ಮೈಸೂರು: ಓದುಗರು– ಸುದ್ದಿಮನೆಯ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುವ ಪತ್ರಿಕಾ ವಿತರಕರು ಪತ್ರಿಕೆಗಳನ್ನು ಸಲಹುವ ತಾಯಿಯಂತೆ. ಕೊರೆಯುವ ಚಳಿಯಿರಲಿ, ಬಿರು ಮಳೆ ಸುರಿಯುತ್ತಿರಲಿ, ಮನೆಗಳಿಗೆ ಪತ್ರಿಕೆ ತಲುಪಿಸಿಯೇ ಕಾಯಕ ಮೆರೆಯುತ್ತಾರೆ.
ಸೈಕಲ್ ಪೆಡಲ್ ತುಳಿಯುತ್ತಾ, ಮುಂಜಾನೆಯ ಚಳಿಯಲ್ಲೂ ಬೆವರು ಹರಿಸುವ ಅವರು, ಓದುಗರಿಗೆ ಜಗದ ವಿಷಯಗಳನ್ನು ಮುಟ್ಟಿಸುತ್ತಾರೆ. ಅವರ ಜವಾಬ್ದಾರಿ, ಸಮಯ ಪ್ರಜ್ಞೆ ಹಾಗೂ ಕಾಯಕ ನಿಷ್ಠೆ ಎಲ್ಲರಿಗೂ ಮಾದರಿಯಾಗಿದೆ.
ಸೂರ್ಯ ಉದಯಿಸುವ ಮುನ್ನವೇ ಮನೆಯಿಂದ ಹೊರಟು ಪತ್ರಿಕಾ ವ್ಯಾನ್ ಬರುವ ಕಾರ್ಯಸ್ಥಾನಕ್ಕೆ ಹಾಜರಿದ್ದು, ಅಲ್ಲಿಂದ ಪತ್ರಿಕೆಗಳನ್ನು ತೆಗೆದುಕೊಂಡು, ಬ್ಯಾಗಿಗೆ ಸರಿಯಾಗಿ ಜೋಡಿಸಿಕೊಂಡು ಸೈಕಲ್, ಬೈಕ್‌ಗಳಲ್ಲಿ ಓದುಗರ ಮನೆಗೆ ಧಾವಿಸುತ್ತಾರೆ.
ಆರೋಗ್ಯ ಸರಿಯಿಲ್ಲದಿದ್ದರೂ ಜ್ವರವೇರಿದ್ದರೂ, ‘ಬಿಸಿ ಸುದ್ದಿ’ಗಳ ಪತ್ರಿಕೆಗಳನ್ನು ಬಿಸಿಲೇರುವ ಮುನ್ನವೇ ತಲುಪಿಸಿ ಜವಾಬ್ದಾರಿ ಮೆರೆಯುತ್ತಾರೆ. ಬಂದ್– ಕರ್ಫ್ಯೂ ಏನೇ ಇದ್ದರೂ ಕಾಯಕ ಮರೆಯದವರು. ಓದುಗರ ಕಷ್ಟವನ್ನು ಕೇಳುತ್ತಲೇ ಅವರೊಂದಿಗೆ ಒಡನಾಟವನ್ನು ಹಲವರು ಇಟ್ಟುಕೊಂಡಿದ್ದಾರೆ. ಓದುಗರ ಅಭಿಪ್ರಾಯಗಳನ್ನು ಸುದ್ದಿಮನೆಗೆ ತಲುಪಿಸುವ ಸೇತುವೆಯಾಗಿ ಕೆಲಸ ಮಾಡುತ್ತಾರೆ.
ಪತ್ರಿಕೆಗಳಿಗೆ ಊರಿನಲ್ಲೇನಾದರೂ ಘಟನೆ ನಡೆದರೆ, ಅವನ್ನು ಪತ್ರಕರ್ತರಿಗೆ ತಲುಪಿಸುವ ಸುದ್ದಿದಾತರಾಗಿರುವ ಅವರು, ಪತ್ರಿಕೆ ಹಂಚುತ್ತಲೇ ಬದುಕು ಕಟ್ಟಿಕೊಂಡಿದ್ದಾರೆ. ಸ್ವಾವಲಂಬಿಯಾಗಿ ಕುಟುಂಬಕ್ಕೆ ನೆರವಾಗಲು, ಓದಿಗೆ ನಾಲ್ಕಾಸು ಸಂಪಾದಿಸಲು ಬಯಸಿದ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಪತ್ರಿಕೆ ವಿತರಿಸುವ ಕೆಲಸ ನೀಡಿ ಅವರ ಭವಿಷ್ಯ ಕಟ್ಟಿಕೊಡುತ್ತಾರೆ.
ಸೆ.4 ಪತ್ರಿಕಾ ವಿತರಕರ ದಿನ. ಈ ಪ್ರಯುಕ್ತ ನಗರದ ಹಿರಿಯ ಪತ್ರಿಕಾ ವಿತರಕರು ಜೀವನಾನುಭವಗಳನ್ನು ‘ಪ್ರಜಾವಾಣಿ’ ಮುಂದೆ ಇಟ್ಟಿದ್ದಾರೆ.
‘45 ವರ್ಷದಿಂದಲೂ ಪತ್ರಿಕೆ ಹಂಚುತ್ತಿರುವೆ. ಆಗ ನಾನು ಶಾಲೆ ಓದುತ್ತಿದ್ದೆ. ಅಣ್ಣ ಪರಶುರಾಮ್ ಕೂಡ ಪತ್ರಿಕೆ ಹಂಚುತ್ತಿದ್ದರು. ಇಂದು ಅದೇ ವೃತ್ತಿಯಾಗಿದೆ’ ಎಂದು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಶೋಕಪುರಂನ ಹೋಮದೇವ ಹೇಳಿದರು.
‘ನನಗೀಗ 59 ವರ್ಷ. ಸೈಕಲ್‌ನಲ್ಲೇ ಕೃಷ್ಣಮೂರ್ತಿಪುರಂ ಅಶೋಕಪುರಂ ಜಯನಗರದಲ್ಲಿ ಪತ್ರಿಕೆ ಹಂಚುತ್ತಿದ್ದೆ. ಪತ್ರಿಕೆಗಳ ಬಂಡಲ್ ತರಲು ಕೆ.ಆರ್.ಸರ್ಕಲ್‌ಗೆ ಹೋಗಬೇಕಿತ್ತು. ಮೊದಲು ಹುಡುಗರಿದ್ದರು. ಈಗ ವಯಸ್ಸಾಗಿದೆ. ನನಗೆ 45 ವರ್ಷದವಿದ್ದಾಗ ₹ 10 ಸಾವಿರ ಸಾಲದಲ್ಲಿ ಟಿವಿಎಸ್ ಸ್ಕೂಟರ್ ಕೊಂಡೆ ಅದರೊಂದಿಗೇ ನನ್ನ ಬದುಕು ನಡೆದಿದೆ’ ಎಂದರು.
‘ಇಬ್ಬರು ಮಕ್ಕಳಿಗೂ ಡಿಗ್ರಿ ಮಾಡಿಸಿದ್ದೇನೆ. ಮಗಳು ಎಂಕಾಂ ಓದಿಸಿ ಮದುವೆ ಮಾಡಿದ್ದೇನೆ. ಮಗ ಬಿಬಿಎ ಮಾಡಿದ್ದಾನೆ. ಕೆಲಸಕ್ಕೆ ಹೋಗುತ್ತಿದ್ದಾರೆ. ಬದುಕು ಕಟ್ಟಿಕೊಡಲು ಪತ್ರಿಕಾ ವಿತರಣೆಯೇ ನೆರವಾಗಿದೆ’ ಎಂದು ಹೇಳಿದರು.
‘ಲಕ್ಷ್ಮಿ ತಾಯಿ ದೇವಾಲಯದ ಕಾರ್ಯದರ್ಶಿಯಾಗಿದ್ದಾನೆ. ಅದು ಸೇವೆಗೆ. ಪತ್ರಿಕಾ ವಿತರಣೆಯೇ ನನ್ನನ್ನು ಕಾಪಾಡಿಕೊಂಡು ಬಂದಿದೆ. ಏನೇ ಕೆಲಸ ಬಿಟ್ಟರು ಪತ್ರಿಕೆ ವಿತರಿಸುವುದನ್ನು ನಿಲ್ಲಿಸುವುದನ್ನು ಬಿಡಬೇಡವೆಂದು ಪತ್ನಿ ಹೇಳುತ್ತಾರೆ’ ಎಂದು ತಿಳಿಸಿದರು.
‘1997ರಲ್ಲಿ ಪತ್ರಿಕೆ ಹಂಚಲು ಶುರು ಮಾಡಿದೆ. ಅದನ್ನೇ ಮುಂದುವರಿಸಿರುವೆ. 2000ರ ಸುಮಾರು ಪತ್ರಿಕಾ ವಿತರಣೆ ಏಜೆನ್ಸಿಯೂ ಸಿಕ್ಕಿತು. ಅದೇ ಬದುಕಿಗೆ ಆಧಾರವಾಯಿತು’ ಎಂದು ಒಂಟಿಕೊಪ್ಪಲಿನ ಮಂಜು ಹೇಳಿದರು. ‘ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣನಾದ ನಂತರ ಏನೂ ಮಾಡಲು ತೋಚದಾಗಿತ್ತು. ಆಗ ನೆರವಾಗಿದ್ದೇ ಈ ಕೆಲಸ. ಆಗೆಲ್ಲ 1500ಕ್ಕೂ ಹೆಚ್ಚು ಪತ್ರಿಕೆ ವಿತರಿಸುತ್ತಿದ್ದೆ ಕೋವಿಡ್ ಸಂದರ್ಭ ಅರ್ಧದಷ್ಟು ಜನರು ಪತ್ರಿಕೆ ನಿಲ್ಲಿಸಿದರು. ಮತ್ತೆ ಈಗ ಪತ್ರಿಕೆ ಕೊಳ್ಳುವವರು ಹೆಚ್ಚುತ್ತಿದ್ದಾರೆ. ಅದಕ್ಕೆ ಪತ್ರಿಕೆ ಮೇಲಿರುವ ವಿಶ್ವಾಸವೇ ಕಾರಣ’ ಎಂದರು. ‘ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ. ಡಿಎಂಎಸ್ ಶಾಲೆಯಲ್ಲಿ ಮಗ ಓದುತ್ತಿದ್ದಾನೆ. ಕುಟುಂಬವನ್ನು ಈ ವೃತ್ತಿಯು ಸಲಹುತ್ತಿದೆ’ ಎಂದು ಭಾವುಕರಾದರು.
‘35 ವರ್ಷದಿಂದ ಪತ್ರಿಕೆ ವಿತರಿಸುತ್ತಿರುವೆ. ಒಂದು ದಿನವೂ ಒಂದು ಮನೆಗೂ ಪತ್ರಿಕೆ ಹಾಕುವುದನ್ನು ತಪ್ಪಿಸದ ಹೆಮ್ಮೆಯಿದೆ. ಕೋವಿಡ್ ಸಂದರ್ಭದಲ್ಲಿ ಭಯದಲ್ಲೂ ಎಚ್ಚರಿಕೆಯಿಂದ ಕೆಲಸ ಮಾಡಿರುವೆ’ ಎಂದು ಸರಸ್ವತಿಪುರಂನ ಸಿದ್ದರಾಮು ಹೇಳಿದರು. ‘9ನೇ ತರಗತಿಗೇ ಶಾಲೆ ಬಿಟ್ಟೆ. 1990ರ ಸುಮಾರು ಪತ್ರಿಕೆ ಹಂಚಲು ಆರಂಭಿಸಿದೆ. ಜೊತೆಯಲ್ಲಿಯೇ ಶಾಲಾ ಮಕ್ಕಳ ವ್ಯಾನ್ ಓಡಿಸುತ್ತಿರುವೆ. ಬೆಳಿಗ್ಗೆ ಪತ್ರಿಕೆ ಹಾಕಿ ತಕ್ಷಣವೇ ಶಾಲಾ ಮಕ್ಕಳ ಮನೆಗಳಿಗೆ ತೆರಳಬೇಕು. ಸಂಜೆಯೂ ಅಷ್ಟೇ. ಕಷ್ಟ ಬಿದ್ದರೆ ಸುಖವಲ್ಲವೇ’ ಎಂದರು. ‘ಮಕ್ಕಳ ಶಿಕ್ಷಣಕ್ಕೂ ನೆರವಾಗಿದೆ. ಮಗಳಿಗೆ ಎಂಜಿನಿಯರಿಂಗ್ ಮಾಡಿಸಿದ್ದು ಅವಳೀಗ ಕೆಲಸಕ್ಕೆ ಹೋಗುತ್ತಿದ್ದಾಳೆ. ಮಗ ಪಿಯು ಓದುತ್ತಿದ್ದಾನೆ. ಮಕ್ಕಳು ನನ್ನ ನಿರೀಕ್ಷೆ ಸುಳ್ಳು ಮಾಡಲಿಲ್ಲ. ವಿದ್ಯೆ ಮುಂದೆ ಯಾವ ಆಸ್ತಿಯೂ ಇಲ್ಲ. ಈ ವೃತ್ತಿಯೇ ಕುಟುಂಬವನ್ನು ಸಾಕಿದೆ’ ಎಂದು ನೆನೆದರು.
ಪತ್ರಿಕಾ ವಿತರಕರ ದಿನಕ್ಕೆ 191 ವರ್ಷದ ಇತಿಹಾಸವಿದೆ. ‘ದ ಸನ್ ನ್ಯೂಯಾರ್ಕ್’ ಪತ್ರಿಕೆಯ ಬೆಂಜಮಿನ್ ಡೇ ಪತ್ರಿಕಾ ವಿತರಕರನ್ನು ನೇಮಿಸಿಕೊಳ್ಳುವ ಉದ್ಯೋಗದ ಜಾಹೀರಾತನ್ನು ತಮ್ಮ ಪತ್ರಿಕೆಯಲ್ಲಿ ನೀಡಿದ್ದರು. ವಯಸ್ಕರಿಗೆ ಕೆಲಸ ನಿಗದಿಯಾಗಿತ್ತು. ಆದರೆ 10 ವರ್ಷದ ಬಾರ್ನೆ ಫ್ಲಹೆರ್ಟಿ ಪ್ರಾಮಾಣಿಕತೆಗೆ ಮಾರುಹೋದ ಬೆಂಜಮಿನ್ 1833ರ ಸೆಪ್ಟೆಂಬರ್ 4ರಂದು ವಿತರಕ ಕೆಲಸವನ್ನು ನೀಡಿದರು. ಅಂದಿನಿಂದಲೂ ಪತ್ರಿಕಾ ವಿತರಕರ ದಿನ ಆಚರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.