ಮೈಸೂರು: ಓದುಗರು– ಸುದ್ದಿಮನೆಯ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುವ ಪತ್ರಿಕಾ ವಿತರಕರು, ತಾಯಿಯಂತೆ ಪತ್ರಿಕೆಗಳನ್ನು ಸಲಹಿದ್ದಾರೆ. ಕೊರೆಯುವ ಚಳಿಯಿರಲಿ, ಬಿರು ಮಳೆ ಸುರಿಯುತ್ತಿರಲಿ, ಮನೆಗಳಿಗೆ ಪತ್ರಿಕೆ ತಲುಪಿಸಿಯೇ ಕಾಯಕ ಮೆರೆಯುತ್ತಾರೆ.
ಸೈಕಲ್ ಪೆಡಲ್ ತುಳಿಯುತ್ತಾ, ಮುಂಜಾನೆಯ ಚಳಿಯಲ್ಲೂ ಬೆವರು ಹರಿಸುವ ಅವರು, ಓದುಗರಿಗೆ ಜಗದ ವಿಷಯಗಳನ್ನು ಮುಟ್ಟಿಸುತ್ತಾರೆ. ಅವರ ಜವಾಬ್ದಾರಿ, ಸಮಯ ಪ್ರಜ್ಞೆ ಹಾಗೂ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿ.
ಸೂರ್ಯ ಉದಯಿಸುವ ಮುನ್ನವೇ ಮನೆಯಿಂದ ಹೊರಟು ಪತ್ರಿಕಾ ವ್ಯಾನ್ ಬರುವ ಕಾರ್ಯಸ್ಥಾನಕ್ಕೆ ಹಾಜರಿದ್ದು, ಅಲ್ಲಿಂದ ಪತ್ರಿಕೆಗಳನ್ನು ತೆಗೆದುಕೊಂಡು, ಬ್ಯಾಗಿಗೆ ಸರಿಯಾಗಿ ಜೋಡಿಸಿ ಸೈಕಲ್, ಬೈಕ್‌ಗಳಲ್ಲಿ ಓದುಗರ ಮನೆಗೆ ಧಾವಿಸುತ್ತಾರೆ.
ಆರೋಗ್ಯ ಸರಿಯಿಲ್ಲದೇ ಜ್ವರವೇರಿದ್ದರೂ, ಬಿಸಿಸುದ್ದಿಗಳ ಪತ್ರಿಕೆಗಳನ್ನು ಬಿಸಿಲೇರುವ ಮುನ್ನವೇ ತಲುಪಿಸಿ ಜವಾಬ್ದಾರಿ ಮೆರೆಯುತ್ತಾರೆ. ಅವರು ಬಂದ್– ಕರ್ಫ್ಯೂ ಏನೇ ಇದ್ದರೂ ಕಾಯಕ ಮರೆಯದವರು. ಓದುಗರ ಕಷ್ಟವನ್ನು ಕೇಳುತ್ತಲೇ ಅವರೊಂದಿಗೆ ಒಡನಾಟ ಇಟ್ಟುಕೊಂಡವರು. ಅವರ ಅಭಿಪ್ರಾಯಗಳನ್ನು ಸುದ್ದಿಮನೆಗೆ ತಲುಪಿಸುವ ಸೇತುವೆಯಾಗಿ ಕೆಲಸ ಮಾಡುವವರಾಗಿದ್ದಾರೆ.
ಊರಿನಲ್ಲೇನಾದರೂ ಘಟನೆ ನಡೆದರೆ, ಅವನ್ನು ಪತ್ರಕರ್ತರಿಗೆ ತಲುಪಿಸುವ ಸುದ್ದಿದಾತರಾಗಿರುವ ಅವರು, ಪತ್ರಿಕೆ ಹಂಚುತ್ತಲೇ ಬದುಕು ಕಟ್ಟಿಕೊಂಡಿದ್ದಾರೆ. ಜೊತೆಯಲ್ಲಿಯೇ ಸ್ವಾವಲಂಬಿಯಾಗಿ ಕುಟುಂಬಕ್ಕೆ ನೆರವಾಗಲು, ಓದಿಗೆ ನಾಲ್ಕಾಸು ಸಂಪಾದಿಸಲು ಬಯಸಿದ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪತ್ರಿಕೆ ವಿತರಿಸುವ ಕೆಲಸ ನೀಡಿ ಅವರ ಭವಿಷ್ಯ ಕಟ್ಟಿಕೊಡುತ್ತಾರೆ.
ಸೆ.4 ಪತ್ರಿಕಾ ವಿತರಕರ ದಿನ. ಈ ಪ್ರಯುಕ್ತ ಜಿಲ್ಲೆಯ ಹಿರಿಯ ಪತ್ರಿಕಾ ವಿತರಕರು ಜೀವನಾನುಭವಗಳನ್ನು ‘ಪ್ರಜಾವಾಣಿ’ ಮುಂದೆ ಇಟ್ಟಿದ್ದಾರೆ.
ಪತ್ರಿಕಾ ವಿತರಕರ ದಿನ ಬಂದ ಬಗೆ..
ಪತ್ರಿಕಾ ವಿತರಕರ ದಿನಕ್ಕೆ 191 ವರ್ಷದ ಇತಿಹಾಸವಿದೆ. ‘ದ ಸನ್ ನ್ಯೂಯಾರ್ಕ್’ ಪತ್ರಿಕೆಯ ಬೆಂಜಮಿನ್ ಡೇ ಪತ್ರಿಕಾ ವಿತರಕರನ್ನು ನೇಮಿಸಿಕೊಳ್ಳುವ ಉದ್ಯೋಗದ ಜಾಹೀರಾತನ್ನು ತಮ್ಮ ಪತ್ರಿಕೆಯಲ್ಲಿ ನೀಡಿದ್ದರು. ವಯಸ್ಕರಿಗೆ ಕೆಲಸ ನಿಗದಿಯಾಗಿತ್ತು. ಆದರೆ 10 ವರ್ಷದ ಬಾರ್ನೆ ಫ್ಲಹೆರ್ಟಿ ಪ್ರಾಮಾಣಿಕತೆಗೆ ಮಾರುಹೋದ ಬೆಂಜಮಿನ್ 1833ರ ಸೆಪ್ಟೆಂಬರ್ 4ರಂದು ವಿತರಕ ಕೆಲಸವನ್ನು ನೀಡಿದರು. ಅಂದಿನಿಂದಲೂ ಪತ್ರಿಕಾ ವಿತರಕರ ದಿನ ಆಚರಿಸಲಾಗುತ್ತಿದೆ.
‘16 ವರ್ಷದಿಂದಲೂ ದುಡಿಮೆ’
‘2009ರಲ್ಲಿ ಪತ್ರಿಕೆ ವಿತರಣೆ ಕೆಲಸ ಆರಂಭಿಸಿದೆ. ಅಲ್ಲಿಂದಲೂ ಕಾಯಕವನ್ನು ಬಿಟ್ಟಿಲ್ಲ’ ಎಂದು ಹುಣಸೂರಿನ ವಾಸು ಹೇಳಿದರು. ‘ಪತ್ರಿಕೆಗಳಿಗೆ ರಜೆಯಿದ್ದಾಗಷ್ಟೇ ನನಗೂ ರಜೆ. ಬಿಕಾಂ ಪದವಿ ನಂತರ ಕೆಲಸವಿಲ್ಲದಿದ್ದಾಗ ಪತ್ರಿಕೆ ವಿತರಣೆಯನ್ನು ಆರಂಭಿಸಿದೆ. ಅದರ ಜೊತೆಯಲ್ಲಿಯೇ ಟಾಟಾ ಕಂಪನಿಯಲ್ಲಿ ಹುಣಸೂರು ವಿಭಾಗದ ಮಾರುಕಟ್ಟೆ ವ್ಯವಸ್ಥಾಪಕನಾಗಿ ದುಡಿಯುತ್ತಿರುವೆ’ ಎಂದರು. ‘ತಾಯಿ ಪತ್ನಿ ಇಬ್ಬರು ಮಕ್ಕಳಿರುವ ಪುಟ್ಟ ಕುಟುಂಬವನ್ನು ನೋಡಿಕೊಳ್ಳುತ್ತಿರುವೆ. ಪತ್ನಿ ಬಿ.ಎ– ಬಿಇಡಿ ಮಾಡಿದ್ದು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ಪತ್ರಿಕಾ ವಿತರಣೆಯು ಕುಟುಂಬಕ್ಕೆ ನೆರವಾಗಿದೆ’ ಎಂದರು. ‘ಬೈಕಿನಲ್ಲಿಯೇ ನಿತ್ಯ ಪತ್ರಿಕಾ ವಿತರಣೆ ಕೆಲಸ ಮಾಡುತ್ತಿರುವೆ. ಜೊತೆಗೆ 6 ಜನ ಹುಡುಗರು ಕೆಲಸ ಮಾಡುತ್ತಿದ್ದಾರೆ. ಇಡೀ ಹುಣಸೂರು ನಗರಕ್ಕೆ ಪತ್ರಿಕೆ ಹಂಚಲು ಅಷ್ಟು ಮಂದಿ ಬೇಕೆ ಬೇಕು. ಅವರ ಓದಿಗೂ ಈ ಕೆಲಸ ನೆರವಾಗಿದೆ’ ಎಂದು ಹೇಳಿದರು.
‘ಉದ್ಯೋಗವಿಲ್ಲದಾಗ ಆಸರೆ’
‘ಪತ್ರಿಕೆ ವಿತರಿಸುವ ಕೆಲಸ ಆರಂಭಿಸಿ 25 ವರ್ಷವಾಗಿದೆ. 1995ರಲ್ಲಿ ಕೆ.ಆರ್.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದು ಕೆಲಸ ಸಿಗದೇ ನಿರುದ್ಯೋಗಿಯಾಗಿದ್ದಾಗ ಈ ವೃತ್ತಿ ಕೈ ಹಿಡಿಯಿತು. ನನ್ನ ಕುಟುಂಬವನ್ನು ಸಲಹಿದೆ’ ಎಂದು ಕೆ.ಆರ್.ನಗರದ ಪತ್ರಿಕಾ ವಿತರಕ ವೀರರಾಜು ಹೇಳಿದರು.
‘ನನಗೀಗ 50 ವರ್ಷ. ಮೊದಲೆಲ್ಲ ಹಳ್ಳಿ ಹಳ್ಳಿಗಳಿಗೆ ಸೈಕಲ್‌ನಲ್ಲಿಯೇ ಹೋಗಿ ಪತ್ರಿಕೆ ವಿತರಿಸುತ್ತಿದ್ದೆ. ಹೊಸೂರು ಕಲ್ಲಹಳ್ಳಿ ಕಾಮೇನಹಳ್ಳಿ ಕಗ್ಗೆರೆಗೆ ಬಸ್‌ನಲ್ಲಿ ಪತ್ರಿಕೆ ಕಳುಹಿಸುತ್ತಿದ್ದೆ. ಸೈಕಲ್‌ನಲ್ಲಿಯೂ ಹೋಗುತ್ತಿದ್ದೆ’ ಎಂದು ಹೇಳಿದರು.
‘ಸೈಕಲ್‌ನಲ್ಲಿ ಪತ್ರಿಕೆ ಹಂಚುತ್ತಿದ್ದಾಗ ಒಮ್ಮೆ ಪ್ರಸರಣ ವಿಭಾಗದ ಮ್ಯಾನೇಜರ್ ಯತೀಶ್ ಅವರು ಬಂದಿದ್ದರು. ನನ್ನನ್ನು ನೋಡಿದವರೆ ಅವರ ಬೈಕ್ ಅನ್ನು ನನಗೆ ಕೊಟ್ಟು ಹೋದರು. ಅಂದಿನಿಂದಲೂ ಅದೇ ಬೈಕ್‌ನಲ್ಲಿ ಹಂಚುತ್ತಿರುವೆ’ ಎಂದು ಸ್ಮರಿಸಿದರು.
‘2009ರಲ್ಲಿ ಸರ್ಕಾರದಿಂದ ಪರವಾನಗಿ ಪಡೆದು ಸರ್ವೆಯರ್ ಕೆಲಸ ಮಾಡುತ್ತಿರುವೆ. ಪತ್ರಿಕೆಯು ಜನರೊಂದಿಗಿನ ಒಡನಾಟವನ್ನು ನೀಡಿದೆ. ಕೆ.ಆರ್.ನಗರದಲ್ಲಿ ನನಗೆ ಹೆಸರಿದೆ. ಪ್ರಜಾವಾಣಿ ನನಗೆ ಜೀವನ ನೀಡಿದೆ. ಮಂಚನಹಳ್ಳಿಯಲ್ಲಿ ಪತ್ರಿಕೆ ವಿತರಿಸುತ್ತಿದ್ದೆ. ಆಗಿನ ಮ್ಯಾನೇಜರ್ ರವಿ ನನಗೆ ಏಜೆನ್ಸಿ ಕೊಟ್ಟರು’ ಎಂದು ನೆನೆದರು.
‘550 ಪತ್ರಿಕೆಗಳನ್ನು ಹಂಚಲು 8 ಹುಡುಗರಿದ್ದಾರೆ. ಅವರ ಶಿಕ್ಷಣಕ್ಕೂ ಒಂದಷ್ಟು ಹಣ ಸಿಗುತ್ತದೆ. ಉಚಿತವಾಗಿ ಓದಲು ಅನುಕೂಲವಾಗಿದೆ. ನನ್ನ ಮಗ ಪ್ರಜ್ವಲ್ ರಾಜ್ ಓದಿಗೂ ಈ ಕೆಲಸ ಸಹಾಯ ಮಾಡಿದೆ. ಅವನೀಯ ಎಂಸಿಎ ಮಾಡುತ್ತಿದ್ದಾನೆ’ ಎಂದು ಸಂತಸ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.