ಮೈಸೂರು: ‘ನಿಗಮ–ಮಂಡಳಿಗಳಿಗೆ ಸದಸ್ಯರು ಹಾಗೂ ನಿರ್ದೇಶಕರ ನೇಮಕದ ಪಟ್ಟಿ ಎರಡು ತಿಂಗಳ ಹಿಂದೆಯೇ ಸಿದ್ಧವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು’ ಎಂದು ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಉಪ ಚುನಾವಣೆ ಬಳಿಕ ಪಟ್ಟಿ ಪ್ರಕಟಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಕಾರ್ಯಕರ್ತರಿಗೆ ವಿಸಿಟಿಂಗ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಹಾಗೂ ಇಂಥದೊಂದು ಸ್ಥಾನ ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಕೆಲವೇ ದಿನಗಳಲ್ಲಿ ಅವಕಾಶವಾಗಲಿದೆ’ ಎಂದರು.
‘ನಿಗಮ–ಮಂಡಳಿಗಳಿಗೆ ಈಗಾಗಲೇ ಅಧ್ಯಕ್ಷರನ್ನು ಮುಖ್ಯಮಂತ್ರಿ ನೇಮಿಸಿದ್ದಾರೆ. ಸದಸ್ಯರು, ನಿರ್ದೇಶಕರ ಸ್ಥಾನಕ್ಕೆ ಶಾಸಕರಿಂದ ಕಡ್ಡಾಯವಾಗಿ ಒಬ್ಬ ಮಹಿಳೆ ಸೇರಿದಂತೆ ಮೂರು ಹೆಸರನ್ನು ಪಡೆದಿದ್ದೇವೆ. ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರಿಂದ ಶಿಫಾರಸಾದ ಎರಡು ಹೆಸರು, ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಶಿಫಾರಸನ್ನೂ ಪರಿಗಣಿಸಲಾಗಿದೆ. ಮುಖ್ಯಮಂತ್ರಿಯಿಂದಲೂ ಒಂದಷ್ಟು ಹೆಸರುಗಳು ಶಿಫಾರಸಾಗಿವೆ. ಎರಡು ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಆದ್ಯತೆ ದೊರೆತಿದೆ’ ಎಂದು ಹೇಳಿದರು.
‘ಮೈಸೂರಿನಲ್ಲಿ ಪಕ್ಷಕ್ಕೆ ಸರಿಯಾದ ಕಟ್ಟಡವೇ ಇಲ್ಲ, ನೀವ್ಯಾವ ಸೀಮೆ ಮುಖ್ಯಮಂತ್ರಿ ರೀ?’ ಎಂದು ಸಿದ್ದರಾಮಯ್ಯ ಅವರಿಗೆ ಮೊದಲ ಅವಧಿಯಲ್ಲಿ ಕೋಪದಿಂದಲೇ ಕೇಳಿದ್ದೆ. ಅವರಿಗೆ ಅದು 2ನೇ ಅವಧಿಯಲ್ಲಿ ಮನಸ್ಸಿಗೆ ಬಂದಿದೆ. ₹ 15 ಕೋಟಿ ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ. ರಾಜಕೀಯದ ಪರಿಸ್ಥಿತಿ ಏನೇನಾಗುತ್ತದೆಯೋ ಏನೋ ಹೇಳಲಾಗದು. ತ್ವರಿತವಾಗಿ ಶಂಕುಸ್ಥಾಪನೆ ನೆರವೇರಿಸಿರಿ. ನಮ್ಮ ಸರ್ಕಾರ ಇರುವಾಗಲೇ ಕಾಮಗಾರಿಯನ್ನೂ ಮುಗಿಸಿಬಿಡಿ’ ಎಂದು ಪರಮೇಶ್ವರ ಪದಾಧಿಕಾರಿಗಳಿಗೆ ಸೂಚಿಸಿದರು.
‘ಬಿಜೆಪಿ- ಜೆಡಿಎಸ್‌ನವರು ಯಾವುದೇ ಕಾರಣಕ್ಕೂ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲಾಗದು. ಅವರು ಶಾಸಕರಿಗೆ ₹ 50 ಕೋಟಿಯೋ, ₹ 100 ಕೋಟಿಯೋ ಕೊಡಬಹುದು. ಆದರೆ, ನಮ್ಮವರಾರೂ ಹೋಗುವುದಿಲ್ಲ. ಎಷ್ಟೇ ಆಪಾದನೆ ಮಾಡಿದರೂ ಸಿದ್ದರಾಮಯ್ಯ ಗಟ್ಟಿಗೊಳ್ಳುತ್ತಾರೆಯೇ ಹೊರತು ಮೆತ್ತಗಾಗುವುದಿಲ್ಲ. ನಮ್ಮ ಸರ್ಕಾರವನ್ನು ಬೀಳಿಸುವುದು ವಿರೋಧ ಪಕ್ಷದವರ ಕನಸಷ್ಟೆ’ ಎಂದರು.
ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್. ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.