ಮೈಸೂರು: ‘ಫೆಡರೇಷನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ನ.20ರಂದು ಕರೆನೀಡಿರುವ ‘ಮದ್ಯದಂಗಡಿ ಬಂದ್’ಗೆ ನಮ್ಮ ಬೆಂಬಲವಿಲ್ಲ. ಅಂದು ನಾವು ವ್ಯವಹಾರ ನಡೆಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಲಿಕ್ಕರ್ ಮರ್ಚೆಂಟ್ ಡೆವಲಪ್‌ಮೆಂಟ್ ಕೋ–ಅಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್.ಚಂದ್ರಶೇಖರ್ ತಿಳಿಸಿದರು.
‘ಇಲ್ಲಿ ಶುಕ್ರವಾರ ನಡೆದ ಮೈಸೂರು–ಚಾಮರಾಜನಗರ ಜಿಲ್ಲೆಯ ಸನ್ನದುದಾರರ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘2002–2003ರಲ್ಲಿ ನೋಂದಣಿಯಾದ ಫೆಡರೇಷನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ಸಂಘವು ಬಳಿಕ ನವೀಕರಣ ಮಾಡಿಕೊಂಡಿಲ್ಲ. ಹೀಗಾಗಿ ಅದು ಅಸ್ತಿತ್ವದಲ್ಲಿಲ್ಲ ಎಂದು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯೇ ದೃಢೀಕರಣ ಪತ್ರ ನೀಡಿದೆ. ಅದರ ಅಧ್ಯಕ್ಷ ಗುರುಸ್ವಾಮಿ ಮತ್ತು ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ ಅವರ ವೈಯಕ್ತಿಕ ಲಾಭಕ್ಕಾಗಿ ಬಂದ್‌ಗೆ ಕರೆ ನೀಡಿದ್ದಾರೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದೇವೆ’ ಎಂದರು.
‘ಸನ್ನದುದಾರರಿಂದ ಹಫ್ತಾ ವಸೂಲಿ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಬೆದರಿಕೆ ಒಡ್ಡಲು ಹಾಗೂ ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ಗುರುಸ್ವಾಮಿ ಸಂಘ ಮಾಡಿಕೊಂಡಿದ್ದಾರೆ. ಅವರಿಂದ ಸನ್ನದುದಾರರಿಗೆ ಯಾವುದೇ ಲಾಭವಾಗಿಲ್ಲ. ಅಧಿಕಾರಿಗಳ ವರ್ಗಾವಣೆ ಸರ್ಕಾರದ ನಿರ್ಧಾರ. ಆ ಸಂಘವು ಅಧಿಕಾರಿ ಹಾಗೂ ಸಚಿವರಿಗೆ ₹500 ಕೋಟಿಯಿಂದ ₹600 ಕೋಟಿಯಷ್ಟು ಹಣ ನೀಡಿದ್ದೇವೆ ಎಂದು ಹೇಳಿಕೆ ಕೊಟ್ಟಿರುವುದು ಸತ್ಯಕ್ಕೆ ದೂರವಾದುದು’ ಎಂದು ಹೇಳಿದರು.
‘ಸಂಘವು ಮಾಡಿದ ಸುಳ್ಳು ಆರೋಪವು ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿ ಪ್ರತಿಧ್ವನಿಸಿ, ಸನ್ನದುದಾರರು ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಸರ್ಕಾರಕ್ಕೆ ಹಣ ನೀಡಿದ ದಾಖಲೆ ಇದ್ದರೆ ಬಹಿರಂಗಪಡಿಸಿದರೆ ನಾವೂ ಅವರ ಜೊತೆಗೆ ನಿಲ್ಲುತ್ತೇವೆ. ಅದು ಸಾಧ್ಯವಾಗದಿದ್ದರೆ ಆರೋಪ ಸುಳ್ಳು ಎಂಬುದನ್ನು ಒಪ್ಪಿಕೊಳ್ಳಲಿ. ಇಲ್ಲದಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಸನ್ನದುದಾರ ದೇವರಾಜು ಮಾತನಾಡಿ, ‘ನಾವು ಐದು ಅಂಶಗಳ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅದರ ಹೊರತಾಗಿ ವೈಯಕ್ತಿಕ ಲಾಭಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ. ನ.20ರಂದು ನಮ್ಮ ವ್ಯವಹಾರಕ್ಕೆ ತೊಂದರೆ ಮಾಡಿದರೆ ಪೊಲೀಸರಿಗೆ ದೂರು ನೀಡುತ್ತೇವೆ. ರಾಜ್ಯದ ಎಲ್ಲಾ ಭಾಗದಲ್ಲೂ ಇದೇ ರೀತಿ ಸಭೆ ನಡೆಸಿ, ಬಂದ್ ವಿರೋಧಿಸಲಿದ್ದೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.