ತಿಂಗಳ ಹಿಂದಷ್ಟೇ (ಮೇ 18) ಕೋವಿಡ್–19 ನನ್ನಪ್ಪನನ್ನು ಬಲಿ ತೆಗೆದುಕೊಂಡಿತು. 74ರ ಹರೆಯದಲ್ಲೂ ಬತ್ತದ ಉತ್ಸಾಹ ಅವರದ್ದು.
ಅಪ್ಪನಿಲ್ಲದೇ ಇರುವುದನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ. ಒಂದೊಂದು ದಿನ ಕಳೆಯೋದೂ ಕಷ್ಟವಾಗಿದೆ. ನನಗೆ 35 ವರ್ಷವಾದರೂ ಕಾಳಜಿ ಮಾಡುತ್ತಿದ್ದರು. ಆಫೀಸ್‌ನಿಂದ ಮನೆಗೆ ಬರುವುದು ಸ್ವಲ್ಪ ತಡವಾದರೂ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು.
ನಿತ್ಯವೂ ಸಂಜೆಯಿಂದ ರಾತ್ರಿ 11ರವರೆಗೆ ನಮ್ಮದೇ ಲೋಕವಾಗಿತ್ತು. ಕಚೇರಿಯಿಂದ ಬಂದೊಡನೆ, ಲೋಕಾಭಿರಾಮದ ಮಾತುಕತೆ ನಡೆಯುತ್ತಿತ್ತು. ಈಚೆಗಿನ ದಿನಗಳಲ್ಲಿ,ಕೋವಿಡ್ ಜಾಗೃತಿ ಮಾತನ್ನು ಅಪ್ಪ ಹೇಳುತ್ತಿದ್ದರು.
‘ನೀನು ಹೊರಗೆ ಓಡಾಡುವವನು. ಸದಾ ಎಚ್ಚರಿಕೆಯಿಂದ ಇರಬೇಕು’ ಎಂದು ನಿತ್ಯವೂಕಿವಿಮಾತು ಹೇಳೋರು. ಇದರ ನಡುವೆಯೇತಾತ–ಮೊಮ್ಮಗನ (ನನ್ನ ಮಗ) ಆಟ ಕಣ್ತುಂಬಿಕೊಳ್ಳುವುದೇ ನನಗೆ ಮಹದಾನಂದವಾಗಿತ್ತು. ರಾತ್ರಿಯ ಊಟವನ್ನು ಒಟ್ಟಿಗೇ ಮಾಡುತ್ತಿದ್ದೆವು. ಒಂದು ದಿನವೂ ಇದು ತಪ್ಪಿರಲಿಲ್ಲ.
ನಾನು ಮತ್ತು ನನ್ನ ಪತ್ನಿ, ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಲೇಬೇಕು. ಆಗ ನಮ್ಮ ಒಂದು ಮುಕ್ಕಾಲು ವರ್ಷದ ಮಗನಿಗೆ ತಾತನೇ ಪ್ರಪಂಚ. ದಿನವಿಡೀ ಅವರೊಂದಿಗೆ ಆಟವಾಡಿಕೊಂಡಿರುತ್ತಿದ್ದ. ಕೋವಿಡ್‌ನಿಂದ ನನ್ನಪ್ಪ ಹೋಗಿಬಿಟ್ಟರು. ಇದೀಗ ನನ್ನ ಮಗ, ನನ್ನಮ್ಮನ ಮಡಿಲಲ್ಲಿದ್ದರೂ ’ತಾತ, ತಾತ‘ ಎಂಬ ತೊದಲು ನುಡಿಯಲ್ಲಿ ಮನೆಯ ಎಲ್ಲೆಡೆ ನನ್ನಪ್ಪನನ್ನು ಹುಡುಕುತ್ತಾನೆ. ಆಗ ನನ್ನ, ನನ್ನಮ್ಮನ ಕರುಳು ಕಿತ್ತು ಬರುತ್ತೆ...
ಈಗಷ್ಟೇ ನಮ್ಮ ಬದುಕು ಹಳಿಗೆ ಬರುತ್ತಿತ್ತು. ಮೂವರು ಅಕ್ಕಂದಿರ ಜೀವನವೂ ಸುಸ್ಥಿತಿಯಲ್ಲಿತ್ತು. ನನ್ನ ಭವಿಷ್ಯವನ್ನು ಅಪ್ಪನ ಮಾರ್ಗದರ್ಶನದಲ್ಲೇ ಕಟ್ಟಿಕೊಳ್ಳುವ ಕನಸನ್ನು ಕೋವಿಡ್ ಕಮರಿಸಿಬಿಟ್ಟಿದೆ. ಅಪ್ಪನಿಲ್ಲ ಎಂಬುದನ್ನು ನನ್ನ ಮನಸ್ಸು ಇನ್ನೂ ಒಪ್ಪಿಕೊಳ್ಳುತ್ತಿಲ್ಲ.
- ಕೆ.ಹರೀಶ್‌ಕುಮಾರ್, ಜನತಾ ನಗರ, ಮೈಸೂರು
ನಿರೂಪಣೆ: ಡಿ.ಬಿ.ನಾಗರಾಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.