ಮೈಸೂರು: ಅಡುಗೆ ಮನೆಯಲ್ಲಿ ದಿನವೊಂದಕ್ಕೆ ಸುಮಾರು ಒಂದು ಕಿಲೋಗ್ರಾಂನಷ್ಟು ತ್ಯಾಜ್ಯ ಉತ್ಪಾದನೆಯಾಗುವುದೇ? ಹಾಗಾದರೆ, ಅದನ್ನು ಸುಖಾ ಸುಮ್ಮನೇ ಬಿಸಾಡದೇ ಗೊಬ್ಬರವಾಗಿ ಪರಿವರ್ತಿಸುವ ಅವಕಾಶವಿದೆ. ಮೈಸೂರಿನ ರಾಷ್ಟ್ರೀಯ ಎಂಜಿನಿಯರುಗಳ ಸಂಸ್ಥೆ (ಎನ್‌ಐಇ) ಯ ನವೀಕರಿಸಬಲ್ಲ ಇಂಧನ ಮತ್ತು ಸುಸ್ಥಿರ ತಂತ್ರಜ್ಞಾನ ಕೇಂದ್ರ (ಕ್ರೆಸ್ಟ್) ವು ವಿನೂತನ ಸಂಶೋಧನೆಯನ್ನು ಮಾಡಿದೆ.
ಇದು ‘ಕಾಂಪೋಸ್ಟರ್’. ‘ಕಸದಿಂದ ರಸ’ ಎಂಬ ಮಂತ್ರ ಜಪಿಸಿರುವ ಈ ಕೇಂದ್ರವು ತ್ಯಾಜ್ಯವನ್ನು ಬಳಸಿಕೊಂಡು ಪರಿಸರವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಪ್ರಯತ್ನ ಮಾಡಿದೆ. ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ರಸಭರಿತ ಗೊಬ್ಬರವನ್ನಾಗಿ ಪರಿವರ್ತಿಸಿ, ಮನೆಯಲ್ಲಿನ ತೋಟವನ್ನು ಮತ್ತಷ್ಟು ಶ್ರೀಮಂತಗೊಳಿಸುವ ಪ್ರಯತ್ನ ಇದಾಗಿದೆ.
ಮನೆಯಲ್ಲಿ ಉತ್ಪಾದನೆಗೊಳ್ಳುವ ಕಸವನ್ನು ಸಾಮಾನ್ಯವಾಗಿ ಬಿಸಾಡುವುದುಂಟು. ನಗರಪಾಲಿಕೆಯು ಮನೆ ಮನೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿ ಕೊಂಡೊಯ್ಯುತ್ತಾರೆ. ಕಸವನ್ನು ವಿಂಗಡಿಸಿ ಕೊಡಿ ಎಂದು ನಾಗರಿಕರಿಂದ ಕೇಳುವುದುಂಟು. ಆದರೆ, ಪಾಲಿಕೆಯ ಸಿಬ್ಬಂದಿ ಅದನ್ನು ಮತ್ತೆ ಮಿಶ್ರ ಮಾಡುತ್ತಾರೆ ಎಂಬ ಆರೋಪವಿದೆ. ಹೀಗಿರುವಾಗ, ಕಸ ಸುಮ್ಮನೆ ದಂಡವಾಗುವುದೇಕೆ ಎನ್ನುವುದು ಈ ಕೇಂದ್ರದ ಅಧ್ಯಕ್ಷ ಪ್ರೊ.ಎಸ್.ಶ್ಯಾಮಸುಂದರ್ ಚಿಂತನೆ. ಹಾಗಾಗಿ, ಈ ಕಾಂಪೋಸ್ಟರ್ (ಗೊಬ್ಬರ ತಯಾರಿ ಸಾಧನ) ನಿರ್ಮಿಸಿದ್ದಾರೆ.
‘ಕಾಂಪೋಸ್ಟರ್’ ಒಂದು ವೃತ್ತಾಕಾರದ ಪ್ಲಾಸ್ಟಿಕ್ ತೊಟ್ಟಿ. ಅದರಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿರಲಾಗುತ್ತದೆ. ಈ ತೊಟ್ಟಿಗೆ ಹಸಿ ತ್ಯಾಜ್ಯ, ಮನೆಯ ತೋಟದಲ್ಲಿ ಗಿಡಗಳಿಂದ ಉದುರುವ ಎಲೆಯನ್ನು ಹಾಕಬೇಕು. ದಿನಕ್ಕೆ 1 ಕೆ.ಜಿ ಹಸಿ ತ್ಯಾಜ್ಯವನ್ನು ಇದರೊಳಗೆ ಹಾಕಿ, 60 ದಿನ ಬಿಟ್ಟರೆ ಫಲಭರಿತ ಗೊಬ್ಬರ ಸಿದ್ಧವಾಗಿರುತ್ತದೆ. 1 ಕೆ.ಜಿ ಕಸಕ್ಕೆ 800 ಗ್ರಾಂ ನಷ್ಟು ಗೊಬ್ಬರ ಸಿದ್ಧವಾಗುತ್ತದೆ.
ಮನೆಗಳಿಗೆ ಅನುಕೂಲ: ಈ ‘ಕಾಂಪೋಸ್ಟರ್’ ತಯಾರಿ ವಿಧಾನವನ್ನು ಕೇಂದ್ರದಲ್ಲಿ ಹೇಳಿಕೊಡಲಾಗುತ್ತದೆ. ವಿಧಾನಗಳನ್ನು ಕಲಿತುಕೊಂಡು ಸ್ವತಃ ನಿರ್ಮಿಸಿಕೊಳ್ಳಬಹುದು. ಇಲ್ಲವಾದಲ್ಲಿ, ಕೇಂದ್ರದಲ್ಲಿ ಇದನ್ನು ಖರೀದಿಸಬಹುದು. ಅಲ್ಲದೇ, ಗೊಬ್ಬರ ತಯಾರಿಗೆ ಜೈವಿಕ ಇಟ್ಟಿಗೆಯೊಂದು ಬೇಕಿರುತ್ತದೆ. ತೆಂಗಿನ ನಾರನ್ನು ಸಂಸ್ಕರಿಸಿ ಇಟ್ಟಿಗೆ ಆಕಾರಕ್ಕೆ ಒತ್ತಲಾಗಿರುತ್ತದೆ. ಇದನ್ನು ನೀರಿನಲ್ಲಿ ನೆನೆಸಿ, ಹಸಿ ತ್ಯಾಜ್ಯದೊಂದಿಗೆ ಕಲಸಿ, ‘ಕಾಂಪೋಸ್ಟರ್’ ತೊಟ್ಟಿಗೆ ಹಾಕಿದರೆ ಆಯಿತು.
‘ಈ ಪ್ರಕ್ರಿಯೆ ತ್ರಾಸಕಾರಿಯೇನಲ್ಲ. ಕೇವಲ 5 ನಿಮಿಷ ವ್ಯಯ ಮಾಡಿದರೆ ಸಾಕು. ತೊಟ್ಟಿಯ ಕೆಳಭಾಗದಲ್ಲಿ ಪುಟ್ಟ ಬಾಗಿಲನ್ನು ನಿರ್ಮಿಸಲಾಗಿರುತ್ತದೆ. ಅದನ್ನು ತೆರೆದು ದಿನವೊಂದಕ್ಕೆ 500 ಗ್ರಾಂ ಗೊಬ್ಬರ ಪಡೆಯಬಹುದು’ ಎಂದು ಪ್ರೊ.ಶ್ಯಾಮಸುಂದರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ತ್ಯಾಜ್ಯ ವಿಲೇವಾರಿ ಈಗಿನ ದಿನಗಳ ಅತಿ ದೊಡ್ಡ ಸವಾಲು. ಮನೆಯಿಂದಲೇ ತ್ಯಾಜ್ಯ ಸಂಸ್ಕರಣೆಯಾದರೆ, ಪರಿಸರ ಸ್ವಚ್ಛವಾಗಿರುತ್ತದೆ. ಅದಕ್ಕಾಗಿ ಈ ಪ್ರಯತ್ನ’ ಎಂದರು.
ಈಗಾಗಲೇ 26 ಕಡೆ ಪ್ರಯೋಗ
ಈಗಾಗಲೇ ನಗರದ 26 ಕಡೆಗಳಲ್ಲಿ ಈ ‘ಕಾಂಪೋಸ್ಟರ್’ ಅಳವಡಿಸಲಾಗಿದೆ.
200 ಲೀಟರಿನ ದೊಡ್ಡ ತೊಟ್ಟಿಗಳನ್ನು ನಗರದ ಮಾತಾ ಅಮೃತಾನಂದಮಯಿ ಸಂಸ್ಥೆಯ ನಾಲ್ಕು ಶಾಲೆಗಳು, ಸೈಲೆಂಟ್ ಶೋರ್ಸ್ ರೆಸಾರ್ಟ್, ಕಿಂಗ್ಸ್ ಸಂಸ್ಥೆಯಲ್ಲಿ ಅಳವಡಿಸಲಾಗಿದೆ. 50 ಲೀಟರಿನ ಸಣ್ಣ ತೊಟ್ಟಿಗಳನ್ನು ಒಟ್ಟು 20 ಮನೆಗಳಲ್ಲಿ ಅಳವಿಡಲಾಗಿದೆ.
ನಗರಪಾಲಿಕೆಗೆ ಕೇವಲ ಒಣ ತ್ಯಾಜ್ಯ ಕೊಟ್ಟರೆ ಸಾಕು. ಮನೆಯಲ್ಲೇ ಗೊಬ್ಬರ ತಯಾರಿಸಿಕೊಂಡು ತೋಟ ಮಾಡಿಕೊಳ್ಳಬಹುದು. ಮನೆಯಲ್ಲೇ ಟೊಮೆಟೊ, ಹಸಿಮೆಣಸಿನಕಾಯಿ, ಕ್ಯಾರೆಟ್, ಈರುಳ್ಳಿ ಇತ್ಯಾದಿಗಳನ್ನು ಬೆಳೆದುಕೊಳ್ಳಬಹುದು ಎನ್ನುತ್ತಾರೆ ಪ್ರೊ.ಶ್ಯಾಮಸುಂದರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.