ADVERTISEMENT

ಕಟುಕರಿಗೆ ಕಣ್ಣೀರು ಬರದು: ನಿಖಿಲ್ ಬಗ್ಗೆ ವ್ಯಂಗ್ಯವಾಡಿದವರಿಗೆ HDK ತಿರುಗೇಟು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2024, 6:45 IST
Last Updated 2 ನವೆಂಬರ್ 2024, 6:45 IST
<div class="paragraphs"><p> ಚಾಮುಂಡೇಶ್ವರಿ ದೇವಾಲಯದಲ್ಲಿ  ವಿಶೇಷ ಪೂಜೆ ಸಲ್ಲಿಸಿದ&nbsp;ಎಚ್.ಡಿ‌.ಕುಮಾರಸ್ವಾಮಿ</p></div>

ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಎಚ್.ಡಿ‌.ಕುಮಾರಸ್ವಾಮಿ

   

- ಪ್ರಜಾವಾಣಿ ಚಿತ್ರ

ಮೈಸೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ, ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಮತಯಾಚನೆ ವೇಳೆ ಕಣ್ಣೀರು ಹಾಕಿದ್ದನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ ಕೇಂದ್ರ ಸಚಿವ ಎಚ್.ಡಿ‌.ಕುಮಾರಸ್ವಾಮಿ, 'ಕಟುಕರಿಗೆ ಕಣ್ಣೀರು ಬರುವುದಿಲ್ಲ' ಎಂದು ಹೇಳಿದರು.

ADVERTISEMENT

ಇಲ್ಲಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಶನಿವಾರ ಮಗನ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ರಾಜಕಾರಣದಲ್ಲಿ ಕೆಲವರು ಕಟುಕರಿದ್ದಾರೆ. ಅವರಿಗೆ ಕಣ್ಣೀರು ಬರುವುದಿಲ್ಲ. ಭಯ-ಭಕ್ತಿ ಇಲ್ಲದ ಅವರಿಗೆ ಕಣ್ಣೀರು ಬಾರದು. ನಮಗೆ ಜನರ ಕಷ್ಟ ನೋಡಿದರೆ ಕಣ್ಣೀರು ಬರುತ್ತದೆ ಎಂದರು.

ನಾನೂ ಹಲವು ಬಾರಿ ಕಣ್ಣೀರು ಹಾಕಿದ್ದೇನೆ. ಜನರ ಸಮಸ್ಯೆ ನೋಡಿ ಕಣ್ಣೀರು ಹಾಕಿದ್ದೇನೆ. ಅದನ್ನು ಮಾಡಿರುವುದು ಅನುಕಂಪ‌ ಗಿಟ್ಟಿಸಿಕೊಳ್ಳುವುದಕ್ಕಲ್ಲ. ಜನರ ಸಮಸ್ಯೆ ಕಂಡಾಗ, ಮಾತೃ ಹೃದಯ ಇದ್ದವರಿಗೆ ಕಣ್ಣೀರು ಬರುತ್ತದೆ ಎಂದರು.

ಚನ್ನಪಟ್ಟಣ ಉಪ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದೆ. ಚಾಮುಂಡಿ ತಾಯಿಯ ಆಶೀರ್ವಾದದಿಂದ ಈ ಬಾರಿ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ಚನ್ನಪಟ್ಟಣದಲ್ಲಿ ಈ ಬಾರಿ ಚಕ್ರವ್ಯೂಹ ರಚಿಸಲು ಕೆಲವರು ಆರಂಭದಲ್ಲಿ ಪ್ರಯತ್ನ ಮಾಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಪಕ್ಷದ ಹಿತ ದೃಷ್ಟಿಯಿಂದ ಈ ಬಾರಿ ನಿಖಿಲ್ ಸ್ಪರ್ಧೆ ಅನಿರ್ವಾಯವಾಯಿತು ಎಂದರು.

ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರಿಗೆ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಿದೆ. ಹೀಗಾಗಿ, ಅವರು ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರು ನಿಖಿಲ್ ಗೆಲುವಿಗೆ ಶ್ರಮಿಸುತ್ತಾರೆ ಎಂದು ವಿಶ್ವಾಸ ವ್ಯಕಪಡಿಸಿದರು.

ಮುಖ್ಯಮಂತ್ರಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜಕೀಯ ಪುಡಾರಿ ಎಂದು ಕರೆದಿದ್ದಾರೆ. ಇವರು ಯಾವ ರೀತಿ ಮಾತನಾಡುತ್ತಿದ್ದಾರೆ? ಅವರನ್ನು ಪುಡಾರಿ ಎನ್ನುವುದಾದರೆ, ಇವರೂ ಅದೇ ರೀತಿ ಮಾತನಾಡುತ್ತಿದ್ದಾರಲ್ಲವೇ? ಎಂದು ‌ಕೇಳಿದರು.

ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಡಿಸಿಎಂ‌ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪರಮೇಶ್ವರ ಅವರು, ಮುಂದುವರೆಯುತ್ತದೆ ಎಂದು ಹೇಳುವುದಿಲ್ಲ; ಮುಂದಿನ ಮೂರು ವರ್ಷ ನಡೆಸುತ್ತೇವೆ ಎನ್ನುತ್ತಾರೆ. ಜನರೇ ಬೇಡ ಎನ್ನುತ್ತಿದ್ದಾರೆ ಎಂದು ಹೇಳಿ ಸಬೂಬು ಕೊಡುವ ಕೆಲಸವೂ ನಡೆಯುತ್ತಿದೆ. ರಾಜ್ಯವನ್ನು ಈ ಸರ್ಕಾರದವರು ದಿವಾಳಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಚರ್ಚೆ ಜನರಲ್ಲಿ ನಡೆಯುತ್ತಿದೆ. ಆದರೆ, ಜನರು ರಾಜ್ಯವನ್ನು ದಿವಾಳಿಯತ್ತ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದರು.

ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಮಾಡಬಹುದು. ಆದರೆ, ಕಾಂಗ್ರೆಸ್‌ಗೆ ಅದು ಬೇಕಾಗಿಲ್ಲ. ಅದಕ್ಕಾಗಿ ಕೆಲವು ಯೋಜನೆ ಸ್ಥಗಿತಗೊಳಿಸುತ್ತೇವೆ ಎನ್ನುತ್ತಾರೆ. ನಂತರ ಸ್ಪಷ್ಟನೆ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.

ಈ ಕಾಂಗ್ರೆಸ್ ಸರ್ಕಾರದ ಸ್ಥಿತಿ ದೀಪಕ್ಕೆ ಸಿಲುಕಿದ ಪತಂಗದಂತಾಗಿದೆ. ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿಕೊಳ್ಳುತ್ತಿದೆ. ಒಂದು ತಪ್ಪು ಮುಚ್ಚಿಕೊಳ್ಳಲು ಮತ್ತೊಂದು ತಪ್ಪು ಮಾಡುತ್ತಿದೆ. ಮುಡಾ ಪ್ರಕರಣ, ವಕ್ಫ್ ಸೇರಿದಂತೆ ಎಲ್ಲದರಲ್ಲೂ ತಪ್ಪಿನ ಮೇಲೆ ತಪ್ಪು ನಡೆಯುತ್ತಿದೆ. ಹಾಗೆಂದು, ಈ ವಿಚಾರಗಳು ಉಪ ಚುನಾವಣೆ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳುವುದಿಲ್ಲ. ಉಪಚುನಾವಣೆ ನಡೆಯುವ ರೀತಿಯೇ ಬೇರೆ. ಹಣ ಬಲ, ವೈಯುಕ್ತಿಕ ಬಲ ಹಾಗೂ ಅಧಿಕಾರ ದುರುಪಯೋಗ ಎಲ್ಲವೂ ಇರುತ್ತದೆ. ಹೀಗಿದ್ದರೂ ಮೂರೂ ಕ್ಷೇತ್ರಗಳಲ್ಲುಇ ಎನ್.ಡಿ.ಎ. ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.

ಜಿ.ಟಿ.ದೇವೇಗೌಡರು ಪ್ರಚಾರಕ್ಕೆ ಬಾರದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಪ್ರಚಾರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ‌. ಹೀಗಾಗಿ ಜಿ.ಟಿ.ದೇವೆಗೌಡರು 2ನೇ ಹಂತದ ನಾಯಕರಿಗೆ ಅವಕಾಶ ಕಲ್ಪಿಸಿದ್ದಾರೆ‌. ಆ ಬಗ್ಗೆ ಮುಂದೆ ಹೆಚ್ಚು ಮಾತನಾಡೋಣ. ಈಗ ಯಾಕೆ ಈ ವಿಚಾರ? ಸದ್ಯಕ್ಕೆ ಇಷ್ಟೇ ಸಾಕು. ಜಿಟಿಡಿ ವಿಚಾರದಲ್ಲಿ ಏನೇನು ಆಗುತ್ತಿದೆ ಎಂಬುದು ಮಾಧ್ಯಮದವರಿಗೆ ಚೆನ್ನಾಗಿ ಗೊತ್ತಿದೆ. ಅದನ್ನೇ ಯಾಕೆ ನನ್ನ ಬಳಿ ಮತ್ತೆ ಮತ್ತೆ ಕೇಳುತ್ತಿದ್ದೀರಿ?' ಎಂದರು.

ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.