ADVERTISEMENT

ಮಹಿಳಾ ಕ್ರಿಕೆಟ್‌: 'ನೈಸ್‌ ಬೆಂಗಳೂರು' ಚಾಂಪಿಯನ್

‘ಕೆಐಒಸಿ’ ರನ್ನರ್‌ಅಪ್‌; ‘ಬೌಲ್‌ಔಟ್‌’ಗೆ 3ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 4:17 IST
Last Updated 10 ಜೂನ್ 2024, 4:17 IST
<div class="paragraphs"><p>ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ ಮೈದಾನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಮಹಿಳಾ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಚಾಂಪಿಯನ್ ಆದ ‘ನೈಸ್‌ ಬೆಂಗಳೂರು’ ತಂಡದ ಆಟಗಾರರು ಟ್ರೋಫಿ ಜೊತೆಗೆ ಸಂಭ್ರಮಿಸಿದರು.</p></div>

ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ ಮೈದಾನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಮಹಿಳಾ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಚಾಂಪಿಯನ್ ಆದ ‘ನೈಸ್‌ ಬೆಂಗಳೂರು’ ತಂಡದ ಆಟಗಾರರು ಟ್ರೋಫಿ ಜೊತೆಗೆ ಸಂಭ್ರಮಿಸಿದರು.

   

– ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.

ಮೈಸೂರು: ಪ್ರಿಯಾ ಎಸ್‌.ಚವಾಣ್ (20ಕ್ಕೆ 2 ವಿಕೆಟ್‌) ಹಾಗೂ ವೈದೇಹಿ ಯಾದವ್ (34ಕ್ಕೆ 2) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ‘ನೈಸ್‌ ಬೆಂಗಳೂರು’ ತಂಡವು ರಾಜ್ಯಮಟ್ಟದ ಮಹಿಳಾ ಕ್ರಿಕೆಟ್‌ ಟೂರ್ನಿಯಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿತು.

ADVERTISEMENT

ಇಲ್ಲಿನ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ, ‘ನೈಸ್‌ ಬೆಂಗಳೂರು’ ತಂಡವು 5 ರನ್‌ಗಳಿಂದ ‘ಕೆಐಒಸಿ ಬೆಂಗಳೂರು’ ತಂಡವನ್ನು ಮಣಿಸಿತು. 

ಟಾಸ್‌ ಗೆದ್ದ ‘ಕೆಐಒಸಿ’ ತಂಡದವರು ಬೌಲಿಂಗ್ ಆಯ್ದುಕೊಂಡರು. ‘ನೈಸ್‌’ ತಂಡದವರು 25 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 149 ರನ್‌ಗಳ ಸವಾಲಿನ ಗುರಿ ನೀಡಿದರು. ಜಿ.ಆರ್.ಪ್ರೇರಣಾ 37 ರನ್‌ ಹಾಗೂ ಪ್ರತ್ಯುಷಾ 22 ರನ್‌ ಕಾಣಿಕೆ ನೀಡಿದರು.

ರೋಹಿತಾ ಚೌಧರಿ 21ಕ್ಕೆ 4 ವಿಕೆಟ್‌ ಉರುಳಿಸಿ ‘ನೈಸ್‌’ ತಂಡದವರನ್ನು ಕಾಡಿದರು. ಅನನ್ಯಾ ಹೆಗಡೆ 34ಕ್ಕೆ 2 ವಿಕೆಟ್‌ ಪಡೆದು ಅವರಿಗೆ ಸಾಥ್ ನೀಡಿದರು.

ಗುರಿ ಬೆನ್ನಟ್ಟಿದ ‘ಕೆಐಒಸಿ ಬೆಂಗಳೂರು’ ತಂಡವು ಉಮಾ ಕಾಶ್ವಿ ಅವರ ಸೊಗಸಾದ (76 ರನ್‌) ಅರ್ಧ ಶತಕದ ಬಲದಿಂದ ತಿರುಗೇಟು ನೀಡಿತು. ಕೆ.ಜೆ.ಸಾಕ್ಷಿ (26 ರನ್) ಹೊರತುಪಡಿಸಿ ಉಳಿದ ಆಟಗಾರ್ತಿಯರಿಂದ ಉತ್ತಮ ಜೊತೆಯಾಟ ಬರಲಿಲ್ಲ. ಪ್ರಿಯಾ ಹಾಗೂ ವೈದೇಹಿ ಅಂತಿಮ ಓವರ್‌ಗಳಲ್ಲಿ ಕಾಡಿದರು.

ಕೊನೆಯ ಓವರ್‌ನಲ್ಲಿ 8 ರನ್‌ ಬೇಕಿದ್ದಾಗ ಪ್ರಿಯಾ ಮೊನಚಿನ ಬೌಲಿಂಗ್ ದಾಳಿ ನಡೆಸಿದರು. ಯಾವೊಂದು ಎಸೆತವು ಬೌಂಡರಿ ಗೆರೆ ದಾಟಲಿಲ್ಲ. ಇಬ್ಬರು ಆಟಗಾರ್ತಿಯರು ರನೌಟ್‌ ಆದರು. ಅಂತಿಮವಾಗಿ ‘ನೈಸ್‌’ ತಂಡವು 5 ರನ್‌ಗಳ ರೋಚಕ ಜಯ ಸಾಧಿಸಿತು.

3ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಆತಿಥೇಯ ಬೌಲ್‌ಔಟ್‌ ಅಕಾಡೆಮಿ ತಂಡವು 8 ವಿಕೆಟ್‌ಗಳಿಂದ ಹೆರಾನ್ಸ್ ಬೆಂಗಳೂರು ತಂಡದ ವಿರುದ್ಧ ಗೆಲುವು ಸಾಧಿಸಿತು. ಹೆರಾನ್ಸ್‌ ತಂಡವು 25 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 76 ರನ್‌ ಗಳಿಸಿತು. ಮೈಸೂರು ತಂಡವು 15.4 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 77 ರನ್‌ ಹೊಡೆದು ಗೆಲುವಿನ ನಗೆಬೀರಿತು.

ಶ್ರೇಯಾಂಕಾ ಆಕರ್ಷಣೆ: ಫೈನಲ್‌ ಪಂದ್ಯದಲ್ಲಿ ರಾಷ್ಟ್ರೀಯ ಮಹಿಳಾ ತಂಡದ ಆಟಗಾರ್ತಿಯರಾದ ಶುಭಾ ಸತೀಶ್‌, ಶ್ರೇಯಾಂಕಾ ಪಾಟೀಲ್, ಶಿಶಿರಾ ಗೌಡ, ವೃಂದಾ ದಿನೇಶ್ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ‘ನೈಸ್‌ ಬೆಂಗಳೂರು’ ತಂಡಕ್ಕೆ ಪ್ರೋತ್ಸಾಹ ನೀಡಿದರು.

‘ನೈಸ್‌ ಬೆಂಗಳೂರು’ ತಂಡಕ್ಕೆ ಪ್ರೋತ್ಸಾಹ ನೀಡಿದ ರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರಾದ ಶುಭಾ ಸತೀಶ್‌, ಶಿಶಿರಾ ಗೌಡ, ಶ್ರೇಯಾಂಕಾ ಪಾಟೀಲ್, ವೃಂದಾ ದಿನೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.