಾಡಿ, ಕೆ.ಟಿ.ಚಲವೇಗೌಡ, ಬ್ರಹ್ಮಾಚಾರ್, ಸಾತ್ವಿಕ್, ಕೆ.ಸಿ.ಲೋಕೇಶ್ ನಾಯಕ, ಚಿಕ್ಕ ವೆಂಕಟ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.