ADVERTISEMENT

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ| ವಿಚಾರಣೆಗೆ ಹಾಜರಾಗಲು ಕುಲಪತಿಗೆ ನೋಟಿಸ್

ಮಾಹಿತಿ ನೀಡದ ಕೆಎಸ್‌ಒಯು: ರಾಜ್ಯ ಮಾಹಿತಿ ಆಯೋಗ ಕ್ರಮ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 14:50 IST
Last Updated 27 ಅಕ್ಟೋಬರ್ 2024, 14:50 IST

ಮೈಸೂರು: ಅರ್ಜಿದಾರರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಮಾಹಿತಿ ನೀಡದ್ದರಿಂದ ಇಲ್ಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರು ಖುದ್ದಾಗಿ ನ.6ರಂದು ವಿಚಾರಣೆಗೆ ಹಾಜರಾಗುವಂತೆ ‘ರಾಜ್ಯ ಮಾಹಿತಿ ಆಯೋಗ’ವು ನೋಟಿಸ್‌ ನೀಡಿದೆ. ಹೀಗೆ ಖುದ್ದು ಹಾಜರಾಗುವಂತೆ ಆಯೋಗವು ಕುಲಪತಿಯೊಬ್ಬರಿಗೆ ಸೂಚಿಸಿರುವುದು ಇದೇ ಮೊದಲು ಎನ್ನಲಾಗಿದೆ.

‘ಕುಲಸಚಿವರ ವಿಭಾಗಕ್ಕೆ 2023ರ ಜ.10ರಿಂದ ಜ.20ರವರೆಗೆ ಬಂದಿರುವ ಅಂಚೆ ಅಥವಾ ಖುದ್ದಾಗಿ ಬಂದ ಪತ್ರಗಳ ಸ್ವೀಕೃತಿಯ ದಾಖಲಾತಿ ‍ಪುಸ್ತಕದ ದೃಢೀಕೃತ ಪ್ರತಿಗಳನ್ನು ನೀಡಬೇಕು’ ಎಂದು ಇಲ್ಲಿನ ವಿಜಯನಗರ ನಿವಾಸಿ ಆರ್.ಎನ್‌.ಸತ್ಯನಾರಾಯಣ ಅವರು 2024ರ ಮೇ.6ರಂದು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ವಿಶ್ವವಿದ್ಯಾಲಯ ಉತ್ತರ ನೀಡಿರಲಿಲ್ಲ.

ಮಾಹಿತಿಯನ್ನು ಕಾಲಮಿತಿಯಲ್ಲಿ ನೀಡದೇ, ಕಚೇರಿಗೆ ಅಲೆದಾಡಿಸಿದ್ದಾರೆಂದು ಅರ್ಜಿದಾರರು, 2024ರ ಜುಲೈ 7ರಂದು ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು. ಆಗ ವಿಶ್ವವಿದ್ಯಾಲಯದವರು, ಮಾಹಿತಿ ನೀಡಲು ಆಗುವುದಿಲ್ಲವೆಂದು ಹೇಳಿದ್ದರು. ಆದರೆ, ಯಾವ ನಿಯಮದಡಿ ಮಾಹಿತಿ ನೀಡಲು ಬರುವುದಿಲ್ಲವೆಂದು ಹೇಳಿರಲಿಲ್ಲ. ಇದನ್ನು ಪ್ರಶ್ನಿಸಿ ಸತ್ಯನಾರಾಯಣ ಆಯೋಗಕ್ಕೆ ದೂರು ನೀಡಿದ್ದರು.

ADVERTISEMENT

ಇದನ್ನು ಆಧರಿಸಿ ಆಯೋಗವು, ಕುಲಪತಿ ಹಾಗೂ ಕುಲಸಚಿವ ಇಬ್ಬರೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರು ಹಾಗೂ ವಿಳಾಸವನ್ನು ಕಡ್ಡಾಯವಾಗಿ ತರುವಂತೆಯೂ ತಿಳಿಸಿದೆ.

‘ಕೆಎಸ್‌ಒಯು ಅಧಿಕಾರಿಗಳು 30 ದಿನಗಳ ಕಾಲಮಿತಿಯಲ್ಲಿ ಮಾಹಿತಿ ನೀಡದೇ ನನ್ನನ್ನು ಕಚೇರಿಗೆ ಅಲೆದಾಡಿಸಿದ್ದಾರೆ. ಹೀಗಾಗಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದೆ. ಪ್ರತಿನಿಧಿ ಕಳುಹಿಸದೇ ನೇರವಾಗಿ ವಿಚಾರಣೆಗೆ ಕುಲಪತಿಯೇ ಹಾಜರಾಗುವಂತೆ ಆಯೋಗ ಹೇಳಿರುವುದು ಆರ್‌ಟಿಐ ಇತಿಹಾಸದಲ್ಲಿ ಇದೇ ಮೊದಲ ಬಾರಿಯಾಗಿದೆ’ ಎಂದು ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.