ADVERTISEMENT

ಹೊಸ ಆಸ್ಪತ್ರೆ ಉದ್ಘಾಟನೆ ಇಲ್ಲ, ಹಳೆ ಆಸ್ಪತ್ರೆಗೆ ವೈದ್ಯರಿಲ್ಲ

ಟಿ.ಎಂ.ವೆಂಕಟೇಶಮೂರ್ತಿ
Published 22 ಅಕ್ಟೋಬರ್ 2024, 6:41 IST
Last Updated 22 ಅಕ್ಟೋಬರ್ 2024, 6:41 IST
ಉದ್ಘಾಟನೆ ಭಾಗ್ಯವಿಲ್ಲದ ತಲಕಾಡು ತಾಯಿ ಮಗು ಆಸ್ಪತ್ರೆ.
ಉದ್ಘಾಟನೆ ಭಾಗ್ಯವಿಲ್ಲದ ತಲಕಾಡು ತಾಯಿ ಮಗು ಆಸ್ಪತ್ರೆ.   

ತಲಕಾಡು: ಹೋಬಳಿಯಲ್ಲಿ ಜನರು ಆಸ್ಪತ್ರೆ ಇಲ್ಲದೆ ಪರದಾಡುತ್ತಿದ್ದು, ಐದು ವರ್ಷದ ಹಿಂದೆ ನಿರ್ಮಾಣವಾಗಿರುವ ಆಸ್ಪತ್ರೆ ಇನ್ನೂ ಉದ್ಘಾಟನೆಯಾಗದೆ, ಇಲ್ಲಿ ಹಾವು, ಚೇಳುಗಳ ವಾಸ ಸ್ಥಾನವಾಗಿದೆ.

ತಿ.ನರಸೀಪುರ ತಾಲ್ಲೂಕಿನ ಪ್ರಮುಖ ಹೋಬಳಿಯಾಗಿದ್ದು, ಸುಮಾರು 21 ಹಳ್ಳಿಗಳು ಈ ವ್ಯಾಪ್ತಿಗೆ ಸೇರುತ್ತದೆ. 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಜನಸಂಖ್ಯೆಗೆ ಅನುಗುಣವಾಗಿ ₹7 ಕೋಟಿಗೂ ಅಧಿಕ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಿದ್ದರೂ ಈಗ ಇಬ್ಬರು ‘ಡಿ’ಗ್ರೂಪ್ ನೌಕರರು ಮಾತ್ರ ಇಲ್ಲಿದ್ದಾರೆ.

ಈ ವಿಷಯವಾಗಿ ಜಿಲ್ಲಾ ವೈದ್ಯಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳ ಜೊತೆ ‘ಪ್ರಜಾವಾಣಿ’‌ ಮಾತನಾಡಿದಾಗ ಬರುವ ಉತ್ತರ, ‘ಮಂತ್ರಿಗಳು ದಿನಾಂಕ ನಿಗದಿ ಮಾಡಿದ ಬಳಿಕವಷ್ಟೇ ಉದ್ಘಾಟನೆ ಸಾಧ್ಯ’ ಎಂದು ಹೇಳುತ್ತಾರೆ.

ADVERTISEMENT

ಹೋಬಳಿಗೆ ಇರುವುದು ಸರ್ಕಾರಿ ತಾಯಿ ಮಗು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಮಾತ್ರ. ಇವುಗಳನ್ನು ಹೊರತುಪಡಿಸಿ ದೊಡ್ಡ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ, ಕ್ಲಿನಿಕ್‌‌‌ ಇಲ್ಲಿ ಇಲ್ಲ. ಸಾರ್ವಜನಿಕರು ಆರೋಗ್ಯ ಸೇವೆಗಳಿಗಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ.

 ಇಲ್ಲಿ ಕಳೆದ ಐದು ವರ್ಷಗಳಿಂದ ವೈದ್ಯರ ಸಮಸ್ಯೆ ಕಾಡುತ್ತಿದ್ದು ಸ್ಥಾನಿಕವಾಗಿ 5 ವೈದ್ಯರ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇಲ್ಲಿರುವುದು ದಂತ ವೈದ್ಯರು, ಮತ್ತೊಬ್ಬರು ಮಕ್ಕಳ ವೈದ್ಯರು ಮಾತ್ರ. ಇತರೆ ನುರಿತ ವೈದ್ಯರಿಲ್ಲದೆ, ಆರೋಗ್ಯ ಸೇವೆ ಪಡೆಯಲು ಇಲ್ಲಿನ ಜನ ಪರದಾಡುವ ಸ್ಥಿತಿ ಎದುರಾಗಿದೆ.

ರಾತ್ರಿ ಸಮಯ ವೈದ್ಯರಿಲ್ಲದೆ ಅಪಘಾತದಲ್ಲಿ ಗಾಯಗೊಂಡವರು, ತುರ್ತು ಚಿಕಿತ್ಸೆಗಾಗಿ ಬರುವ ರೋಗಿಗಳು ಬಹಳಷ್ಟು ಮಂದಿ ಸೇವೆ ಸಿಗದೆ ನರಳಿ ನರಳಿ ಒದ್ದಾಡುವುದು ಮಾಮೂಲಿಯಾಗಿದೆ.

ಈ ಅನಾನುಕೂಲದಿಂದ ಬಹಳಷ್ಟು ಮಂದಿ ಮೆಡಿಕಲ್ ಸ್ಟೋರ್‌‌‌ನಲ್ಲಿ ಸಿಗುವ ಔಷಧಗಳನ್ನು ಪಡೆದು ರೋಗ ವಾಸಿ ಮಾಡಿಕೊಳ್ಳುವ ದುಃಸ್ಥಿತಿಗೆ ತಲುಪಿದ್ದಾರೆ. ಮಾತ್ರೆ ಸಿಗದವರು ಕೆಲವೊಮ್ಮೆ ಆರೋಗ್ಯದಲ್ಲಿ ಏರುಪೇರಾಗಿರುವ ಘಟನೆ ನಡೆದಿವೆ.

ಸಾಮಾನ್ಯ ಕಾಯಿಲೆಗಳಾದ ಜ್ವರ, ತಲೆನೋವು, ನೆಗಡಿ ಬಾಧೆಗೆ ಜನರು ತಾಲ್ಲೂಕಿನ ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರ ಲೆಕ್ಕದಲ್ಲಿ ಖರ್ಚು ಮಾಡಿ ಆರೋಗ್ಯ ಸುಧಾರಿಸಿಕೊಳ್ಳುವ ಸ್ಥಿತಿ ಇದೆ. ಪ್ರತಿನಿತ್ಯ ಸಮುದಾಯ ಅರೋಗ್ಯ ಕೇಂದ್ರಕ್ಕೆ 250ರಿಂದ 400 ಹೊರರೋಗಿಗಳು ಆಗಮಿಸುತ್ತಾರೆ.

ಇರುವ ವೈದ್ಯರು ದೊಡ್ಡ ಸಂಖ್ಯೆಯ ರೋಗಿಗಳ ಆರೋಗ್ಯ ತಪಾಸಣೆ ಮಾಡಿ ಹೈರಾಣಾಗಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಈ ವೈದ್ಯರೂ ಬೇರೆ ಕಡೆ ವರ್ಗಾವಣೆಗೊಂಡರೆ ಪರಿಸ್ಥಿತಿ ಇನ್ನೂ ಹದೆಗೆಡುವ ಸ್ಥಿತಿ ಇದೆ.

 ಇಲ್ಲಿ ವೈದ್ಯರ ಸಮಸ್ಯೆಯಿಂದಾಗಿ ಬಹುತೇಕ ಹೆರಿಗೆಗಳು, ಡೆಂಗಿ ಮತ್ತಿತರೆ ಆರೋಗ್ಯ ಚಿಕಿತ್ಸೆಗಾಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಖಾಸಗಿ ನರ್ಸಿಂಗ್ ಹೋಮ್ ಕಡೆಗೆ ಮುಖ ಮಾಡಿದ್ದಾರೆ.

ಹೆರಿಗೆಗಾಗಿ ನಿರ್ಮಾಣಗೊಂಡಿರುವ ತಾಯಿ ಮಗು ಆಸ್ಪತ್ರೆಯಿಂದ ಬಾರಿ ನಿರೀಕ್ಷೆಯಲ್ಲಿದ್ದ ಹೋಬಳಿ ಜನರಿಗೆ ಈಗ ನಿರಾಸೆಯಾಗಿದೆ. ಆಸ್ಪತ್ರೆ ಆವರಣ ಗಿಡಗಂಟೆಗಳಿಂದ ತುಂಬಿದೆ. 

ನರೇಂದ್ರ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ತಲಕಾಡು.

ಆಸ್ಪತ್ರೆಗೆ ಬೇಕಾಗಿರುವ ವೈದ್ಯರ ಲಭ್ಯತೆಯ ಬಗ್ಗೆ ಮೇಲಿನ ಅಧಿಕಾರಿ ಗಳ ಗಮನಕ್ಕೂ ಪತ್ರ ವ್ಯವಹಾರ ಮಾಡಲಾಗಿದೆ ನಮ್ಮ ಆಸ್ಪತ್ರೆ ಗೆ ವೈದ್ಯರ ಅವಶ್ಯಕತೆ ತುಂಬಾನೇ ಇದೆ.... ಡಾ. ಜ್ಯೋತಿ

-ಆಡಳಿತ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ತಲಕಾಡು.

‘ವೈದ್ಯರೇ ‌ತಲಕಾಡು ಆಸ್ಪತ್ರೆಗೆ ಬನ್ನಿ’ ತಲಕಾಡಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೊಸ ವೈದ್ಯರು ಬರುವುದಕ್ಕೆ ಹಿಂದೇಟು ಹಾಕುತ್ತಿರುವುದು ತಿಳಿದು ಬೇಸರ ತಂದಿದೆ. ತಲಕಾಡಿರುವುದು ಕರ್ನಾಟಕದಲ್ಲೇ ಪಾಕಿಸ್ತಾನ ಬಾಂಗ್ಲಾದಲ್ಲಿ ಇಲ್ಲ. ಇಲ್ಲಿನ ಜನರಿಗೆ ಆರೋಗ್ಯ ಸೇವೆ ಅವಶ್ಯಕತೆ ಇದೆ. ದಯಮಾಡಿ ವೈದ್ಯರು ತಲಕಾಡಿಗೆ ಸಮುದಾಯ ಅರೋಗ್ಯ ಕೇಂದ್ರ ಮುಖ ಮಾಡಬೇಕೆಂದು ಪ್ರಾರ್ಥನೆ. ನರೇಂದ್ರ ಅಧ್ಯಕ್ಷರು ನಾಗರಿಕ ಸೇವಾ ಸಮಿತಿ ತಲಕಾಡು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.